
ಕೋವಿಡ್ ನತ್ತ ಸರ್ಕಾರ ಮುಂಜಾಗ್ರತೆ ವಹಿಸಲಿ: ವಾಟಾಳ್
ಚಾಮರಾಜನಗರ: ಚೀನಾದಲ್ಲಿ ಮತ್ತೆ ಕೊರೊನಾ ಹೆಚ್ಚಳವಾಗಿರುವುದರಿಂದ ಕರ್ನಾಟಕ ಸರ್ಕಾರ ಮುನ್ನೆಚ್ಚರಿಕೆ ವಹಿಸಿಸಬೇಕು ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು.
ನಗರದ ದೊಡ್ಡರಾಯಪೇಟೆ ಕ್ರಾಸ್ ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾ ತೀವ್ರವಾಗಿ ಹರಡುವ ಸೂಚನೆ ಇದೆ. ಚೀನಾದಲ್ಲಿ ಲಕ್ಷಾಂತರ ಜನ ಸಾವನ್ನಪ್ಪಿದ್ದಾರೆ. ಬೇರೆ ಬೇರೆ ದೇಶಗಳಲ್ಲೂ ಕೊರೋನಾ ಹರಡುತ್ತಿದೆ. ಇದರಿಂದ ಕರ್ನಾಟಕದಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದರು.
ರಾಜ್ಯದ ಆಸ್ಪತ್ರೆಗಳು ಸುಸಜ್ಜಿತವಾಗಬೇಕು. ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಸಜ್ಜಾಗಬೇಕಿದೆ. ಇಡೀ ಕರ್ನಾಟಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಜನರ ಸೇವೆಗೆ ಸಿದ್ದರಾಗಬೇಕಿದೆ. ಆಮ್ಲಜನಿಕ ಬಹಳ ಪ್ರಾಮುಖ್ಯವಾಗಿದೆ. ಸರ್ಕಾರ ಕೊನೆಗಳಿಗೆಯಲ್ಲಿ ಬಾವಿ ತೊಡುವುದು ಬೇಡ. ಆಮ್ಲಜನಿಕ ವೆಂಟಿಲೇಟರ್ ಮಂಚ, ಹಾಸಿಗೆ ಸಿದ್ದತೆ ಮಾಡಿಕೊಳ್ಳಬೇಕು, ಪ್ರತಿ ಹೋಬಳಿಗೊಂದು ಆಂಬ್ಯುಲೆನ್ಸ್ ಕಡ್ಡಾಯ ಕೊಡಬೇಕು. ಮಾನಿಟರ್ ಮಾಡುವುದಕ್ಕೆ ಇಡೀ ರಾಜ್ಯದಲ್ಲಿ ಸರ್ವ ಪಕ್ಷಗಳ ರಾಜ್ಯ ಸಮಿತಿ ರಚನೆ ಆಗಬೇಕು. ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರಬೇಕು. ಎಲ್ಲ ವಿರೋಧ ಪಕ್ಷದವರು ಸಮಿತಿಯಲ್ಲಿ ಇರಬೇಕು ಎಂದರು.
ಜಿಲ್ಲಾ, ತಾಲೂಕು ಮಟ್ಟದಲ್ಲೂ ಸರ್ವ ಪಕ್ಷಗಳ ಸಮಿತಿ ರಚನೆ ಆಗಬೇಕು ಬಹಳ ಎಚ್ಚರ ವಹಿಸಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಲೇಬೇಕು ಇದರಿಂದ ಯಾರೂ ತಪ್ಪಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಜಾತ್ರೆ, ದೇವಸ್ಥಾನ, ಸಂತೆ, ಶಾಲಾ, ಕಾಲೇಜುಗಳು, ಕಚೇರಿಗಳು ಸೇರಿದಂತೆ ಎಲ್ಲಕಡೆ ಮಾಸ್ಕ್ ಕಡ್ಡಾಯವಾಗಿರಬೇಕು ಹೊರಗಡೆಯಿಂದ ಬರುವವರನ್ನು ಸಂಪೂರ್ಣವಾಗಿ ತಪಾಸಣೆ ಮಾಡಬೇಕು ಎಂದರು.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಿಕವಿಲ್ಲದೆ 27 ಜನ ಸತ್ತರು. ಅವರಿಗೆ ಪರಿಹಾರ ಕೊಟ್ಟಿಲ್ಲ. ಕೇಳುವವರಿಲ್ಲ. ಸರ್ಕಾರವೂ ಕಣ್ಣುಮುಚ್ಚಿ ಕುಳಿತುಕೊಂಡಿದೆ. ವಿರೋಧ, ಜಿಲ್ಲಾಡಳಿತ ಇಲ್ಲ ಮೃತರ ಕುಟುಂಬದ ಗತಿಯೇನು? ಅವರಿಗೆ ಕನಿಷ್ಠ 25 ಲಕ್ಷ ಪರಿಹಾರ ನೀಡಬೇಕು ಆಗ್ರಹಿಸಿದರು. ಚಾಮರಾಜನಗರದ ಆಸ್ಪತ್ರೆಗಳು ಸನ್ನದ್ದವಾಗಿರಬೇಕು. ಸಮಾರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು ಮತ್ತೆ ನಿರ್ಲಕ್ಷ್ಯ ವಹಿಸಿದರೆ ಅಪಾಯ ಕಾದಿದೆ. ಅಪಾಯದಿಂದ ಪಾರಾಗಲು ಮೊದಲು ಎಚ್ಚರ ವಹಿಸಬೇಕು ಸರ್ಕಾರ ದಿನದ 24 ಗಂಟೆಯೂ ಕಣ್ಣಿನ ಮೇಲೆ ಕಣ್ಣಿಟ್ಟು ಕೆಲಸ ಮಾಡಬೇಕು ಮುಖ್ಯಮಂತ್ರಿಗಳೇ ಮಾನಿಟರ್ ಮಾಡಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಜಯ್, ಸಂಜಯ್, ರೇವಣ್ಣಸ್ವಾಮಿ, ಗೋಪಾಲನಾಯಕ, ಹುಂಡಿಬಸವಣ್ಣ, ಶಿವಲಿಂಗಮೂರ್ತಿ, ಪ್ರಕಾಶ್, ಚನ್ನಂಜಪ್ಪ, ಪಾರ್ಥಸಾರಥಿ ಇತರರು ಹಾಜರಿದ್ದರು.