ಕೋವಿಡ್ ಮೂರನೇ ಅಲೆ ಎದುರಿಸಲು ಪೂರ್ಣ ಸಿದ್ಧತೆ – ಮುಖ್ಯಮಂತ್ರಿ ಬೊಮ್ಮಾಯಿ

Spread the love

ಕೋವಿಡ್ ಮೂರನೇ ಅಲೆ ತಡೆಗಟ್ಟಲು ಎದುರಿಸಲು ಸಿದ್ಧತೆ – ಮುಖ್ಯಮಂತ್ರಿ ಬೊಮ್ಮಾಯಿ

ಉಡುಪಿ: ರಾಜ್ಯದಲ್ಲಿ ಸಂಭವನೀಯ ಕೋವಿಡ್ 3ನೇ ಅಲೆಯನ್ನು ಎದುರಿಸಲು ಸನ್ನದ್ಧರಾಗುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲ ಅಧಿಕಾರಿಗಳಿಗೂ ಸೂಚಿಸಿರುವುದಾಗಿ ತಿಳಿಸಿದರು.

ಗುರುವಾರ ಜಿ. ಪಂ. ಸಭಾಂಗಣದಲ್ಲಿ ನಡೆದ ಕೋವಿಡ್ ನಿರ್ವಹಣೆ ಕುರಿತ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಸೆಪ್ಟೆಂಬರ್ ವೇಳೆಗೆ ಕೋವಿಡ್ 3ನೇ ಅಲೆಯ ಸ್ಪಷ್ಟ ಚಿತ್ರಣ ಸಿಗಲಿದೆ. ಮುಂಜಾಗ್ರತಾ ಕ್ರಮವಾಗಿ ಅಗತ್ಯ ಮೂಲಭೂತ ಸೌಲಭ್ಯ ಹೆಚ್ಚಳದೊಂದಿಗೆ ಕೊರೊನಾ ತೀವ್ರತೆ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದಂತೆ ಕಾರ್ಯತತ್ಪರರಾಗುವುದು ಅಗತ್ಯ ಎಂದು ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಈಚಿನ ಕೆಲವು ದಿನಗಳಿಂದ ಶೇ. 2ಕ್ಕಿಂತ ಹೆಚ್ಚು ಪೊಸಿಟಿವಿಟಿ ದರ ಇದೆ. ಉಡುಪಿ ಜಿಲ್ಲೆಗೆ ಮುಂಬೈ ಇತ್ಯಾದಿಗಳಿಂದ ಜನತೆ ಆಗಮಿಸುವ ದೃಷ್ಟಿಯಿಂದ ಹಾಗೂ ಮಣಿಪಾಲ ಆಸ್ಪತ್ರೆಗೆ ವಿವಿಧೆಡೆಗಳಿಂದ ಚಿಕಿತ್ಸೆಗೆ ಆಗಮಿಸುವ ನಿಟ್ಟಿನಲ್ಲಿ ಅಂತೆಯೇ ನೆರೆಯ ದ.ಕ. ಜಿಲ್ಲೆಯೊಂದಿಗೆ ನಿಕಟ ಸಂಪರ್ಕ ಇರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಆದ್ಯತೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಕೈಗೊಳ್ಳುತ್ತಿರುವ ವೈದ್ಯಕೀಯ ಪರೀಕ್ಷೆಗಳನ್ನು 5 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಕೈಗೊಳ್ಳುವಂತೆ ಹಾಗೂ ಫಲಿತಾಂಶವನ್ನು 24 ಗಂಟೆಗಳೊಳಗೆ ನೀಡುವಂತೆ ಸೂಚಿಸಿರುವುದಾಗಿ ತಿಳಿಸಿದರು.

ಕೋವಿಡ್ ಸೋಂಕಿತರ ನಿಗಾವಣೆ ಬಗ್ಗೆ ಗಮನ ನೀಡಬೇಕು. ಸೋಂಕಿತರ ಸ್ಥಿತಿಗತಿ ಪರಿಶೀಲಿಸಿ ಅವರಿಂದ ಸೋಂಕು ಹರಡುವುದನ್ನು ತಪ್ಪಿಸಲು ಕೋವಿಡ್ ಕೇರ್ ಸೆಂಟರ್‍ಗಳಿಗೆ ದಾಖಲಿಸಲು ಕ್ರಮ, ಮೈಕ್ರೋ ಕ್ವಾರಂಟೈನ್ ಇತ್ಯಾದಿಗಳಿಗೆ ಸಲಹೆ ನೀಡಿರುವುದಾಗಿ ತಿಳಿಸಿದರು.

ಕೋವಿಡ್ ನಿರ್ವಹಣೆಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದ್ದು, ಪ್ರಸ್ತುತ 161 ವೆಂಟಿಲೇಟರ್‍ಗಳಿದ್ದು, ಕೇವಲ 19 ಬಳಕೆ ಆಗಿದೆ. 370 ಐಸಿಯು ಬೆಡ್‍ಗಳ ಪೈಕಿ 38 ಬಳಕೆಯಾಗಿದೆ. ಆಮ್ಲಜನಕ ಕೊರತೆ ನೀಗಿಸುತಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಲಸಿಕೆ ಕೊರತೆ ನೀಗಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 59 ಶೇ. ಮೊದಲ ಡೋಸ್ ನೀಡಲಾಗಿದೆ. ಹೆಚ್ಚುವರಿ ಲಸಿಕೆ ಪೂರೈಕೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. 1.75 ಲಕ್ಷ ಮಕ್ಕಳ ತಪಾಸಣೆ ಮಾಡಲಾಗಿದ್ದು, ಅಗತ್ಯವುಳ್ಳವರಿಗೆ ಪೌಷ್ಟಿಕ ಆಹಾರ ನೀಡಲಾಗಿದೆ ಎಂದರು.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸುನಿಲ್ ಕುಮಾರ್, ಶಾಸಕರಾದ ರಘುಪತಿ ಭಟ್ ಮತ್ತು ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿ. ಪಂ. ಸಿಇಓ ಡಾ. ನವೀನ್ ಭಟ್, ಡಿಎಚ್.ಓ ಡಾ. ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ. ಮಧುಸೂದನ ನಾಯಕ್ ಮೊದಲಾದವರಿದ್ದರು.


Spread the love