ಕೋವಿಡ್ ನಿಯಮಗಳ ಉಲ್ಲಂಘನೆಯಾದಲ್ಲಿ ತಪ್ಪದೇ ದಂಡ ವಿಧಿಸಿ: ಡಾ. ರಾಜೇಂದ್ರ. ಕೆ.ವಿ

Spread the love

ಕೋವಿಡ್ ನಿಯಮಗಳ ಉಲ್ಲಂಘನೆಯಾದಲ್ಲಿ ತಪ್ಪದೇ ದಂಡ ವಿಧಿಸಿ: ಡಾ. ರಾಜೇಂದ್ರ. ಕೆ.ವಿ

ಮಂಗಳೂರು:  ಪ್ರತಿಯೊಬ್ಬರು ಮಾಸ್ಕ್ ಧರಿಸುವುದರಿಂದ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತಹ ಕಟ್ಟುನಿಟ್ಟಿನ ಕೋವಿಡ್ ನಿಯಮಗಳನ್ನು ಪಾಲನೆ ಮಾಡುವುದರಿಂದ ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದು. ನಿಯಮಗಳ ಉಲ್ಲಂಘನೆಯಾದಲ್ಲಿ ಕಡ್ಡಾಯವಾಗಿ ದಂಡ ವಿಧಿಸಿ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ.ವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಬುಧವಾರ ತಮ್ಮ ಕಚೇರಿಯಲ್ಲಿ ನಡೆದ ಕೋವಿಡ್-19 ಮುಂಜಾಗೃತಾ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕರು ಇದರ ಬಗ್ಗೆ ಕಾಳಜಿವಹಿಸಬೇಕು, ರೋಗದ ನಿಯಂತ್ರಣಕ್ಕಾಗಿ ಸರ್ಕಾರವು ನೀಡಿರುವ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವುದರ ಜೊತೆಗೆ ಕೋವಿಡ್ ಲಸಿಕೆ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಭಯ, ತಪ್ಪು ಕಲ್ಪನೆಯನ್ನು ಬಿಟ್ಟು, 45 ವರ್ಷಕ್ಕಿಂತ ಮೇಲ್ಪಟ್ಟವರು ಕಡ್ಡಾಯವಾಗಿ ಕೋವಿಡ್-19 ನಿರೋಧಕ ಲಸಿಕೆಯನ್ನು ಪಡೆಯಬೇಕು ಎಂದರು.

ಎಲ್ಲಾ ಕಲ್ಯಾಣ ಮಂಟಪಗಳ ಮುಖ್ಯಸ್ಥರುಗಳು, ಸಭೆ, ಸಮಾವೇಶಗಳ ಆಯೋಜಕರು, ಫಾರ್ಮಸಿ ಅಸೋಸಿಯೇಷನ್, ಪೆಟ್ರೋಲ್ ಪಂಪ್ ಮಾಲೀಕರ ಸಂಘ, ಎಲ್ಲಾ ಟೋಲ್ ವ್ಯವಸ್ಥಾಪರು, ಅಮೇಜಾನ್/ಪ್ಲಿಪ್ ಕಾರ್ಟ್ ಆನ್‍ಲೈನ್ ವಹಿವಾಟುದಾರರ ಮುಖ್ಯಸ್ಥರು, ಸ್ವಿಗ್ಗಿ ಮತ್ತು ಜೊಮ್ಯಾಟೋ ಸೇವಾ ಪೂರೈಕೆದಾರರ ಸಂಘಗಳ ಅಧ್ಯಕ್ಷರೆಲ್ಲರೂ ತಮ್ಮಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರು ಹಾಗೂ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಬೇಕು ತಪ್ಪಿದ್ದಲ್ಲಿ ಅಂತಹ ಮಾಲೀಕರ ವಿರುದ್ಧ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಕೇರಳ ರಾಜ್ಯದಿಂದ ಜಿಲ್ಲೆಗೆ ಹೊಟೇಲ್ ಹಾಗೂ ಅಂಗಡಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಕೆಲಸ ಮಾಡುವಂತಹಾ ವೃತ್ತಿನಿರತರು ಆಗಮಿಸುತ್ತಿದ್ದು, ಅವರುಗಳ ಕೋವಿಡ್ ಪರೀಕ್ಷೆ ಮಾಡಿಸುವುದರೊಂದಿಗೆ ನೆಗಿಟಿವ್ ರಿಪೋರ್ಟ್ ತೆಗೆದುಕೊಂಡು ಬರುವಂತೆ ಆಯಾ ಹೊಟೇಲ್ ಹಾಗೂ ಅಂಗಡಿ ಮಾಲೀಕರು ನಿಗಾ ವಹಿಸಬೇಕು ಹಾಗೂ ಲಾಡ್ಜ್‍ಗಳಿಗೆ ಆಗಮಿಸುವವರ ವಿವರವನ್ನು ಕಡ್ಡಾಯವಾಗಿ ನೋಂದಣಿ ಪುಸ್ತಕದಲ್ಲಿ ನಮೂದಿಸುವಂತೆ ಸೂಚಿಸಿದರು.

ಹೊಟೇಲ್, ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಹಣವನ್ನು ಗ್ರಾಹಕರಿಂದ ಪಡೆಯುವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್, ಕೈಗವಸುಗಳನ್ನು ಧರಿಸಿರಬೇಕು ಹಾಗೂ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಹೊಂದಿರಬೇಕು ಎಂದರು.

ಹವಾ ನಿಯಂತ್ರಿತ ಸ್ಥಳಗಳಲ್ಲಿ ಕೋವಿಡ್ ವೈರಸ್ ಬಹಳ ಬೇಗ ಹರಡುವುದರಿಂದ ಸಭೆ ಸಮಾರಂಭಗಳು, ಕನ್ವೆನ್ಸನ್ ಹಾಲ್‍ಗಳು ಹಾಗೂ ರೆಸ್ಟೋರೆಂಟ್‍ಗಳಲ್ಲಿ ಹೆಚ್ಚು ಹೆಚ್ಚು ಜನರು ಸೇರಬಾರದು ಸಮಾರಂಭಗಳನ್ನು ನಡೆಸುವ ಮುನ್ನ ಸಂಬಂಧಪಟ್ಟ ಸೂಕ್ತ ಪ್ರಾಧಿಕಾರದಿಂದ ಅನುಮತಿ ಪತ್ರ ಪಡೆದುಕೊಳ್ಳಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ರಾಮಚಂದ್ರ ಬಾಯಾರಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಮಹಾನಗರ ಪಾಲಿಕೆ ಆಯುಕ್ತ ದಿನೇಶ್ ಕುಮಾರ್, ಜಿಲ್ಲೆಯ ಕಲ್ಯಾಣ ಮಂಟಪಗಳು, ಸಮಾವೇಶ ಕೇಂದ್ರಗಳ ಆಯೋಜಕರು, ಫಾರ್ಮಸಿ ಅಸೋಸಿಯೇಷನ್ ಅಧ್ಯಕ್ಷರು, ಪೆಟ್ರೋಲ್ ಪಂಪ್ ಮಾಲೀಕರ ಸಂಘ ಹಾಗೂ ಇತರೆ ಸಂಘಗಳ ಅಧ್ಯಕ್ಷರುಗಳು, ಅಮೇಜಾನ್/ಪ್ಲಿಪ್ ಕಾರ್ಟ್ ಆನ್‍ಲೈನ್ ವಹಿವಾಟುದಾರರ ಮುಖ್ಯಸ್ಥರು, ಸ್ವಿಗ್ಗಿ ಮತ್ತು ಜೋಮ್ಯಾಟೋ ಸೇವಾ ಪೂರೈಕೆದಾರರ ವ್ಯವಸ್ಥಾಪಕರು ಉಪಸ್ಥಿತರಿದ್ದರು.


Spread the love