ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಿರ್ಮಲಾನಂದ ಸ್ವಾಮೀಜಿ ಮನವಿ

Spread the love

ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಿರ್ಮಲಾನಂದ ಸ್ವಾಮೀಜಿ ಮನವಿ

ಚಾಮರಾಜನಗರ: ಕಾಡಂಚಿನಲ್ಲಿ ವಾಸವಾಡುವ ಗುಡ್ಡಗಾಡಿನ ಜನರು ಲಸಿಕೆ ಪಡೆಯಲು ಹಿಂದೇಟು ಹಾಕದೆ ಲಸಿಕೆ ಹಾಕಿಸಿಕೊಳ್ಳುವಂತೆ ಶ್ರೀ ಆದಿ ಚುಂಚನಗಿರಿ ಕ್ಷೇತ್ರದ ಪೀಠಾಧಿಪತಿ ಶ್ರೀ ನಿರ್ಮಲಾನಂದ ಸ್ವಾಮೀಜಿ ಮನವಿ ಮಾಡಿದರು.

ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಗ್ಗದಹಳ್ಳ ಹಾಡಿಯಲ್ಲಿ ಸಂಕಷ್ಟದಲ್ಲಿರುವ ಸೋಲಿಗ ಗಿರಿಜನರಿಗೆ ವಿಶ್ವ ಒಕ್ಕಲಿಗರ ಮಹಾ ವೇದಿಕೆ ವತಿಯಿಂದ ಆಹಾರ ಕಿಟ್ ವಿತರಣೆ ಸಮಾರಂಭದಲ್ಲಿ ಆರ್ಶೀವಚನ ನೀಡಿದ ಅವರು, ಕೊರೊನಾ ನಿಯಂತ್ರಣ ಲಸಿಕೆ ಪಡೆಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ದಿಯಾಗಲಿದೆ ಯಾವುದೇ ಅಡ್ಡ ಪರಿಣಾಮವಿರುವುದಿಲ್ಲ ಈ ಹಿನ್ನಲೆಯಲ್ಲಿ ಗುಡ್ಡಗಾಡು ಜನರು ಅಂಜಿಕೆಯಿಲ್ಲದೆ ಲಸಿಕೆ ಹಾಕಿಸಿಕೊಳ್ಳಿ ಎಂದರು.

ಇಲ್ಲದೆ ಇರುವವರು ಬೇಕು ಎನ್ನುವುದು ತಪ್ಪಲ್ಲ. ಹಾಗೇಯೇ ಇರುವವರು ಎಲ್ಲವೂ ಬೇಕು ಎನ್ನುವುದು ತಪ್ಪಾಗುತ್ತದೆ ಇರುವವರು ಇಲ್ಲದೆ ಇರುವವರಿಗೆ ನೆರವು ನೀಡುವ ಮೂಲಕ ಮಾನವೀಯತೆ ಎತ್ತಿ ಹಿಡಿಯಬೇಕು. ಅಗತ್ಯಕ್ಕೆ ತಕ್ಕಂತೆ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬೇಕು, ಹೆಚ್ಚಾಗಿರುವುದನ್ನು ಮತ್ತೊಬ್ಬರಿಗೆ ಸಹಾಯ ಮಾಡಿದರೆ ಸಮಾಜ ಉತ್ತಮವಾಗಿರುತ್ತದೆ ಎಂದ ಅವರು, ಮಕ್ಕಳು ವಿದ್ಯಾಭ್ಯಾಸಕ್ಕೆ ಮುಂದಾಗುತ್ತಿದ್ದಾರೆ. ಇಲ್ಲಿನ ಗಿರಿಜನ ಬಡವರು ಮಕ್ಕಳು ಶ್ರೀ ಮಠದಲ್ಲಿ ಶಿಕ್ಷಣ ಪಡೆಯಲು ಬಂದರೆ ಅವಕಾಶ ನೀಡುವುದಾಗಿ ತಿಳಿಸಿದರಲ್ಲದೆ, ಇಂಗ್ಲೀಷ್ ಮೀಡಿಯಂನಲ್ಲಿ ಓದ ಬೇಕು ಎನ್ನುವರು ಇಂಗ್ಲೀಷ್ ನಲ್ಲಿ ಓದಿ ಅದರೊಂದಿಗೆ ಕನ್ನಡ ಭಾಷೆಯನ್ನು ಸಹ ಅಭ್ಯಾಸ ಮಾಡಿ ಜ್ಞಾನಾರ್ಜನೆ ವೃದ್ದಿಸಿಕೊಳ್ಳಿ ಎಂದರು.

ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಮಾತನಾಡಿ, ವಿಶ್ವ ಒಕ್ಕಲಿಗರ ಮಹಾ ವೇದಿಕೆ ಮೂಲಕ ಶ್ರೀ ಕ್ಷೇತ್ರ ಆದಿ ಚುಂಚನಗಿರಿ ಮಠಾಧಿಪತಿ ಶ್ರೀ ನಿರ್ಮಲಾನಂದ ಸ್ವಾಮಿಜಿಗಳ ಸಮ್ಮುಖದಲ್ಲಿ ಕೋರೊನಾ ಸಂಕಷ್ಟ ಸಮಯದಲ್ಲಿ ಗುಡ್ಡಗಾಡು ಹಾಡಿ ಜನರಿಗೆ ನೆರವನ್ನು ನೀಡುತ್ತಿರುವುದು ಉತ್ತಮ ಕೆಲಸವಾಗಿದೆ. ಇಂತಹ ಹಲವಾರು ಜನಾನುರಾಗಿ ಕಾರ್ಯಗಳು ನಿರಂತರವಾಗಿ ನಡೆಯಲಿ ನೊಂದವರಿಗೆ ಸ್ಪಂಧಿಸಲಿ ಎಂದು ಹೇಳಿದರು

ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿರುವ ಪ್ರಾಕೃತಿಕ ಸೊಬಗು ಬೇರೆ ಎಲ್ಲೂ ಸಿಗಲಾರದು ಇಡೀ ರಾಜ್ಯದಲ್ಲಿ ಎರಡು ಹುಲಿ ಸಂರಕ್ಷಿತ ಪ್ರದೇಶ ಇರುವ ಜಿಲ್ಲೆ ಚಾಮರಾಜನಗರವಾಗಿದೆ. ಗುಡ್ಡಗಾಡಿನ ಜನರು ಇತ್ತೀಚಿನ ದಿನಗಳಲ್ಲಿ ವಿದ್ಯಾಭ್ಯಾಸದ ಕಡೆ ಗಮನಕೊಡುತ್ತಿದ್ದಾರೆ ಮುಂದೆಯೂ ಶಿಕ್ಷಣ ಪಡೆಯುವವರ ಸಂಖ್ಯೆ ಅಧಿಕವಾಗಲಿದೆ ಎಂದರು.

ಪುರಾತತ್ವ ಇಲಾಖೆಯ ಆಯುಕ್ತೆ ಬಿ.ಆರ್. ಪೂರ್ಣಿಮಾ, ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಎಸ್.ಆರ್. ನಟೇಶ್, ವಿಶ್ವ ಒಕ್ಕಲಿಗರ ಮಹಾ ವೇದಿಕೆಯ ಅಧ್ಯಕ್ಷ ವೈ.ಡಿ ರವಿಶಂಕರ್, ತಹಸೀಲ್ದಾರ್ ರವಿಶಂಕರ್, ಮಹಿಳಾ ವಿಭಾಗದ ಅಧ್ಯಕ್ಷೆ ಭಾರತಿ ಶಂಕರ್ ಸೇರಿದಂತೆ ಹಲವರು ಗಣ್ಯರು ಇದ್ದರು.


Spread the love