ಕ್ರಿಸ್ ಮಸ್ ಸ್ವಾಗತಿಸುವ ನಿಸರ್ಗದ ‘ಹೂ’

Spread the love

ಕ್ರಿಸ್ ಮಸ್ ಸ್ವಾಗತಿಸುವ ನಿಸರ್ಗದ ‘ಹೂ’

ಈಗ ಎಲ್ಲೆಲ್ಲೂ ಕ್ರಿಸ್ ಮಸ್ ಸಂಭ್ರಮ ಮನೆ ಮಾಡಿದ್ದು, ನಿಸರ್ಗದಲ್ಲಿಯೂ ಕ್ರಿಸ್ ಮಸ್ ಸ್ವಾಗತಕ್ಕೆ ಸಿದ್ಧವಾಗಿ ನಿಂತಿದ್ದೇನೆ ಎಂಬಂತೆ ಕ್ರಿಸ್ ಮಸ್ ಸ್ಟಾರ್ ಹೂ ಕಂಗೊಳಿಸುತ್ತದೆ. ಕ್ರಿಸ್ ಮಸ್ ಸ್ಟಾರ್ ಎಂಬ ಈ ಸುಂದರ ಹೂಗಳನ್ನು ನೋಡದವರು ಇಲ್ಲವೇ ಇಲ್ಲ ಎನ್ನಬೇಕು. ಬೇಲಿ ಅಂಚಿನಿಂದ ಆರಂಭವಾಗಿ ಉದ್ಯಾನದವರೆಗೂ ತನ್ನ ಖ್ಯಾತಿಯನ್ನು ಇಮ್ಮಡಿಸಿದೆ.

ಈ ಹೂವನ್ನು ಸ್ಥಳೀಯರು ಕೆಂಪು ಹೂ ಎಂದು ಕರೆಯುತ್ತಾರೆ. ಆದರೆ ಇದನ್ನು ಕ್ರಿಸ್‌ಮಸ್ ಸ್ಟಾರ್ ಎಂದೇ ಕರೆಯಲಾಗುತ್ತದೆ. ಪಾಯಿನ್ಸೆಟಿಯ ಪಲ್ಚರಿಮ ಯಫೋರ್ಬಿಯೇಸಿ ಎಂಬ ಸಸ್ಯ ಕುಟುಂಬಕ್ಕೆ ಸೇರಿರುವ ಇದಕ್ಕೆ ಕ್ರಿಸ್‌ಮಸ್ ಫ್ಲವರ್ ಪೇಯಿಂಟೆಡ್ ಲೀಫ್, ಲಾಬ್‌ಸ್ಟರ್ ಪ್ಲಾಂಟ್, ಮೆಕ್ಸಿಕಿನ್ ಫ್ಲೇಮ್ ಲೀಫ್ ಎಂಬ ಹೆಸರುಗಳಿವೆ. ಹಿಂದೆ ಎತ್ತರವಾಗಿ ಬೆಳೆದು ಹೂ ಬಿಟ್ಟು ಕಂಗೊಳಿಸುತ್ತಿದ್ದ ತಳಿಗಳನ್ನು ಅಭಿವೃದ್ಧಿ ಮಾಡಿದ್ದು, ಕುಬ್ಜ ತಳಿಗಳನ್ನು ಹೂಕುಂಡ ಸೇರಿದಂತೆ ಉದ್ಯಾನಗಳಲ್ಲಿ ಬೆಳೆಸಲಾಗುತ್ತಿದೆ.

ಮೊದಲಿಗೆ ಕೆಂಪು ಬಣ್ಣದಲ್ಲಷ್ಟೆ ಕಾಣ ಸಿಗುತ್ತಿದ್ದ ಗಿಡಗಳು ಈಗ ಬೇರೆ, ಬೇರೆ ಬಣ್ಣಗಳಿಂದ ಆಕರ್ಷಿಸುತ್ತಿದೆ. ಮೊದಲಿಗೆ ಸುಮಾರು ನಾಲ್ಕೆದು ಮೀಟರ್‌ನಷ್ಟು ಎತ್ತರಕ್ಕೆ ಬೆಳೆಯುತ್ತಿದ್ದ ಈ ಸಸ್ಯ ಮಧ್ಯ ಅಮೆರಿಕದ್ದು ಎಂದು ಹೇಳಲಾಗಿದೆ. ತನ್ನ ವಿಶಿಷ್ಟ ಸೌಂದರ್ಯದಿಂದಾಗಿ ಇತರ ಕಡೆಗಳಿಗೆ ಅಲ್ಲಿಂದ ವರ್ಗಾಯಿಸಲ್ಪಟ್ಟು ಈಗ ಪ್ರಪಂಚದಾದ್ಯಂತ ಬೆಳೆಯುತ್ತಿದೆ. ಕಡು ಹಸಿರು ಬಣ್ಣದಎಲೆಗಳ ಹೊಂದಿದ್ದು, ಮೇಲ್ನೋಟಕ್ಕೆ ಅಂಡಾಕಾರವಾಗಿರುತ್ತದೆ. ಗಿಡದಲ್ಲಿ ಬಿಳಿ ಬಣ್ಣದಿಂದ ಕೂಡಿದ ರಾಸಾಯನಿಕ ದ್ರವವಿದು, ಇದು ವಿಷಕಾರಿಯಾಗಿದೆ. ಸಾಮಾನ್ಯವಾಗಿ ಈ ಸಸ್ಯವು ಅಕ್ಟೋಬರ್ ಅಥವಾ ನವೆಂಬರ್‌ನಿಂದ ಹೂ ಬಿಡಲು ಪ್ರಾರಂಭಿಸಿ ಕ್ರಿಸ್‌ಮಸ್ ವೇಳೆಗೆ ಎಲ್ಲೆಡೆಯೂ ಹೂವಿನಿಂದ ಕಂಗೊಳಿಸುತ್ತಾ ಫೆಬ್ರವರಿ ತನಕವೂ ಇರುತ್ತದೆ.

ಹೂ ಬಿಡುವಿಕೆಯಲ್ಲಿ ಇದು ಇತರೆ ಸಸ್ಯಗಳಿಕ್ಕಿಂತ ಭಿನ್ನವಾಗಿದ್ದು, ಹೂಗಳು ಸಹ ವಿಶೇಷತೆಯಿಂದ ಕೂಡಿರುತ್ತದೆ. ಗಿಡದ ಕೊಂಬೆಗಳ ತುದಿಯಲ್ಲಿ ಕೆಂಪು ಬಣ್ಣದ ಎಲೆಗಳನ್ನೊಳಗೊಂಡ ಪುಷ್ಪಗುಚ್ಛಗಳು ಸೃಷ್ಟಿಯಾಗಿ ಗಿಡ ಪೂರ್ತಿ ಕೆಂಪಾಗಿ ಕಂಗೊಳಿಸುತ್ತವೆ. ಪುಷ್ಪಗಳು (ಹೂ) ಚಿಕ್ಕದಾಗಿದ್ದು, ಹೆಣ್ಣು ಹಾಗೂ ಗಂಡು ಹೂವುಗಳು ಜೊತೆಯಾಗಿ ಸಯಾಥಿಯಮ್ ಎನ್ನುವಂತಹ ವಿಶಿಷ್ಟ ಪುಷ್ಪಗುಚ್ಛ ಉಂಟಾಗಿರುತ್ತದೆ. ನೋಡಲು ಬಟ್ಟಲಿನಾಕಾರದಲ್ಲಿರುವ ಸಯಾಥಿಯಮ್‌ನ ಮೇಲೆ ಹಳದಿ ಬಣ್ಣದ ಮಕರಂದದ ತಟ್ಟೆಗಳು ಇರುತ್ತವೆ.

ಈ ರೀತಿಯ ಹಲವಾರು ಸಯಾಥಿಯಮ್‌ಗಳ ಸುತ್ತ ಕೃತಕವಾಗಿ ತಯಾರು ಮಾಡಿದ ಹೂಗುಚ್ಛವಿದ್ದು, ಇದರ ಅಡಿಯಲ್ಲಿ ಕೆಂಪು ಬಣ್ಣದ ಎಲೆಗಳು ಸೇರಿಕೊಂಡಿರುತ್ತವೆ. ಈ ಎಲೆಗಳೇ ಸಸ್ಯಕ್ಕೂ ಹೂಗಳಿಗೂ ಮೆರಗು ನೀಡಿರುವುದು ಎಂದರೆ ತಪ್ಪಾಗಲಾರದು. ಕೆಂಪು ಎಲೆಗಳ ಆಕರ್ಷಣೆಗೆ ಒಳಗಾದ ಕೀಟಗಳು ಹೂವಿನೆಡೆಗೆ ಬರುತ್ತವೆ. ಕೆಂಪು ಎಲೆಗಳ ಮಾರ್ಪಾಟು ಕೀಟಾಕರ್ಷಣೆಗಾಗಿ ಸಸ್ಯವೇ ಮಾಡಿಕೊಂಡಿರುವುದು ಎಂದು ಹೇಳಲಾಗಿದೆ.

ಕ್ರಿಸ್‌ಮಸ್ ಸ್ಟಾರ್‌ನ ಸೌಂದರ್ಯಕ್ಕೆ ಮಾರು ಹೋದ ವಿಜ್ಞಾನಿಗಳು ಈ ಸಸ್ಯದ ಮೇಲೆ ವಿವಿಧ ರೀತಿಯ ಪ್ರಯೋಗಗಳನ್ನು ನಡೆಸಿ ಬೇರೆಬೇರೆ ರೀತಿಯ ತಳಿಗಳನ್ನು ತಯಾರು ಮಾಡಿದ್ದಾರೆ. ಇವುಗಳಲ್ಲಿ ಹೂವಿನ ಸುತ್ತಲೂ ಕೆಂಪು ಎಲೆಯ ಬದಲಾಗಿ ಬಿಳಿಯ ಎಲೆಗಳನ್ನು ಸೃಷ್ಟಿಸಲಾಗಿದ್ದು, ಇದಕ್ಕೆ ಬಿಳಿ ಪಲ್ಚರಿಮ ಎಂದು ಹೆಸರಿಡಲಾಗಿದೆ. ಅಲ್ಲದೆ, ಗುಲಾಬಿ ಬಣ್ಣವನ್ನೂ ಸೃಷ್ಟಿಸಿದ್ದಾರೆ. 1972ರಲ್ಲಿ ಹಾಲಿವುಡ್‌ನಲ್ಲಿ ಪಾಯಿನ್ಸೆಟಿಯ ಪಲ್ಚರಿಮ ಹೆನ್ರಿಯಟಕ್ ಡಬಲ್ ಪಾಯಿನ್‌ಸೆಟ್ಯ ಎನ್ನುವಂತಹ ತಳಿಯನ್ನು ಕಂಡು ಹಿಡಿಯಲಾಗಿದ್ದು, ಈ ಗಿಡದ ತುದಿಯಲ್ಲಿ ಬಿಡುವ ಹೂವಿನ ಸುತ್ತಲೂ ಎರಡು ರೀತಿಯ ಎಲೆಗಳು ಇರುತ್ತವೆ. ಹೊರಭಾಗದಲ್ಲಿ ಅಗಲವಾಗಿ ಮಿರುಗುವ ಕುಂಕುಮ ಬಣ್ಣದ ಎಲೆಗಳಿದ್ದರೆ, ಒಳಭಾಗದಲ್ಲಿ ಬಣ್ಣದ ಸಣ್ಣ ಸಣ್ಣ ಎಲೆಗಳು ಇವೆ. ಈ ಜಾತಿಯ ಹೂಗಳು ಗಾತ್ರದಲ್ಲಿ ಹಿರಿದಾಗಿಯೂ ದಪ್ಪವಾಗಿಯೂ ಇರುತ್ತವೆ.

ಸಾಕಷ್ಟು ಬಿಸಿಲು ಬೀಳುವ ಸ್ಥಳದಲ್ಲಿ ಯಥೇಚ್ಛವಾಗಿ ಈ ಸಸ್ಯಗಳು ಬೆಳೆಯುತ್ತವೆ ಅಲ್ಲದೆ, ಉತ್ತಮವಾದ ಹೂಗಳನ್ನು ಸಹ ಬಿಡುತ್ತವೆ. ಸಸ್ಯಾಭಿವೃದ್ಧಿಯನ್ನು ಕಾಂಡದ ತುಂಡುಗಳನ್ನು ನೆಡುವ ಮೂಲಕ ಮಾಡಬಹುದಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಇದರ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯುತ್ತಿರುವುದನ್ನು ಕಾಣಬಹುದು. ಕ್ರಿಸ್‌ಮಸ್ ಹಬ್ಬದ ಅಲಂಕಾರದಲ್ಲಿ ಇದಕ್ಕೊಂದು ಮಹತ್ವದ ಸ್ಥಾನ ನೀಡಲಾಗುತ್ತದೆ. ಇನ್ನು ಇದೀಗ ಈ ಗಿಡಗಳು ಎಲ್ಲೆಲ್ಲಿ ಇವೆಯೋ ಅಲ್ಲೆಲ್ಲ ಹೂ ಬಿಟ್ಟು ಕಂಗೊಳಿಸುವುದರೊಂದಿಗೆ ಕ್ರಿಸ್ ಮಸ್ ಗೆ ರಂಗು ತುಂಬುತ್ತಿದೆ.


Spread the love