ಕೋವಿಡ್-19 ಹಿನ್ನಲೆ ; 2021 ರ ಅತ್ತೂರು ಸಂತ ಲಾರೆನ್ಸರ ಬಸಿಲಿಕದ ವಾರ್ಷಿಕ ಮಹೋತ್ಸವ ಸರಳ ಆಚರಣೆ

Spread the love

ಕೋವಿಡ್-19 ಹಿನ್ನಲೆ ; 2021 ರ ಅತ್ತೂರು ಸಂತ ಲಾರೆನ್ಸರ ಬಸಿಲಿಕದ ವಾರ್ಷಿಕ ಮಹೋತ್ಸವ ಸರಳ ಆಚರಣೆ

ಕಾರ್ಕಳ: ಕೋವಿಡ್-19 ಮಾರ್ಗದರ್ಶಿ ನಿಯಮಗಳ ಪ್ರಕಾರ, ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಆಚರಣೆಯು 2021 ರ ಜನವರಿ ತಿಂಗಳಿನಲ್ಲಿ ಸರಳವಾಗಿ ನೆರವೇರಲಿದೆ. ಈ ನಿಮಿತ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಭೆ ಸೇರುವುದನ್ನು ನಿಷೇಧಿಸಲಾಗಿದೆ.

ಸಂತ ಲಾರೆನ್ಸರ ನವೇನಾ ಪ್ರಾರ್ಥನೆ ಜನವರಿ 17 ರಂದು ಆರಂಭಗೊಳ್ಳುವುದು. ಬೆಳಿಗ್ಗೆ 8.00 ಗಂಟೆಗೆ ಬಲಿಪೂಜೆ ಅನಂತರ ನವೇನಾ ಪ್ರಾರ್ಥನೆ. ನವೇನಾ ಪ್ರಾರ್ಥನೆಗೆ ಕೋರಿಕೆಗಳು, ಮಹೋತ್ಸವಕ್ಕೆ ಫಿರ್ಜೆಂತ್ ಹಾಗೂ ಮುಡೋಮ್ಗಳನ್ನು ಮುಂಚಿತವಾಗಿ ಕಳುಹಿಸಿಕೊಡಿ ಪುಣ್ಯಕ್ಷೇತ್ರದ ವತಿಯಿಂದ ಮನವಿ ಮಾಡಲಾಗಿದೆ.

ಪುಣ್ಯಕ್ಷೇತ್ರದಲ್ಲಿ ಜನಸಂದಣಿಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ, ಭಕ್ತಾದಿಗಳ ಆಧ್ಯಾತ್ಮಿಕ ಒಳಿತಿಗಾಗಿ ಜನವರಿ 18 ರಿಂದ ಜನವರಿ 28 ರವರೆಗೆ ಪ್ರತಿದಿನ ಐದು ಬಲಿಪೂಜೆಗಳು ನೆರವೇರಲಿರುವುವು. ದಿನದ ಪ್ರಥಮ ಬಲಿಪೂಜೆ ಬೆಳಿಗ್ಗೆ 8.00 ಗಂಟೆಗೆ ಹಾಗೂ ಅಂತಿಮ ಬಲಿಪೂಜೆ ಸಂಜೆ 5.00 ಗಂಟೆಗೆ ನೆರವೇರುವುದು.

ದೇವಾಲಯದಲ್ಲಿ ಸಾಮಾಜಿಕ ಅಂತರವನ್ನು ಪಾಲಿಸಿ ಬಲಿಪೂಜೆಯೊಂದರಲ್ಲಿ ಪಾಲ್ಗೊಳ್ಳಲು ಕೇವಲ 200 ಭಕ್ತಾದಿಗಳಿಗೆ ಮಾತ್ರ ಅವಕಾಶವಿರುತ್ತದೆ.

ಬಸಿಲಿಕದ ವಠಾರದಲ್ಲಿ ಹಾಗೂ ವಿಶೇಷವಾಗಿ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಳ್ಳುವವರು ಮಾಸ್ಕ್ ಧರಿಸುವುದು ಖಡ್ಡಾಯವಾಗಿರುತ್ತದೆ

ಬಲಿಪೂಜೆಯ ಅಂತ್ಯದಲ್ಲಿ ಯಾಜಕರು ಭಕ್ತಾದಿಗಳ ಶಿರಗಳ ಮೇಲೆ ಕೈಗಳನ್ನಿಟ್ಟು ಪ್ರಾರ್ಥಿಸುವ ವಿದಿಯು ಇರುವುದಿಲ್ಲ. ಅಂತೆಯೇ ಸಂತ ಲಾರೆನ್ಸರ ಪವಿತ್ರ ಅವಶೇಷವನ್ನು ಬಹಿರಂಗ ಸನ್ಮಾನಕ್ಕಾಗಿ ಹೊರಗೆ ಇಡಲಾಗುವುದಿಲ್ಲ. ಬದಲಾಗಿ ಪ್ರತಿ ಬಲಿಪೂಜೆಯ ಅಂತ್ಯದಲ್ಲಿ ಅಸ್ವಸ್ಥರಿಗಾಗಿ ವಿಶೇಷ ಪ್ರಾರ್ಥನೆ ಹಾಗೂ ಸಂತ ಲಾರೆನ್ಸರ ಪವಿತ್ರ ಅವಶೇಷದ ಆಶೀರ್ವಾದವನ್ನು ನೀಡಲಾಗುವುದು.

ಪುಣ್ಯಕ್ಷೇತ್ರದ ವಠಾರದಲ್ಲಿ ಹರಕೆಯ ಮೇಣದ ಬತ್ತಿಗಳು ಹಾಗೂ ಧಾರ್ಮಿಕ ವಸ್ತುಗಳ ಪುಣ್ಯಕ್ಷೇತ್ರದ ಸ್ಟಾಲ್ನ ಹೊರತು ಇತರ ಯಾವುದೇ ಸ್ಟಾಲ್ ಇರುವುದಿಲ್ಲ. ಭಕ್ತಾದಿಗಳಿಂದ ಹರಕೆಯ ಪೂಜೆಗಳನ್ನು ಸ್ವೀಕರಿಸಲಾಗುವುದು.

ನವೇನಾ ಹಾಗೂ ಮಹೋತ್ಸವದ ದಿನಗಳಲ್ಲಿ ಸಂಜೆಯ ಅಂತಿಮ ಪೂಜೆಯ ಬಳಿಕ, 6.30 ಗಂಟೆಯಿಂದ ಮರುದಿನ ಬೆಳಿಗ್ಗೆ 7.00 ಗಂಟೆಯವರೆಗೆ ಪುಣ್ಯಕ್ಷೇತ್ರದ ವಠಾರವು ಸಾರ್ವಜನಿಕರಿಗೆ ಮುಚ್ಚಿರುವುದು ಎಂದು ಪ್ರಕಟಣೆ ತಿಳಿಸಿದೆ.


Spread the love