ಕೋವಿಡ್ ಸೋಂಕಿನ ಬಗ್ಗೆ ಎಚ್ಚರವಹಿಸಿ, ಬೂಸ್ಟರ್ ಡೋಸ್ ತಪ್ಪದೇ ಪಡೆಯಿರಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Spread the love

ಕೋವಿಡ್ ಸೋಂಕಿನ ಬಗ್ಗೆ ಎಚ್ಚರವಹಿಸಿ, ಬೂಸ್ಟರ್ ಡೋಸ್ ತಪ್ಪದೇ ಪಡೆಯಿರಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ: ಜಿಲ್ಲೆಯ ಸಾರ್ವಜನಿಕರು ಕೋವಿಡ್ ನಿಯಂತ್ರಣಕ್ಕೆ ಅಗತ್ಯವಿರುವ ಮುಂಜಾಗ್ರತ ಕ್ರಮಗಳನ್ನು ಪಾಲಿಸುವುದರ ಜೊತೆಗೆ ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ಅನ್ನು ತಪ್ಪದೇ ಪಡೆಯಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸಲಹೆ ನೀಡಿದರು.

ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲಾ ಕೋವಿಡ್ ಮುನ್ನೆಚ್ಚರಿಕೆ ಮತ್ತು ತಾಂತ್ರಿಕ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನಸಾಮಾನ್ಯರು ಕೋವಿಡ್ ಸಾಂಕ್ರ‍್ರಾಮಿಕ ರೋಗದ ಬಗ್ಗೆ ಆತಂಕ ಪಡದೇ ಸರಳ ಮುನ್ನೆಚ್ಚರಿಕಾ ಕ್ರಮಗಳಾದ ಸಾಮಾಜಿಕ ಅಂತರ ಕಾಪಾಡುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು, ಮಾಸ್ಕ್ಗಳನ್ನು ಧರಿಸುವುದು ಸೇರಿದಂತೆ ಮತ್ತಿತರ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಈಗಾಗಲೇ 2 ಡೋಸ್ ಕೋವಿಡ್ ಲಸಿಕೆ ಪಡೆದಿರುವವರು ಬೂಸ್ಟರ್ ಡೋಸ್ ಅನ್ನು ಪಡೆಯಬೇಕು ಎಂದರು.

ನಮ್ಮ ನೆರೆಯ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಮಿತಿಮೀರಿದ್ದು, ನಮ್ಮ ದೇಶದಲ್ಲಿಯೂ ಹರಡುವ ಸಾಧ್ಯತೆ ಇರುವ ಹಿನ್ನಲೆ, ಅಗತ್ಯ ಕೋವಿಡ್ ನಿಯಂತ್ರಣ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದ್ದು, ಸರ್ಕಾರ ಮಾರ್ಗಸೂಚಿಗಳನ್ನು ಸಹ ಹೊರಡಿಸಿದ್ದು, ಅವುಗಳನ್ನು ಎಲ್ಲರೂ ಪಾಲಿಸಬೇಕು ಎಂದರು.

ಆಸ್ಪತ್ರೆಗಳಿಗೆ ಬರುವ ಶೀತ, ನೆಗಡಿ, ಕೆಮ್ಮು, ಜ್ವರದ ಲಕ್ಷಣಗಳಿರುವ ರೋಗಿಗಳಿಗೆ, ಹೊರದೇಶದಿಂದ ಬಂದವರಿಗೆ, ಕೋವಿಡ್ ರೋಗಿಗಳ ಸಂಪರ್ಕಿತರಿಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದ ಅವರು ಪಾಸಿಟಿವ್ ಫಲಿತಾಂಶ ಬಂದವರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಿಕೊಡಬೇಕು ಎಂದರು.

ಜಿಲ್ಲೆಯಲ್ಲಿ ಈವರೆಗೆ ಶೇ.30 ರಷ್ಟು ಕೋವಿಡ್ ಬೂಸ್ಟರ್ ಡೋಸ್‌ಗಳನ್ನು ಪಡೆದಿದ್ದಾರೆ. ಪಡೆಯದೇ ಇರುವವರು ಆದ್ಯತೆಯ ಮೇಲೆ ಲಸಿಕೆಯನ್ನು ಪಡೆಯಬೇಕು. 60 ವರ್ಷ ಮೇಲ್ಪಟ್ಡವರಲ್ಲಿ ಶೇ.67 ರಷ್ಟು ಬೂಸ್ಟರ್ ಲಸಿಕೆಯನ್ನು ನೀಡಲಾಗಿದೆ. ಇದು ಪ್ರತಿಶತ 100 ರಷ್ಟು ನೀಡಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದ ಅವರು, ಪ್ರತೀ ಬುಧವಾರ ತಾಲೂಕು ಕೇಂದ್ರಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ಕ್ಯಾಂಪ್‌ಗಳನ್ನು ಆಯೋಜಿಸಬೇಕೆಂದು ಸೂಚನೆ ನೀಡಿದರು.

ಕೋವಿಡ್ ರೋಗಿಗಳ ನಿರ್ವಹಣೆಗಾಗಿ ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಕನಿಷ್ಠ ಸಂಖ್ಯೆಯ ಐಸೋಲೇಶನ್ ಬೆಡ್‌ಗಳನ್ನು ಮೀಸಲಿಡಬೇಕು ಎಂದ ಅವರು, ಪ್ರಕರಣಗಳ ಸಂಖ್ಯೆ ಏರಿಕೆಯಾದಲ್ಲಿ ನಿರ್ವಹಣೆಗೆ ಎಲ್ಲಾ ಹಂತಗಳ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸನ್ನದ್ಧರಾಗಿರಬೇಕು ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್ ಹಾಗೂ ಆಕ್ಸಿಜಿನ್ ಪೂರೈಕಾ ಘಟಕಗಳ ವ್ಯವಸ್ಥೆಯನ್ನು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಒಂದೊಮ್ಮೆ ದುರಸ್ಥಿ ಅಗತ್ಯವಿದ್ದಲ್ಲಿ ಕೂಡಲೇ ಅವುಗಳನ್ನು ಸರಿಪಡಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ವೈದ್ಯಕೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿನಿಮಾ ಹಾಲ್, ಮಾಲ್, ಹೋಟೆಲ್‌ಗಳು ಸೇರಿದಂತೆ ಮತ್ತಿತರ ಒಳಾಂಗಣ ಪ್ರದೇಶದ ಚಟುವಟಿಕೆಗಳಲ್ಲಿ ಮಾಸ್ಕ್ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದ ಅವರು, ಹೊರದೇಶದಿಂದ ಬಂದಿರುವವರ ಬಗ್ಗೆ ಸಂಬAಧಪಟ್ಟ ಪ್ರಾಧಿಕಾರದಿಂದ ಮಾಹಿತಿ ಪಡೆದು ಅವರ ಮೇಲೆ ನಿಗಾವಹಿಸಬೇಕು ಎಂದರು.

ತಾಲೂಕು, ಗ್ರಾಮ ಪಂಚಾಯತ್ ಮಟ್ಟಗಳ ಸಮಿತಿಗಳು ಕಾರ್ಯಪ್ರವೃತ್ತವಾಗಬೇಕು ಎಂದ ಅವರು, ಕೋವಿಡ್ ರೋಗಿಗಳಿಗೆ ಚಿಕಿತ್ಸೆಗಳನ್ನು ನೀಡುವುದರ ಜೊತೆಗೆ ಟೆಲಿ ಮೆಡಿಸನ್ ಮೂಲಕ ಸಹ ನೀಡಿ, ಜಿಲ್ಲೆಯಲ್ಲಿ ಕೋವಿಡ್ ಸಂಬAಧ 24*7 ಸಹಾಯವಾಣಿ ಸಂಖ್ಯೆ 9663950222, 9663957222 ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆಯು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿದ್ದು, ಈಗಾಗಲೇ ವಿತರಿಸಲಾಗುತ್ತಿದೆ. ಆದರೆ ಕೋವಿಶೀಲ್ಡ್ ಲಸಿಕೆಯ ದಾಸ್ತಾನು ಇರುವುದಿಲ್ಲ. ಅಗತ್ಯವಿರುವವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಗಧಿತ ಮೊತ್ತ ಪಾವತಿಸಿ ಪಡೆಯಬಹುದಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ಹಾಕೆ ಅಕ್ಷಯ್ ಮಚ್ಚಿಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Spread the love