
ಕೌಶಲ್ಯಾಧಾರಿತ ಶಿಕ್ಷಣವಿಲ್ಲದೆ ನಿರುದ್ಯೋಗ ಹೆಚ್ಚಳ
ಮೈಸೂರು: ಸ್ವಾತಂತ್ರ್ಯ ನಂತರವೂ ಬ್ರಿಟಿಷರ ಮೆಕಾಲೆ ಶಿಕ್ಷಣ ಪದ್ಧತಿ ಮುಂದುವರಿದಿದ್ದು, ಕೌಶಲಾಧಾರಿತ ಶಿಕ್ಷಣ ದೊರೆಯದ್ದರಿಂದ ನಿರುದ್ಯೋಗ ಹೆಚ್ಚಾಗಿದೆ ಎಂದು ಇತಿಹಾಸ ತಜ್ಞ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್ ಅಭಿಪ್ರಾಯಪಟ್ಟಿದ್ದಾರೆ.
ಚಾಮರಾಜಪುರಂನಲ್ಲಿ ಶ್ರೀ ಜಯಚಾಮರಾಜ ಅರಸು ಎಜುಕೇಶನ್ ಟ್ರಸ್ಟ್ ಶ್ರೀ ಚಾಮರಾಜೇಂದ್ರ ಸ್ಕೂಲ್ ಆಫ್ ಎಕ್ಸಲೆನ್ಸ್ ಲೋಕಾರ್ಪಣೆ ಮಾಡಿ ಅವರು ಮಾತನಾಡಿದ ಅವರು, ಶಿಕ್ಷಣ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆಗಾಗಿಯೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ ಎಂದು ಲಕ್ಷಾಂತರ ಮಂದಿ ಎಂ.ಎ, ಪಿಎಚ್‌ಡಿ ಪದವಿ ಪಡೆದರೂ ಅರ್ಹತೆಗೆ ತಕ್ಕಂತೆ ಕೆಲಸ ಸಿಗುತ್ತಿಲ್ಲ. ಯುವಕರು ಕೇವಲ ವಿದ್ಯಾವಂತರಾಗುತ್ತಿದ್ದಾರೆ. ಆದರೆ ಕೌಶಲವಂತರಾಗುತ್ತಿಲ್ಲ. ಇದರಿಂದಾಗಿ ನಿರುದ್ಯೋಗ ಹೆಚ್ಚಳವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
1986ರ ಶಿಕ್ಷಣ ನೀತಿ ನಂತರ ಹೊಸ ನೀತಿ ಜಾರಿಗೊಂಡಿಲ್ಲ. ನೈತಿಕ ಹಾಗೂ ಮೌಲ್ಯಾಧಾರಿತ ಕೌಶಲ ಪ್ರಧಾನ ಶಿಕ್ಷಣ ಬೇಕಿದೆ. ಎನ್‌ಇಪಿಯಿಂದಾಗಿ ಇಷ್ಟಪಟ್ಟ ವಿಷಯ ಕಲಿಯಬಹುದು. ವಿದ್ಯಾರ್ಥಿಗಳು ತಮಗೆ ಇಷ್ಟವಾದ ವಿಷಯ ಆಯ್ಕೆ ಮಾಡಿಕೊಳ್ಳುವ ಅವಕಾಶ ಇರಲಿದ್ದು, ಅಂತರ್‌ಶಿಸ್ತೀಯ ಮಾದರಿಯ ಪಠ್ಯಕ್ರಮ ಇರಲಿದೆ. ಗಣಿತವನ್ನು ಕಥೆ, ನಾಟಕದ ರೂಪದಲ್ಲಿ ಕಲಿಯಬಹುದು ಎಂದರು.
ಮಹಾರಾಜರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ರಾಂತಿ ಮಾಡಿದರು. ಕೃಷಿ ಹಾಗೂ ಕೈಗಾರಿಕೆಗೂ ಆದ್ಯತೆ ನೀಡಿದರು. ಹೀಗಾಗಿಯೇ ಮೈಸೂರು ಸಂಸ್ಥಾನ ಮಾದರಿಯಾಗಿತ್ತು. ಆಗಿನ ಕಾಲದ ಭಾರತದ ಯಾವುದೇ ಭಾಗಕ್ಕೆ ಹೋಲಿಸಿದರೂ ಮೈಸೂರು ಸಂಸ್ಥಾನದ ಶಿಕ್ಷಣ ಮಟ್ಟ ಎತ್ತರದ ಸ್ಥಾನ ಹೊಂದಿತ್ತು ಎಂದರು.
ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಮಾತನಾಡಿ, ವಿದ್ಯೆಯನ್ನು ದಾನ ಮಾಡಿದರೆ ವಾಪಸ್ ಪಡೆಯಲಾಗದು. ಹೀಗಾಗಿಯೇ ಶತಮಾನದ ಹಿಂದೆಯೇ ವಾಣಿವಿಲಾಸ, ಚಾಮರಾಜೇಂದ್ರ ಶಾಲೆಗಳನ್ನು ಸ್ಥಾಪಿಸಲಾಯಿತು. ಕಾಲೇಜುಗಳು, ವಿಶ್ವವಿದ್ಯಾಲಯ ಸ್ಥಾಪನೆಯಾಗಿವೆ ಎಂದು ಸ್ಮರಿಸಿದರು.
ಚಾಮರಾಜೇಂದ್ರ ಒಡೆಯರ್ ಅವರು 1881ರಲ್ಲೇ ಪ್ರಜಾಪ್ರತಿನಿಧಿ ಸಭೆ ಸ್ಥಾಪಿಸಿದರು. ಸಭೆ, ಚಿಕಾಗೊದಲ್ಲಿ ವಿಶ್ವ ಧರ್ಮ ಸಮ್ಮೇಳನಕ್ಕೆ ವಿವೇಕಾನಂದರನ್ನು ಕಳುಹಿಸಿಕೊಟ್ಟರು. ಕೈಗಾರಿಕೆ, ಕೃಷಿಗೆ ಸಮಾನ ಪ್ರೋತ್ಸಾಹ ನೀಡಿದರು ಎಂದರು.
ಚಾಮರಾಜೇಂದ್ರ ಉತ್ಕೃಷ್ಠತಾ ಶಾಲೆಯು ಮಾದರಿ ಶಾಲೆಯಾಗಿದ್ದು, ಎನ್‌ಇಪಿ ಅಳವಡಿಸಿಕೊಂಡಿದೆ ಎಂದರು. ಟ್ರಸ್ಟ್ ಅಧ್ಯಕ್ಷ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶಾಲೆಯ ವೆಬ್‌ಸೈಟ್ ಲೋಕಾರ್ಪಣೆ ಮಾಡಿದರು.
ಡಿಡಿಪಿಐ ರಾಮಚಂದ್ರರಾಜೇ ಅರಸ್, ಟ್ರಸ್ಟ್‌ನ ಕಾರ್ಯದರ್ಶಿ ಮಹೇಶ್ ಎನ್. ಅರಸ್, ಭಾರತೀ ಶ್ರೀಧರ್ ರಾಜೇ ಅರಸ್, ಪದ್ಮಶ್ರೀ ಅರಸ್ ಇದ್ದರು.