
ಕೋವಿಡ್ ಲಸಿಕೆ ಟೋಕನ್ ಶಾಸಕರ ಮನೆಗೆ, ಬಿಜೆಪಿ ಕಾರ್ಯಕರ್ತರಿಗೆ ಟೋಕನ್ ಹಂಚಿಕೆ – ಹರೀಶ್ ಕುಮಾರ್
ಮಂಗಳೂರು : ಪ್ರತಿ ಸರಕಾರಿ ಉಚಿತ ಲಸಿಕಾ ಕೇಂದ್ರಗಳಿಂದ ನೂರರಲ್ಲಿ ಐವತ್ತು ಲಸಿಕಾ ಟೋಕನ್ ಸ್ಥಳೀಯ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮನೆಗೆ ಹೋಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಗಂಭೀರ ಆಪಾದನೆ ಮಾಡಿದ್ದಾರೆ.
ಜನರಿಗೆ ಉಚಿತವಾಗಿ ಲಸಿಕೆ ನೀಡುವ ಯೋಗ್ಯತೆ ಇಲ್ಲದ ಭಾರತೀಯ ಜನತಾ ಪಾರ್ಟಿ ತನ್ನೆಲ್ಲ ವೈಫಲ್ಯಕ್ಕಾಗಿ ಕಾಂಗ್ರೆಸ್ ಪಕ್ಷ ಮೇಲೆ ಗೂಬೆ ಕೂರಿಸುತ್ತಿದೆ. ಜಿಲ್ಲೆಯ ಸರಕಾರಿ ಲಸಿಕಾ ಕೇಂದ್ರಗಳಲ್ಲಿ ಸಾರ್ವಜನಿಕರು ಬೆಳಗ್ಗೆ 4 ಗಂಟೆಯಿಂದ ಕ್ಯೂ ನಿಲ್ಲುತ್ತಿದ್ದರೂ ಅವರಿಗೆ ಲಸಿಕೆ ದೊರೆಯುತ್ತಿಲ್ಲ. ಬೆಳಗ್ಗೆ 8 ಗಂಟೆಗೆ ಬರುವ ಬಿಜೆಪಿ ಕಾರ್ಯಕರ್ತರಿಗೆ ಲಸಿಕೆ ಸುಲಭವಾಗಿ ದೊರೆಯುತ್ತಿದೆ. ಬಿಜೆಪಿಯ ಕಾರ್ಯಕರ್ತರೇ ಇಂತಹ ಲಸಿಕಾ ಕೇಂದ್ರಗಳಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಲಸಿಕೆ ಕೇಂದ್ರಗಳಲ್ಲಿ ಬಿಜೆಪಿ ಕಾರ್ಯಕರ್ತರನ್ನು ನಿಯೋಜನೆ ಮಾಡಿದವರು ಯಾರು ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.
ಮಂಗಳೂರಿನ ಬಿಜೆಪಿ ಶಾಸಕರ ಮನೆಗೆ ಹಿಂದಿನ ದಿನವೇ ಅರ್ಧಾಂಶ ಟೋಕನ್ ಹೋಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಲಿಸಿಕೆ ನೀಡುವಲ್ಲಿ ಆಗುತ್ತಿರುವ ಅವ್ಯವಹಾರ, ತಾರತಮ್ಯ, ರಾಜಕೀಯ ಹಸ್ತಕ್ಷೇಪ, ಭ್ರಷ್ಟಚಾರ ಇತ್ಯಾದಿಗಳ ಬಗ್ಗೆ ಕಾಂಗ್ರೆಸ್ ಜೂನ್ 4ರಂದು ಕರ್ನಾಟಕ ರಾಜ್ಯಪಾಲರಿಗೆ ದೂರು ಸಲ್ಲಿಸಲಿದ್ದೇನೆ ಹಾಗೂ ಸ್ಪೀಕ್ ಅಪ್ ಆಂದೋಲನ ನಡೆಸಲಿದ್ದೇವೆ ಎಂದವರು ಪ್ರಕಟಿಸಿದರು.
ಬೆಂಗಳೂರಿನಲ್ಲಿ ಸಂಸದ ತೇಜಸ್ವಿ ಸೂರ್ಯ ಮತ್ತವರ ಚಿಕ್ಕಪ್ಪ, ಶಾಸಕ ರವಿಸುಬ್ರಹ್ಮಣ್ಯ ಅವರು ಬೆಡ್ ಹಗರಣ ಮತ್ತು ಲಸಿಕೆ ಯಲ್ಲಿ 700 ರೂ.ಕಮೀಷನ್ ಪಡೆಯುತ್ತಿರುವುದು ಈಗಾಗಲೇ ಬಹಿರಂಗವಾಗಿದೆ. ರಾಜ್ಯದ ಎಲ್ಲಡೆ ಇದೇ ರೀತಿ ಭ್ರಷ್ಟಾಚಾರ ನಡೆಯುತ್ತಿದೆ. ಕೇಂದ್ರ ಸರಕಾರ ಏಕ ಪ್ರಕಾರವಾದ ಲಸಿಕೆ ನೀತಿ ಜಾರಿಗೆ ತರಬೇಕು ಮತ್ತು ಎಲ್ಲರಿಗೂ ಲಸಿಕೆ ದೊರೆಯುವಂತೆ ಆಗಬೇಕು ಎಂದು ಹರೀಶ್ ಕುಮಾರ್ ಹೇಳಿದರು.
ಸುರತ್ಕಲ್ ಲಸಿಕಾ ಕೇಂದ್ರದಲ್ಲಿ ಕೂಡ ಬಹುತೇಕ ಟೋಕನುಗಳನ್ನು ಅಲ್ಲಿನ ಶಾಸಕರ ಸೂಚನೆ ಮೇರೆಗೆ ಬಿಜೆಪಿ ಕಾರ್ಯಕರ್ತರಿಗೆ ಹಂಚಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಮಾಜಿ ಶಾಸಕ ಮೋಯ್ದೀನ್ ಬಾವ ಹೇಳಿದರು.
ಕಸ ವಿಲೇವಾರಿ ವೈಫಲ್ಯ
ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಂಪೂರ್ಣ ವಿಫಲವಾಗಿದೆ. ಜನರು ರಸ್ತೆ ಬದಿಗಳಲ್ಲಿ ಕಸ ಬಿಸಾಡುತ್ತಿದ್ದು, ಇದರಿಂದ ನಗರ ನೈರ್ಮಲ್ಯ ಸಂಪೂರ್ಣ ಕುಲಗೆಟ್ಟು ಹೋಗಿದೆ. ಶುಕ್ರವಾರದ ಒಣ ಕಸ ಮಾತ್ರ ಕ್ರಮದಿಂದಾಗಿ ಒಟ್ಟಾರೆ ಕಸ ಸಂಗ್ರಹ ವ್ಯವಸ್ಥೆ ವಿಫಲವಾಗಿದೆ. ಕೊರೊನಾ ಸೋಂಕಿನ ನಡುವೆ ಮಳೆಗಾಲದಲ್ಲಿ ಇನ್ನಿತರ ಕಾಯಿಲೆಗಳು ಶುರುವಾಗಲು ಆಸ್ಪದ ಆಗಬಾರದು. ಮಹಾನಗರಪಾಲಿಕೆ ಮುಂಗಾರು ಆರಂಭ ಆಗುತ್ತಿದ್ದರೂ ಮಳೆಗಾಲದ ಸಿದ್ಧತೆಗಳನ್ನು ಮಾಡಿಲ್ಲ ಎಂದು ಹರೀಶ್ ಕುಮಾರ್ ಹೇಳಿದರು.
ನಗರದ ಹಲವೆಡೆ ಗುಜರಿ ವಸ್ತುಗಳು, ಹಳೇ ವಾಹನಗಳು ಬೇಕಾಬಿಟ್ಟಿ ಇದ್ದರೂ ತೆರವು ಮಾಡುವ ಕೆಲಸ ಮಾಡಲಾಗಿಲ್ಲ. ನಗರದ ಲೈಟ್ ಕಂಬ, ಮರಗಳು, ಕಟ್ಟಡಗಳ ಮೇಲೆ ಬೇಕಾಬಿಟ್ಟಿಯಾಗಿ ಟೆಲಿಕಾಂ-ಕೇಬಲ್ ಕಂಪೆನಿಗಳ ವಯರುಗಳು ಬೇಕಾಬಿಟ್ಟಿ ನೇತಾಡುತ್ತಿವೆ. ಇದು ಅಪಾಯಕಾರಿ ಮಾತ್ರವಲ್ಲದೆ ನಗರದ ಸೌಂದರ್ಯಕ್ಕೂ ಧಕ್ಕೆಯಾಗಿದೆ. ಜಿಯೋ ದಂತಹ ಟೆಲಿಕಾಂ ಸರಕಾರದ ಯಾವುದೇ ಇಲಾಖೆಗಳ ಅಧಿಕಾರಿಗಳನ್ನು ಕ್ಯಾರೇ ಮಾಡುತ್ತಿಲ್ಲ. ಈ ಬಗ್ಗೆ ಪಾಲಿಕೆ ಆಡಳಿತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾಗಿದೆ ಎಂದವರು ಹೇಳಿದರು.
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೃಹತ್ ಮಾಲ್, ಹೊಟೇಲುಗಳು ಬಂದ್ ಆಗಿರುವುದರಿಂದ ದೊಡ್ಡ ಪ್ರಮಾಣ ಕಸ ಸಂಗ್ರಹ ಇಲ್ಲದಿದ್ದರೂ ಮಂಗಳೂರು ನಗರದಲ್ಲಿ ಕಸ ವಿಲೇವಾರಿ ವಿಫಲ ಆಗಿರುವುದಕ್ಕೆ ಆಡಳಿತ ವೈಫಲ್ಯವೇ ಕಾರಣವಾಗಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಅವರು ಆಪಾದಿಸಿದರು.
ಹಸಿ ಕಸವನ್ನು 48 ಗಂಟೆಗಿಂತ ಹೆಚ್ಚು ಇರಿಸಲು ಆಗುವುದಿಲ್ಲ. ಮಂಗಳೂರು ನಗರದಲ್ಲಿ ಬಹುತೇಕ ಮಂದಿ ಮೀನು ಸಾರು ಉಪಯೋಗಿಸುವವರು ಆಗಿರುವುದರಿಂದ, ಮೀನಿನ ಕಸ ಹೆಚ್ಚು ಸಮಯ ಇರಿಸಲು ಆಗುವುದಿಲ್ಲ. ಬೃಹತ್ ಕಟ್ಟಡಗಳು, ಮಾಲ್, ಬೃಹತ್ ಅಪಾರ್ಟ್ಮೆಂಟ್ ಗಳಲ್ಲಿಂದ ಸಂಪನ್ಮೂಲ ಸೋರಿಕೆಯನ್ನು ಸರಿಪಡಿಸಿದರೆ ಅದರಿಂದಲೇ ನಗರದ ಸಂಪೂರ್ಣ ಕಸ ವಿಲೇವಾರಿಯ ಖರ್ಚು ವೆಚ್ಚ ಭರಿಸಬಹುದು. ಆಡಳಿತ ನಡೆಸುವವರು ಸಂಪನ್ಮಾಲ ಸೋರಿಕೆ ಆಗುವುದರ ಬಗ್ಗೆ ಗಮನ ಹರಿಸಬೇಕು ಮತ್ತು ಕಸ ವಿಲೇವಾರಿ ಸುವ್ಯಸ್ಥಿತವಾಗಿ ಆಗುವಂತೆ ನೋಡಿಕೊಳ್ಳಬೇಕು ಎಂದು ಲೋಬೊ ಹೇಳಿದರು.
ಬಿಜೆಪಿಯ ದೋಣಿ ಕಡವು
ಮಂಗಳೂರು ಪುರಭವನ ಮತ್ತು ತಾಲೂಕು ಪಂಚಾಯತು ನಡುವೆ ನಿರ್ಮಿಸಲಾಗುತ್ತಿರುವ ಅಂಡರ್ ಪಾಸ್ ಕಾಮಗಾರಿ ಅವೈಜ್ಞಾನಿಕವಾಗಿದೆ. ಮಂಗಳೂರು ನಗರದಲ್ಲಿ ಏನು ಮಾಡಬೇಕೊ ಅಂತಹ ಕಾಮಗಾರಿಗಳನ್ನು ಮಾಡಲಾಗುತ್ತಿಲ್ಲ. ಬಿಜೆಪಿ ವತಿಯಿಂದ ನಗರ ಪಂಪ್ ವೆಲ್, ಪಡೀಲ್, ಬಜಾಲಿನಲ್ಲಿ ಮೂರು ಕಡವು ನಿರ್ಮಿಸಲಾಗಿದೆ. ಜನರು ಮಳೆಗಾಲದಲ್ಲಿ ದೋಣಿ ಮೂಲಕ ಕಡವು ದಾಟಬೇಕಾಗುತ್ತದೆ ಎಂದು ಲೋಬೊ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರುಗಳಾದ ಶಶಿಧರ ಹೆಗ್ಡೆ, ಅಬ್ದುಲ್ ರವೂಫ್, ಕೆ.ಭಾಸ್ಕರ, ನವೀನ್ ಡಿಸೋಜಾ, ಪ್ರವೀಣ್ ಚಂದ್ರ ಆಳ್ವ, ಕೇಶವ ಮರೋಳಿ, ಸಂಶುದ್ದೀನ್ ಕುದ್ರೋಳಿ, ಅನೀಲ್ ಕುಮಾರ್, ಅಶ್ರಫ್, ಸಂಶುದ್ದೀನ್ ಝೀನತ್ ಬಂದರ್, ಓಬಿಸಿ ಜಿಲ್ಲಾ ಅಧ್ಯಕ್ಷ ವಿಶ್ವಾಸ್ ದಾಸ್, ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನ್ ಜಿಲ್ಲಾ ಅಧ್ಯಕ್ಷ ಶುಭೋದಯ ಆಳ್ವ ಉಪಸ್ಥಿತರಿದ್ದರು.