ಕ್ರೀಡಾಪಟುಗಳಾಗಲು ನಿರಂತರ ಪ್ರಯತ್ನ ಅಗತ್ಯ
ಮಡಿಕೇರಿ: ಕ್ರೀಡೆಯಲ್ಲಿ ನಿರಂತರ ಅಭ್ಯಾಸ ಹಾಗೂ ಪರಿಶ್ರಮವಿದ್ದರೆ ಉತ್ತಮ ಕ್ರಿಡಾಪಟುಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ಅಂತರರಾಷ್ಟಿಯ ಅಥ್ಲೆಟ್, ಇತ್ತೀಚೆಗೆ ಸಿಡ್ನಿಯಲ್ಲಿ ನಡೆದ ಮಾರ್ಸ ಸ್ ಅಥ್ಲೆಟಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜೇತರಾದ ಮಾರಮಾಡ ಮಾಚಮ್ಮ ಹೇಳಿದರು.
ವಾಂಡರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ. ಶಂಕರ್ ಸ್ವಾಮಿ ಸ್ಮರಣಾರ್ಥ ಇಲ್ಲಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಿಕೊಂಡು ಬರಲಾಗುತ್ತಿರುವ 29ನೇ ಮಕ್ಕಳ ಉಚಿತ ಬೇಸಿಗೆ ಕ್ರಿಡಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈಗಿನ ಮಕ್ಕಳು ಪುಣ್ಯವಂತರು, ಈ ಹಿಂದೆ ಈ ರೀತಿಯ ತರಬೇತಿ ಶಿಬಿರಗಳು ಇರುತ್ತಿರಲಿಲ್ಲ, ಇನ್ನೊಬ್ಬರನ್ನು ನೋಡಿ ನಾವು ಕಲಿಯುತ್ತಿದ್ದೆವು. ಇದೀಗ ಅವಕಾಶಗಳಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಶಿಬಿರದಲ್ಲಿ ಹೇಳಿಕೊಡುವದನ್ನು ಪಾಲನೆ ಮಾಡಿಕೊಂಡು ನಿರಂತರ ಅಭ್ಯಾಸ ಮಾಡಿದಲ್ಲಿ ಉತ್ತಮ ಹಾಕಿ ಪಟುವಾಗಲು ಸಾಧ್ಯವಿದೆ.
ಉತ್ತಮ ಆಹಾರ ಸೇವನೆಯೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕೊಡಗಿನ ಮಣ್ಣಿಗೆ ಹಾಗೂ ಕ್ರೀಡೆಗೆ ಶಕ್ತಿಯಿದ್ದು, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಕೊಡಗಿನ ಕೀರ್ತಿ ಪತಾಕೆ ಹಾರಿಸಬೇಕೆಂದು ಕಿವಿ ಮಾತು ಹೇಳಿದರು. ಕ್ರೀಡೆಯಲ್ಲಿ ಶಿಸ್ತು ಮುಖ್ಯವಾಗಿದ್ದು, ಶಾರೀರಿಕ ದೃಢತೆಯನ್ನು ಕಾಪಾಡಿಕೊಂಡು ಹೊಂದಾಣಿಕೆಯಿಂದ ಆಟವಾಡಿ ಉತ್ತಮ ಕ್ರಿಡಾಪಟುಗಳಾಗಿ ರೂಪುಗೊಳ್ಳುವಂತೆ ಕರೆ ನೀಡಿದರು.
ವಾಂಡರ್ಸ್ ಪದಾಧಿಕಾರಿ ಪಾರ್ಥ ಚಂಗಪ್ಪ ಮಾತನಾಡಿ ದಿ.ಶಂಕರ್ ಸ್ವಾಮಿ ಅವರ ಗರಡಿಯಲ್ಲಿ ತರಬೇತಿ ಪಡೆದ ಅನೇಕ ಮಂದಿ ಹಾಕಿ ಹಾಗೂ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಶಿಸ್ತಿಗೆ ಹೆಸರುವಾಸಿಯಾಗಿದ್ದ ಅವರ ಹೆಸರಿನಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ಈ ಶಿಬಿರದಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳು ಉನ್ನತ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಹಿರಿಯ ಕ್ರಿಡಾಪಟು ಜಿ.ಟಿ.ರಾಘವೇಂದ್ರ ಮಾತನಾಡಿ ಶಂಕರ್ ಸ್ವಾಮಿ ಅವರಲ್ಲಿ ಶಿಸ್ತಿನೊಂದಿಗೆ ಏಕಾಗ್ರತೆಯೂ ಇತ್ತು. ಆಟದಲ್ಲಿ ಮಗ್ನರಾಗಿದ್ದಾಗ ಕಿಂಚಿತ್ತೂ ಬೇರೆಡೆ ಗಮನ ಹರಿಸುತ್ತಿರಲಿಲ್ಲ. ಶಿಬಿರಾರ್ಥಿಗಳು ಕೂಡ ಅವರ ಆದರ್ಶಗಳನ್ನು ಪಾಲಿಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಅತಿಥಿಗಳು ಹಾಗೂ ಶಿಬಿರಾರ್ಥಿಗಳು ಶಂಕರ್ ಸ್ವಾಮಿ ಹಾಗೂ ಆಧ್ಯಾತ್ಮಿಕ ಗುರು ಬಿ.ಕೆ. ಸುಬ್ಬಯ್ಯ ಅವರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಶಂಕರ್ ಸ್ವಾಮಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ ಮಕ್ಕಳಿಗೆ ಹಂಚಲಾಯಿತು. ಶಿಬಿರಾರ್ಥಿಗಳು ತಾವು ಕಲಿತಂತಹ ಪ್ರಾಣಾಯಾಮದ ಕೆಲವು ಆಯಾಮಗಳನ್ನು ಅತಿಥಿಗಳೆದುರು ಪ್ರದರ್ಶಿಸಿದರು. ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಶಿಕ್ಷಕ ಕೆ.ಕೆ. ಮಹೇಶ್‌ಕುಮಾರ್ ಪ್ರಾಣಾಯಾಮ ಅಭ್ಯಾಸ ಮಾಡಿಸಿದರು.
ಕಾರ್ಯಕ್ರಮದಲ್ಲಿ ಶಿಬಿರದ ಸಂಚಾಲಕ ಶಂಕರ್ ಸ್ವಾಮಿ ಅವರ ಪುತ್ರ ಗುರುದತ್, ವಾಂಡರ್ಸ್ ಚುಮ್ಮಿ ದೇವಯ್ಯ, ಮಣಿ ಮೇದಪ್ಪ, ನಂದ, ತರಬೇತುದಾರರಾದ ಜಯಸೂರ್ಯ, ಕಿರುಂದಂಡ ಗಣೇಶ್, ಕುಡೆಕಲ್ ಸಂತೋಷ್, ಪೋಷಕರು ಪಾಲ್ಗೊಂಡಿದ್ದರು.