ಕೋವಿಡ್-19: ಮಾಸ್ಕ್ ಗೆ ಹೆಚ್ಚಿನ ಬೆಲೆ ಪಡೆದರೆ ಕ್ರಮ: ಡಿಸಿ ಜಗದೀಶ್ ಎಚ್ಚರಿಕೆ
ಉಡುಪಿ: ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ನಿಗದಿಗಿಂತ ಹೆಚ್ಚಿನ ದರಕ್ಕೆ ಮಾರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್-19 ಸೇರಿದಂತೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್‌ಗಳು ಅಗತ್ಯವಾಗಿ ಬೇಕಿದ್ದು, ಅಂಗಡಿ ಮಾಲೀಕರು ಹೆಚ್ಚಿನ ಬೆಲೆಗೆ ಮಾರುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.
ಜತೆಗೆ, ಅಗತ್ಯ ವಸ್ತುಗಳನ್ನು ದಾಸ್ತಾನು ಇರಿಸಿ ಕೃತಕ ಅಭಾವ ಸೃಷ್ಟಿಸಿ, ವಸ್ತುಗಳ ಬೆಲೆಯನ್ನು ಹೆಚ್ಚಿಸುವಂತಿಲ್ಲ. ಔಷಧ ಅಂಗಡಿಗಳಲ್ಲಿ ಕೆಮ್ಮು ಇರುವ ಸಿಬ್ಬಂದಿ ಮಾಸ್ಕ್ ಧರಿಸದೆ ಗ್ರಾಹಕರಿಗೆ ಔಷಧಿ ಮಾರಾಟ ಮಾಡುತ್ತಿರುವುದಾಗಿ ದೂರುಗಳು ಬಂದಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಸಾರ್ವಜನಿಕರಿಗೆ ತೊಂದರೆಯಾದರೆ ಶುಲ್ಕ ರಹಿತ ಸಂಖ್ಯೆ: 1077, ದೂರವಾಣಿ: 0820-2574802 ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.
ಸಹಾಯವಾಣಿ: ಕೋವಿಡ್-19 ಬಗ್ಗೆ ಜಿಲ್ಲಾ ಮಟ್ಟದ ಸಹಾಯವಾಣಿಯನ್ನು ಮೇಲ್ದರ್ಜೆಗೇರಿಸಿದ್ದು, ಸಾರ್ವಜನಿಕರು 24 ಗಂಟೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆಯಬಹುದು. ಸೋಂಕಿನ ಲಕ್ಷಣ, ಐಸೋಲೇಶನ್ ವಾರ್ಡ್, ಲ್ಯಾಬ್ ಮತ್ತು ಸೋಂಕಿತ ರೋಗಿಯ ಸ್ಥಳಾಂತರಿಸುವ ಬಗ್ಗೆ ತಾಂತ್ರಿಕ ಮಾಹಿತಿ ನೀಡುವ ಸಹಾಯವಾಣಿಯನ್ನು ಜಿಲ್ಲಾ ಕೇಂದ್ರದಲ್ಲಿ ಆರಂಭಿಸಲಾಗಿದೆ.
ಸಹಾಯವಾಣಿಯನ್ನು ಜಿಲ್ಲಾ ಕೇಂದ್ರದಲ್ಲಿ ಆರಂಭಿಸಲಾಗಿದ್ದು, ಸಾರ್ವಜನಿಕರು 9663957222, 9663950222 ಸಂಪರ್ಕಿಸಬಹುದು