ಕೋವಿಡ್ ಸಂದರ್ಭದಲ್ಲಿ ಜನರ ಮೇಲೆ ತೈಲ ಬೆಲೆ ಏರಿಕೆಯ ಬರೆ – ಗೋಪಾಲ ಪೂಜಾರಿ

Spread the love

ಕೋವಿಡ್ ಸಂದರ್ಭದಲ್ಲಿ ಜನರ ಮೇಲೆ ತೈಲ ಬೆಲೆ ಏರಿಕೆಯ ಬರೆ – ಗೋಪಾಲ ಪೂಜಾರಿ

ಕುಂದಾಪುರ : ದೇಶವೇ ಕೋವಿಡ್-19 ರ ಸಂಕಷ್ಟದಲ್ಲಿ ಇರುವ ಈ ಕಠಿಣ ಸಂದರ್ಭದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಗಳನ್ನು ಗಗನಕ್ಕೆ ಏರಿಸುವ ಮೂಲಕ ಕೇಂದ್ರ ಹಾಗೂ ರಾಜ್ಯದಲ್ಲಿ ಸರ್ಕಾರವನ್ನು ಆಳುತ್ತಿರುವ ಬಿಜೆಪಿ ಪಕ್ಷ ದೇಶವಾಸಿಗಳ ಮೇಲೆ ಗದಾ ಪ್ರಹಾರವನ್ನು ಮಾಡುತ್ತಿದೆ ಎಂದು ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಆರೋಪಿಸಿದ್ದಾರೆ.

ಇಲ್ಲಿಗೆ ಸಮೀಪದ ಚಿತ್ತೂರಿನ ಪೆಟ್ರೋಲ್ ಬಂಕ್ ಎದುರು ಭಾನುವಾರ ಬಿಜೆಪಿ ಸರ್ಕಾರದ ತೈಲ ಬೆಲೆ ಏರಿಕೆ ನೀತಿಯನ್ನು ಖಂಡಿಸಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತ್ತತ್ವದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್‌ ನೇತ್ರತ್ವದ ಯುಪಿಎ ಸರ್ಕಾರ ಇದ್ದಾಗ, ತೈಲ ಬೆಲೆ ಒಂದು ರೂಪಾಯಿ ಏರಿಕಯಾದಗಲೂ ಬೀದಿಗೆ ಬಂದು ಪ್ರತಿಭಟನೆಯನ್ನು ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಬಿಜೆಪಿ ಪಕ್ಷದ ಧುರೀಣರು, ಇದೀಗ ಲೀಟರ್‌ ಒಂದಕ್ಕೆ 100 ರೂ. ಆಗಿದ್ದರೂ ದೀರ್ಘ ಮೌನಕ್ಕೆ ಶರಣಾಗಿದ್ದಾರೆ. ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಗರಿಷ್ಠ ಮಟ್ಟಕ್ಕೆ ತಲುಪಿದ್ದಾಗಲೂ ಇದರ ಹೊರೆಯನ್ನು ಜನರಿಗೆ ಹೊರಿಸದೆ ಜನರ ಹಿತವನ್ನು ಕಾಪಾಡಿದ್ದರು. ಆದರೆ ಕಚ್ಚಾ ತೈಲದ ಬೆಲೆ ಕಡಿಮೆದಾಗಲೂ ತೈಲಗಳ ಮೇಲೆ ಗರಿಷ್ಠ ತೆರಿಗೆಯನ್ನು ಹೇರಿರುವ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಜನರ ಹಿತವನ್ನು ಕಡೆಗಣಿಸಿದೆ. ತೈಲ ಬೆಲೆಯನ್ನು ನಿರಂತರವಾಗಿ ಏರಿಸುವ ಮೂಲಕ ಖಾಸಗಿ ಸ್ಥಾಮ್ಯದ ತೈಲ ಕಂಪೆನಿಯವರಿಗೆ ಹಣ ಮಾಡಿಕೊಡುವ ದುರುದ್ದೇಶವನ್ನು ಬಿಜೆಪಿ ಹೊಂದಿದೆ ಎಂದು ಅವರು ಕೇಂದ್ರದ ನೀತಿಯನ್ನು ಖಂಡಿಸಿದರು.

ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೊದಲು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎನ್ನುವ ಭರವಸೆಯನ್ನು ನೀಡಿದ ಬಿಜೆಪಿ, ಅಧಿಕಾರಕ್ಕೆ ಬಂದು 7ವರ್ಷಗಳಲ್ಲಿ 14 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು, ವಿಪರ್ಯಾಸವೆಂದರೆ ಹೊಸ ಉದ್ಯೋಗಗಳ ಸೃಷ್ಟಿ ಬಿಡಿ, ಇದ್ದ ಉದ್ಯೋಗಗಳನ್ನೆ ಉಳಿಸಿ ಕೊಳ್ಳಲಾಗದೆ, ಜನರನ್ನು ಅತಂತ್ರರನ್ನಾಗಿಸಲಾಗಿದೆ. ಕೋವಿಡ್-19 ಕಾರಣದಿಂದಾಗಿ ನೆಮ್ಮದಿಯ ಬದುಕನ್ನು ಕಳೆದುಕೊಂಡು ಅಸ್ತವ್ಯಸ್ತವಾಗಿರುವ ಜನರಿಗೆ ಸಾಂತ್ವಾನ ಹೇಳುವ ಕೆಲಸ ಸರ್ಕಾರಗಳಿಂದ ಆಗುತ್ತಿಲ್ಲ. ಸಂಕಷ್ಟದ ಪರಿಸ್ಥಿತಿಯಲ್ಲಿ ಜನರ ಜೊತೆ ನಿಲ್ಲಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೈಲ ಹಾಗೂ ವಿದ್ಯುತ್ ಬೆಲೆ ಏರಿಕೆಯ ಬರೆಗಳನ್ನು ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುಪಿಐ ಸರ್ಕಾರದ 2013-14 ರಲ್ಲಿ ಇದ್ದ ಅಡುಗೆ ಅನಿಲ ಸರ್ಕಾರದ ಸಿಲಿಂಡರ್ ಬೆಲೆ ಇದೀಗ ಎರಡು ಪಟ್ಟಿಗಿಂತಲೂ ಅಧಿಕವಾಗಿದೆ. ದೇಶದ ಬಡ ಜನರಿಗಾಗಿ ಕಾಂಗ್ರೆಸ್ ಸರ್ಕಾರ ಪಡಿತರ ವ್ಯವಸ್ಥೆಗಾಗಿ ನೀಡುತ್ತಿದ್ದ ಸಹಾಯ ಧನ (ಸಬ್ಸಿಡಿ) ಸೌಲಭ್ಯವನ್ನು ಹಿಂತೆಗೆಯುವ ಹುನ್ನಾರಗಳು ವ್ಯವಸ್ಥಿತವಾಗಿ ನಡೆಯುತ್ತಿದೆ. ಜನರ ಬದುಕಿನೊಂದಿಗ ಆಟವಾಡುತ್ತಾ ಜನ ವಿರೋಧಿ ನಡೆಯನ್ನು ಹೊಂದಿರುವ ಬಿಜೆಪಿ ಸರ್ಕಾರಗಳನ್ನು ಅಧಿಕಾರದಿಂದ ಕೆಳಗಿಸಲು ಕಾಂಗ್ರೆಸ್ ನಿರಂತರ ಹೋರಾಟ ನಡೆಸಲಿದೆ. ಕೊರೊನಾ ನಿಯಮಾವಳಿಗಳಿಂದಾಗಿ ಸಾಂಕೇತವಾಗಿ ಪ್ರತಿಭಟನೆ ನಡೆಸುತ್ತಿದ್ದು, ಬೆಲೆ ಏರಿಕೆ ಇಳಿಕೆಯಾಗದೆ ಇದ್ದಲ್ಲಿ ಮುಂದೆ ಉಗ್ರ ಹೋರಾಟವನ್ನು ಪಕ್ಷ ನಡೆಸಲಿದೆ ಎಂದು ಅವರು ತಿಳಿಸಿದರು.

ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರದೀಪ್‌ಕುಮಾರ ಶೆಟ್ಟಿ ಗುಡಿಬೆಟ್ಟು, ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಮುಖಂಡ ನಾಗಪ್ಪ ಕೊಠಾರಿ, ಪಕ್ಷದ ಪ್ರಮುಖರಾದ ಉದಯ ಪೂಜಾರಿ ಚಿತ್ತೂರು, ಉದಯಕುಮಾರ ಶೆಟ್ಟಿ ನೆಂಪು, ಶರತಕುಮಾರ ಶೆಟ್ಟಿ ಕಟ್‌ಬೇಲ್ತೂರು, ಸದಾಶಿವ ಶೆಟ್ಟಿ ಶಂಕರನಾರಾಯಣ, ಕಿರಣ್ ಹೆಗ್ಡೆ ಅಂಪಾರು, ಯಾಸಿನ್ ಹೆಮ್ಮಾಡಿ, ಗೋವರ್ಧನ್ ಜೋಗಿ, ಸಂತೋಷ್ ಶೆಟ್ಟಿ ಸಬ್ಲಾಡಿ, ಸವಿತಾ ಪೂಜಾರಿ, ಸಂತೋಷ್ ತೋಟಬೈಲ್, ಸಂತೋಷ ಪೂಜಾರಿ ಜಡ್ಕಲ್, ಮಂಜು ಪೂಜಾರಿ ಕೆರಾಡಿ, ಗೋವಿಂದ ಶೆಟ್ಟಿ ಹಟ್ಟಿಯಂಗಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶಾಲಿನಿ ಹಾಗೂ ನಾಗರತ್ನ ಇದ್ದರು.


Spread the love