
ಕ್ಯಾಂಪ್ಕೋ ಸಂಸ್ಥೆಗೆ ವಂಚನೆ : ಆರೋಪಿಯನ್ನು ವಶಕ್ಕೆ ಪಡೆದ ಪುತ್ತೂರು ಪೊಲೀಸರು
ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಗೆ ಕೊಕ್ಕೋ ಡ್ರೈಬೀನ್ಸ್ ಸರಬರಾಜು ವ್ಯವಹಾರದಲ್ಲಿ ವಂಚನೆ ಮಾಡಿದ್ದ ಆರೋಪಿಯನ್ನು ಮುಂಬೈಯಲ್ಲಿ ಮಂಗಳವಾರ ವಶಕ್ಕೆ ಪಡೆದುಕೊಂಡ ಪುತ್ತೂರು ಪೊಲೀಸರು ಬುಧವಾರ ಪುತ್ತೂರು ನಗರ ಠಾಣೆಗೆ ಕರೆತಂದಿದ್ದಾರೆ.
2016ನೇ ಇಸವಿಯಲ್ಲಿ ಬಂಟ್ವಾಳ ತಾಲೂಕಿನ ಶಂಭೂರು ಎಂಬಲ್ಲಿರುವ ಕೋಸ್ಪಾಕ್ ಏಶಿಯ ಇಂಟರ್ ನ್ಯಾಷನಲ್ ಕಂಪೆನಿ ಲಿ. ಎಂಬ ಕೊಕ್ಕೋ ಸರಬರಾಜು ಸಂಸ್ಥೆಯ ಮಾಲಕ ಮಂಗಳೂರಿನ ಕುಲಶೇಕರ ನಿವಾಸಿ ಜೀವನ್ ಲೋಬೋ ಬಿನ್ ಗ್ರೆಗರಿ ಲೋಬೋ ಎಂಬಾತನಿಗೆ ಕ್ಯಾಂಪ್ಕೋ ಸಂಸ್ಥೆಯು ವಿದೇಶದಿಂದ ಕೊಕ್ಕೋ ಖರೀದಿಗೆ ಷರತ್ತುಬದ್ಧ ಖರೀದಿ ಆದೇಶವನ್ನು ನೀಡಿದ್ದು, ಅದರಂತೆ ಜೀವನ್ ಲೋಬೋ ದುಬೈಯಲ್ಲಿದ್ದ ಇನ್ನೊಬ್ಬ ಭಾರತೀಯ ಪ್ರಜೆ ವಿನ್ಸಿ ಪಿಂಟೋ ಮಾಲಕತ್ವದಲ್ಲಿ ಸಂಸ್ಥೆಗೆ ಕೊಕ್ಕೋ ಡ್ರೈಬೀನ್ಸ್ ಸರಬರಾಜು ಮಾಡುತ್ತಿದ್ದರು.
ಆಫ್ರಿಕಾದಲ್ಲಿ ಬೆಳೆದ ಕೊಕ್ಕೋ ಬೀಜಗಳನ್ನು ಥಾಯಿಲೆಂಡ್ ದೇಶದಲ್ಲಿ ಬೆಳೆದ ಕೊಕ್ಕೋ ಬೀಜಗಳೆಂದು ನಕಲಿ ದಾಖಲೆ ಸೃಷ್ಠಿಸಿ, ಖೋಟಾ ಗುರುತು ಮತ್ತು ಸೃಷ್ಠಿಸಿದ ಪೋರ್ಜರಿ ದಾಖಲೆಗಳಿಂದ ನಂಬಿಸಿ ಥಾಯಿಲೆಂಡ್ ದೇಶದ ಉತ್ಪನ್ನವೆಂದು ನಂಬಿಸಿ ಆರೋಪಿಗಳು ಕ್ಯಾಂಪ್ಕೋ ಸಂಸ್ಥೆಗೆ ಮಾರಾಟ ನಡೆಸಿ ವಂಚನೆ ಮಾಡಿದ್ದಾರೆ. ಇದರಿಂದಾಗಿ ಸಂಸ್ಥೆಗೆ ರೂ. 9,71,50,113 ನಷ್ಟ ಉಂಟು ಮಾಡಿದ್ದಾರೆ ಎಂದು ಕ್ಯಾಂಪ್ಕೋ ಸಂಸ್ಥೆಯ ಡೆಪ್ಯುಟಿ ಜನ್ರಲ್ ಮೆನೇಜರ್ ಫ್ರಾನ್ಸಿಸ್ ಡಿಸೋಜ ಅವರು 20-6-2020ರಂದು ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ಓರ್ವ ಆರೋಪಿಯಾದ ವಿನ್ಸಿ ಪಿಂಟೋನನ್ನು ಮಂಗಳವಾರ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಿಂದ ಹೊರಡಿಸಿ ಲುಕ್ಔಟ್ ನೋಟೀಸ್ ಆಧಾರದಲಿ ಇಮಿಗ್ರೇಶನ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಆರೋಪಿ ವಿನ್ಸಿ ಪಿಂಟೋ ನನ್ನು ಬಳಿಕ ಪುತ್ತೂರು ನಗರ ಠಾಣೆಗೆ ಕರೆತರಲಾಗಿತ್ತು. ಆರೋಪಿಯನ್ನು ದಸ್ತಗಿರಿ ಮಾಡಿರುವ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.