ಕ್ರಿಸ್ಮಸ್ ಹಬ್ಬದ ವೇಳೆ ಕ್ರೈಸ್ತರ ಮೇಲಿನ ದಾಳಿ: ಕಥೊಲಿಕ್ ಸಭಾ ಉಡುಪಿ ಪ್ರದೇಶ ಖಂಡನೆ
ಉಡುಪಿ: ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕ್ರೈಸ್ತ ಸಮುದಾಯ ಮೇಲೆ ನಡೆದಿರುವ ದಾಳಿಗಳನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ತೀವ್ರವಾಗಿ ಖಂಡಿಸಿದೆ.
ಕೇರಳ ಹಾಗೂ ಇತರ ಹಲವು ರಾಜ್ಯಗಳಲ್ಲಿ ಶಾಂತಿಯುತವಾಗಿ ಕ್ರಿಸ್ಮಸ್ ಕ್ಯಾರಲ್ಸ್ ಹಾಡುತ್ತಿದ್ದವರ ಮೇಲೆ, ಚರ್ಚುಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದವರನ್ನು ಗುರಿಯಾಗಿಸಿ ಮತಾಂಧ ಶಕ್ತಿಗಳು ಸೇರಿಕೊಂಡು ವ್ಯವಸ್ಥಿತ ದಾಳಿ ನಡೆಸಿದ್ದಾರೆ. ಇದು ತಮ್ಮ ನಂಬಿಕೆಯನ್ನು ಶಾಂತಿಯುತವಾಗಿ ಹಬ್ಬ ಆಚರಿಸುವ, ಕಾನೂನು ಪಾಲಿಸುವ ಕ್ರೈಸ್ತರಿಗೆ ಭಯ ಮತ್ತು ಯಾತನೆಗೆ ಕಾರಣವಾಗಿದೆ.
ಇಂತಹ ಘಟನೆಗಳು ನಮ್ಮ ಸಂವಿಧಾನದ ಚೈತನ್ಯವನ್ನು ತೀವ್ರವಾಗಿ ಘಾಸಿಗೊಳಿಸುತ್ತದೆ. ಮತಾಂಧ ಶಕ್ತಿಗಳು ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಹಿಂಸೆಯನ್ನು ಬೆಂಬಲಿಸುತ್ತವೆ. ವ ಈ ಉದ್ದೇಶಪೂರ್ವಕ ದಾಳಿಗಳು ಭಾರತದಂತಹ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಭಯಮುಕ್ತವಾಗಿ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಿವೆ.
ಕ್ರೈಸ್ತ ಸಮುದಯಾದ ರಕ್ಷಣೆಗಾಗಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಮತ್ತು ಕ್ರೈಸ್ತ ಸಮುದಾಯಕ್ಕೆ ಸೂಕ್ತ ರಕ್ಷಣೆ ನೀಡಬೇಕು ದೇಶದಲ್ಲಿ ಕ್ರೈಸ್ತ ಬಾಂಧವರು ಶಾಂತಿ ಮತ್ತು ಸೌಹಾರ್ದತೆಯ ವಾತಾವರಣದಲ್ಲಿ ಬದುಕಲು ಅವಕಾಶ ಮಾಡಿ ಕೊಡಬೇಕು ಎಂದು ಕಥೊಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷರಾದ ರೋನಾಲ್ಡ್ ಡಿ ಆಲ್ಮೇಡಾ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳನ್ನು ಆಗ್ರಹಿಸಿದ್ದಾರೆ.
