ಕೋವಿಡ್ ನಿಯಮ ಗಾಳಿಗೆ ತೂರಿ ಸಂತೆಗೆ ಮುಗಿಬಿದ್ದ ಜನ

Spread the love

ಕೋವಿಡ್ ನಿಯಮ ಗಾಳಿಗೆ ತೂರಿ ಸಂತೆಗೆ ಮುಗಿಬಿದ್ದ ಜನ

ಕುಶಾಲನಗರ: ರಾಜ್ಯದಲ್ಲಿ ಕೊರೋನ ಸೋಂಕು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದ್ದರೂ ಸಾರ್ವಜನಿಕರು ಮಾತ್ರ ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ಮಾತ್ರ ನಿಂತಿಲ್ಲ.

ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಿ ಎಂದು ಹೇಳುತ್ತಿದ್ದರೂ ಜನ ಮಾತ್ರ ಅದಕ್ಕೆ ಸೊಪ್ಪು ಹಾಕದೆ ಎಲ್ಲೆಂದರಲ್ಲಿ ಓಡಾಡುತ್ತಿರುವುದು ಕಾಣಿಸುತ್ತಿದ್ದು, ಇದು ಸೋಂಕು ಹೆಚ್ಚಾಗಲು ಕಾರಣವಾಗುತ್ತಿದೆ. ಮಂಗಳವಾರ ರಾತ್ರಿ 9 ಗಂಟೆಯಿಂದಲೇ ಲಾಕ್ ಡೌನ್ ಮಾಡುತ್ತಿದ್ದರೂ ಅಗತ್ಯ ವಸ್ತುಗಳಿಗೆ ಪ್ರತಿದಿನವೂ ಅಗತ್ಯ ಸಮಯನ್ನು ನಿಗದಿ ಮಾಡಿದ್ದರೂ ಕೂಡ ಜನ ಸಾಮಾಜಿಕ ಅಂತರ ಮರೆತು ಮುಗಿ ಬೀಳುತ್ತಿದ್ದಾರೆ.

ಈ ನಡುವೆ ಕುಶಾಲನಗರ ಪಟ್ಟಣದಲ್ಲಿ ಮಂಗಳವಾರ ನಡೆಯ ಬೇಕಿದ್ದ ಸಂತೆಯನ್ನು ಕೋವಿಡ್19 ನಿಯಮದಂತೆ ರದ್ದುಗೊಳಿಸಲಾಗಿತ್ತು. ಆದರೆ ವ್ಯಾಪಾರಿಗಳು ಯಾವ ಕೊರೋನಾ ನಿಯಮಗಳನ್ನು ಪಾಲಿಸದೆ ಸಂತೆಯಲ್ಲಿ ಅಧಿಕಾರಿಗಳ ವಿರೋಧದ ನಡುವೆಯೂ ಸಂತೆ ನಡೆಸಿದ್ದಾರೆ. ಆರ್‍ಎಂಸಿ ಮಾರುಕಟ್ಟೆಯ ಒಳಾಂಗಣದಲ್ಲಿ ಸಂತೆ ನಡೆಯುತ್ತಿತ್ತು. ಆದರೆ ಒಳಾಂಗಣದಲ್ಲಿ ಸಂತೆ ನಡೆಸಲು ಅವಕಾಶ ನೀಡಲು ನಿರಾಕರಿಸಿ ಗೇಟಿಗೆ ಬೀಗ ಹಾಕಲಾಗಿತ್ತು. ಸಂತೆ ರದ್ದು ಮಾಡಿದ್ದರು. ವ್ಯಾಪಾರಿಗಳು ಮಾತ್ರ ಆರ್‍ಎಂಸಿ ಮುಂಭಾಗ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ತರಕಾರಿ ಕಾಯಿಪಲ್ಲೆ, ನಾಟಿಕೋಳಿ, ಹಣ್ಣು ಹಂಪಲು ಗಳ ವ್ಯಾಪಾರ ಜೋರಾಗಿಯೆ ನಡೆಯಿತು. ಸ್ಥಳೀಯ ಪಟ್ಟಣ ಪಂಚಾಯಿತಿ ಧ್ವನಿ ವರ್ಧಕದಲ್ಲಿ ಸಂತೆ ರದ್ಧಾಗಿರುವುದರ ಬಗ್ಗೆ ಪ್ರಚಾರ ಮಾಡುತ್ತಿದ್ದರೂ ಕಿವಿಗೊಡದ ಸಾರ್ವಜನಿಕರು ತಾಮುಂದು ನಾಮುಂದು ಎಂಬಂತೆ ತರಕಾರಿಗಳ ಖರೀದಿಯಲ್ಲಿ ತೊಡಗಿದ್ದರು.

ಈ ವೇಳೆ ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ಉದಯಕುಮಾರ್ ಅವರ ನೇತೃತ್ವದಲ್ಲಿ ಸಂತೆಯನ್ನು ತೆರೆವು ಗೊಳಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಕೆಲವು ವ್ಯಾಪಾರಿಗಳಿಗಳು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು. ಈ ಸಂದರ್ಭ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡುವ ಮೂಲಕ ಸಂತೆಯನ್ನು ತೆರವುಗೊಳಿಸುವಲ್ಲಿ ಯಶಸ್ವಿ ಯಾದರು.

ಸರ್ಕಾರ ಯಾವುದೇ ಕಾನೂನು ಜಾರಿಗೆ ತಂದರೂ ಸಾರ್ವಜನಿಕರು ಮಾತ್ರ ಎಚ್ಚೆತ್ತು ಕೊಳ್ಳದಿದ್ದರೆ ಕೊರೋನ ಸೋಂಕು ತಡೆಗಟ್ಟುವುದು ಕಷ್ಟಸಾಧ್ಯ ಎಂಬುದನ್ನು ಸಾರ್ವಜನಿಕರೆ ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಇದೀಗ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಜನ ಈ ಬಗ್ಗೆ ಗಮನಹರಿಸಿ ತಾವೇ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.


Spread the love