ಕೌಶಲ್ಯಭರಿತ ಶಿಕ್ಷಣ ನೀಡುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶ – ಬಿಷಪ್ ಜೆರಾಲ್ಡ್ ಲೋಬೊ

Spread the love

ಕೌಶಲ್ಯಭರಿತ ಶಿಕ್ಷಣ ನೀಡುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶ – ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಮಾನಸಿಕ ಬೆಳವಣಿಗೆ ಪೂರಕವಾದ ಶಿಕ್ಷಣ ನೀಡುವುದರೊಂದಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಮಹತ್ವದ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಅಭಿಪ್ರಾಯಪಟ್ಟರು.

ಅವರು ಶನಿವಾರ ಕಥೊಲಿಕ್ ಎಜುಕೇಶನಲ್ ಸೊಸೈಟಿ ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಉಡುಪಿ ಚರ್ಚ್ ವಠಾರದಲ್ಲಿರುವ ಧರ್ಮಾಧ್ಯಕ್ಷರ ನಿವಾಸದ ನೆಲಮಹಡಿಯ ಆವೆ ಮರಿಯಾ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಣ ಕೇವಲ ಜ್ಞಾನ ಸಂಪಾದನೆಯಲ್ಲ ಬದಲಾಗಿ ಅದು ಮಾನವನ ವಿಕಾಸವಾಗಿದೆ. ಶಿಕ್ಷಣ ಎಂದರೆ ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯಾಗಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಶಾಲೆಗಳ ಹೆಚ್ಚಿನ ಗಮನ ಇಂದು ಫಲಿತಾಂಶದೆಡೆಗೆ ಇದ್ದು, ಶಿಕ್ಷಣ ಮುಖ್ಯವಾಗಿ ಮಕ್ಕ ದೇಹ ಮಾನಸಿಕ ಬೆಳವಣಿಗೆ, ದೈಹಿಕ ಬೆಳವಣಿಗೆ, ಹೃದಯ ವೈಶಾಲ್ಯತೆ ಮತ್ತು ಆತ್ಮದ ಬೆಳವಣಿಗೆ ಯಾದಾಗ ಮಾತ್ರ ನೈಜ ಶಿಕ್ಷಣ ನಮ್ಮ ಮಕ್ಕಳಿಗೆ ಲಭಿಸಿದಂತಾಗುತ್ತದೆ. ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಸದಾ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವಲ್ಲಿ ತಮ್ಮ ಪಾತ್ರವನ್ನು ವಹಿಸುತ್ತಿವೆ.

ಕೇಂದ್ರ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದು, ಪಠ್ಯ ಪುಸ್ತಕದ ಜ್ಞಾನದ ಜೊತೆಗೆ ಕೌಶಲ್ಯಭರಿತ ಶಿಕ್ಷಣ ಮಕ್ಕಳಿಗೆ ಲಭಿಸಬೇಕು ಎನ್ನುವುದು ಈ ನೀತಿಯ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ನಮ್ಮ ಶಿಕ್ಷಕರು ಸಂಪೂರ್ಣವಾಗಿ ಸಿದ್ದಗೊಳ್ಳಬೇಕಿದೆ ಎಂದರು.

ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಲು ನೀಡುವ ಶಿಕ್ಷಣ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಒಂದು ದೇಶ ಅಭಿವೃದ್ಧಿ ಹೊಂದಬೇಕಾಗದರೆ ಅದರಲ್ಲಿ ಶಿಕ್ಷಕರ ಪಾತ್ರ ಹಿರಿದಾದುದು. ಶಿಕ್ಷಕರು ಮಕ್ಕಳಲ್ಲಿನ ಅನನ್ಯ ಪ್ರತಿಭೆಯನ್ನು ಗುರುತಿಸಿ ಅದನ್ನು ಪೊಷೀಸುವ ಕೆಲಸ ಮಾಡಿದಾಗ ಅವರ ವೃತ್ತಿಗೆ ನಿಜವಾದ ಸಾರ್ಥಕತೆ ಲಭಿಸುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಿಕ್ಷಣ ಇಲಾಖೆ ಸಚಿವಾಲಯದ ನಿವೃತ್ತ ಶಾಖಾಧಿಕಾರಿ ಅಕ್ಬರ್ ಆಲಿ ಭಾಗವಹಿಸಿ ಶುಭ ಹಾರೈಸಿದರು.

ಧರ್ಮಪ್ರಾಂತ್ಯ ಆಡಳಿತಕ್ಕೆ ಒಳಪಟ್ಟ ಶಾಲಾ, ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಕಳೆದ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾದ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು, ಕಳೆದ ಶೈಕ್ಷಣಿಕ ವರ್ಷದಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಶಾಲೆಗಳನ್ನು, ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಳೆದ ಒಂದು ವರ್ಷದಲ್ಲಿ ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಶಿಕ್ಷಣ ಸೊಸೈಟಿ ಆಡಳಿತಕ್ಕೊಳಪಟ್ಟ ಶಾಲೆಗಳಲ್ಲಿ ನಿಧನರಾದ ಶಿಕ್ಷಕರಿಗೆ ವಿದ್ಯಾರ್ಥೀಗಳಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಉಡುಪಿ ಸಂತ ಮೇರಿ ವಿದ್ಯಾಸಂಸ್ಥೆಗಳ ಸಂಚಾಲಕ ವಂ| ಚಾರ್ಲ್ಸ್ ಮಿನೇಜಸ್ ಸ್ವಾಗತಿಸಿ ಕೆಥೊಲಿಕ್ ಶಿಕ್ಷಣ ಸೊಸೈಟಿ ಉಡುಪಿ ಧರ್ಮಪ್ರಾಂತ್ಯ ಕಾರ್ಯದರ್ಶಿ ವಂ|ವಿನ್ಸೆಂಟ್ ಕ್ರಾಸ್ತಾ ವಂದಿಸಿದರು. ವಿನಯ್ ಸುವರ್ಣ ಮತ್ತು ಅಮೃತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Spread the love

Leave a Reply

Please enter your comment!
Please enter your name here