ಕ್ರೈಸ್ತರ ಮೇಲೆ ನಡೆಯುವ ದೌರ್ಜನ್ಯ ಖಂಡಸಿ ಕರಾವಳಿಯಲ್ಲಿ ಕ್ರೈಸ್ತ ಭಾಂದವರಿಂದ ಶಾಂತಿಯುತ ಮಾನವ ಸರಪಳಿ ಪ್ರತಿಭಟನೆ 

Spread the love

ಕ್ರೈಸ್ತರ ಮೇಲೆ ನಡೆಯುವ ದೌರ್ಜನ್ಯ ಖಂಡಸಿ ಕರ್ನಾಟಕ ಕರಾವಳಿ ಎಲ್ಲೆಡೆ ಕ್ರೈಸ್ತ ಭಾಂದವರಿಂದ ಶಾಂತಿಯುತ ಮಾನವ ಸರಪಳಿ ಪ್ರತಿಭಟನೆ 
 

ಮಂಗಳೂರು: ಕರ್ನಾಟಕದಲ್ಲಿ ಕ್ರೈಸ್ತರ ಮೇಲೆ ನಡೆಯುವ ದೌರ್ಜನ್ಯವನ್ನು ಖಂಡಿಸಿ ಕಥೊಲಿಕ ಸಭೆ, ಮಂಗಳೂರು ಇದರ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸ್ಥಳೀಯ ಶಾಖೆಗಳೊಂದಿಗೆ ಒಟ್ಟಾಗಿ ಆಯೋಜಿಸಿದ ಮೇಣದಬತ್ತಿಯ ಮಾನವ ಸರಪಳಿ ಪ್ರತಿಭಟನೆ ಮಾರ್ಚ್ 02, 2022 ರ ಬುಧವಾರ ಸಂಜೆ ಜಿಲ್ಲೆಯಾದ್ಯಂತ ಎಲ್ಲಾ ಚರ್ಚ್‍ಗಳ ಹೊರಗಿನ ರಸ್ತೆಗಳಲ್ಲಿ ಮತ್ತು ಹೆದ್ದಾರಿಗಳಲ್ಲಿ ಸಂಜೆ 6 ರಿಂದ 7 ರವರೆಗೆ ಯಶಸ್ವಿಯಾಗಿ ನಡೆಯಿತು.

“ಕರ್ನಾಟಕದಲ್ಲಿ ಪ್ರಾರ್ಥನ ಮಂದಿರ ಹಾಗೂ ಕ್ರೈಸ್ತರ ಮೇಲೆ ನಡೆಯುವ ದೌರ್ಜನ್ಯ, ಕೋಲಾರದಲ್ಲಿ ಯೇಸು ಕ್ರಿಸ್ತರ ಮೂರ್ತಿ ಹಾಗೂ ಶಿಲುಬೆಯ ನಾಶ, 42 ವರ್ಷಗಳ ಇತಿಹಾಸವುಳ್ಳ ಪಂಜಿಮೊಗರು ಸಂತ ಅಂತೋನಿ ಪ್ರಾರ್ಥನಾ ಮಂದಿರ ಹಾಗೂ 40 ವರ್ಷದಿಂದ ಪ್ರಾರ್ಥನೆ ನಡೆಸುತಿದ್ದ ಕೆಂಗೇರಿಯಲ್ಲಿರುವ ದೇವಾಲಯವನ್ನು ನಿರ್ನಾಮ ಮಾಡಿ ಕ್ರೈಸ್ತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಕೋರ್ಟಿನಿಂದ ತಡೆಯಾಜ್ಞೆ ಇದ್ದರೂ ಪ್ರಾರ್ಥನಾ ಮಂದಿರಗಳನ್ನು ಕೆಡವಿ ಹಾಕಿರುತ್ತಾರೆ. ಪ್ರಾರ್ಥನಾ ಮಂದಿರಗಳನ್ನು ಕೆಡವಬಾರದೆಂದು ಹೊಸ ಕಾನೂನನ್ನು ಸರಕಾರ ಜಾರಿಗೆ ತಂದಿದ್ದರೂ, ಪಟ್ಟಬದ್ರ ಹಿತಾಸಕ್ತಿಗಳು ಕಾನೂನಿನ ವಿರುದ್ಧವಾಗಿ ಕಾರ್ಯಾಚರಣೆ ಮಾಡಿರುತ್ತಾರೆ. ಇದಲ್ಲದೆ ಅಲ್ಲಲ್ಲಿ ಮತಾಂತರ ಆಗಿದೆ ಎಂದು ಶಂಕೆ ವ್ಯಕ್ತಪಡಿಸಿ ಹಲವು ದೌರ್ಜನ್ಯಗಳು ನಡೆಯುತ್ತಿವೆ. ಇದಲ್ಲದೆ ಸುಳ್ಳು ಸಾಕ್ಷ್ಯಗಳನ್ನು ಸ್ರಷ್ಟಿಸುವ ಉದ್ದೇಶದಂದ ಅಲ್ಲಲ್ಲಿ ಸುಳ್ಳು ಪಿರ್ಯಾದಿಗಳನ್ನು ಪೊಲೀಸ್ ಮತ್ತು ಇತರ ಇಲಾಖೆಗಳಿಗೆ ನೀಡಿ ಕ್ರೈಸ್ತ ಸಮುದಾಯದವರನ್ನು ಹಾಗೂ ಕ್ರೈಸ್ತ ಸಂಸ್ಥೆಗಳನ್ನು ದೌರ್ಜನ್ಯಕೊಳಪಡಿಸುತ್ತಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ” ಎಂದು ಆಯೊಜಕರು ಶಾಂತಿಯುತ ಪ್ರತಿಭಟನೆಯ ಮೂಲಕ ಸರಕಾರದ ಗಮನ ಸೆಳೆಯಲು ಪ್ರಯತ್ನಿಸಿದರು.

ಈ ಮೌನ ಪ್ರತಿಭಟನೆಯ ಮೂಲಕ ದಕ್ಷಿಣ ಕನ್ನಡದ ಕಥೋಲಿಕರು “ನಮ್ಮ ಸಾಂವಿಧಾನಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿರುವುದರಿಂದ ಮತಾಂತರ ವಿರೋಧಿ ಮಸೂದೆಯನ್ನು ಕೈಬಿಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು ಮತ್ತು ಈ ಮಸೂದೆಯ ದುರುಪಯೋಗದಿಂದ ಕ್ರಿಶ್ಚಿಯನ್ ಸಮುದಾಯದ ಮೆಳೆ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ” ಎಂದು ಮನವರಿಕೆ ಮಾಡಿದರು.

ಮಂಗಳೂರು ಕಥೋಲಿಕ್ ಸಭೆಯ ಅಧ್ಯಕ್ಷರಾದ ಶ್ರೀ ಸ್ಟಾನ್ಲಿ ಲೋಬೋ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಆಧಿಕಾರಿ ಶ್ರೀ ರಾಯ್ ಕ್ಯಾಸ್ತಲಿನೋ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಪ್ರತಿಭಟನೆ ಯಶಸ್ವಿಯಾಯಿತು.

ಜಿಲ್ಲೆಯಾದ್ಯಂತ ಕ್ರೈಸ್ತ ಸಮಾಜದ ಎಲ್ಲಾ ಬಾಂಧವರು ರಸ್ತೆ ಪಕ್ಕದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಒಂದು ಗಂಟೆ ಕಾಲ ನಿಂತು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಭಾಗವಹಿಸಿದ ಪ್ರತಿಯೊಬ್ಬರು ಮೇಣದಬತ್ತಿ ಮತ್ತು ಹಳದಿ-ಬಿಳಿ ಪಾಪಲ್ ಧ್ವಜವನ್ನು ಹಿಡಿದಿದ್ದರು. ಪ್ರತಿಭಟನೆಯಲ್ಲಿ ಎಲ್ಲಾ ಧರ್ಮಗುರುಗಳು, ಧಾರ್ಮಿಕ ಸಹೋದರಿಯರು ಮತ್ತು ಸಹೋದರರು, ಮಕ್ಕಳು ಮತ್ತು ಯುವಕರು ಪಾಲ್ಗೊಂಡರು

“ಬದುಕು ಮತ್ತು ಬದುಕಲು ಬಿಡಿ”, “ಸಂವಿಧಾನವನ್ನು ಎತ್ತಿಹಿಡಿಯೋಣ”, “ಶಾಂತಿ ಪ್ರಿಯ ಕ್ರೈಸ್ತರ ಮೇಲಿನ ದೌರ್ಜನ್ಯವನ್ನು ನಾವು ಖಂಡಿಸುತ್ತೇವೆ”, “ಇತರ ನಾಗರಿಕರೊಂದಿಗೆ ವಿಭಜಿಸಬೇಡಿ”, “ಸಮಾನತೆ ನಮ್ಮ ಸಾಂವಿಧಾನಿಕ ಹಕ್ಕು”, ಎಂಬ ಘೋಷಣಾ ಫಲಕಗಳನ್ನು ಭಾಗವಹಿಸಿದ್ದರು. ದೇಶ”, “ಧಾರ್ಮಿಕ ಸ್ವಾತಂತ್ರ್ಯ ನಮ್ಮ ಹಕ್ಕು”, “ನಾವು ನಂಬಿದ ದೇವರನ್ನು ಪೂಜಿಸುವ ಹಕ್ಕು ನಮಗಿದೆ”, “ಧರ್ಮದ ಹೆಸರಿನಲ್ಲಿ ನಮ್ಮನ್ನು ವಿಭಜಿಸಬೇಡಿ”, “ಭಾರತ ಜಾತ್ಯತೀತ ರಾಷ್ಟ್ರ ಅದನ್ನು ಗೌರವಿಸಿ” ಎಂಬ ಫಲಕಗಳು ಪ್ರತಿಭಟನೆಯುದ್ದಕ್ಕು ಕಂಡವು.

ಮಂಗಳೂರು: ಮಂಗಳೂರು ನಗರ ಹಾಗೂ ಹೊರವಲಯದಲ್ಲಿ ಸಂಜೆ 6 ಗಂಟೆಗೆ ಪ್ರತಿಭಟನೆ ಆರಂಭವಾಯಿತು. ಚರ್ಚ್‍ನ ಹೊರಗೆ ಜಮಾಯಿಸಿದ ಕಥೋಲಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಮಾನವ ಸರಪಳಿ ರಚಿಸಿದರು. ರಸ್ತೆ, ಹೆದ್ದಾರಿಗಳಲ್ಲಿ ಮಾನವ ಸರಪಳಿ ರಚಿಸಲಾಯಿತು.

ಮೂಡಬಿದ್ರಿ: ಮೂಡಬಿದ್ರಿಯ ವಲಯದಿಂದ ಕಥೋಲಿಕ್ ಸಭಾ, ಮೂಡಬಿದ್ರಿ ನೇತೃತ್ವದಲ್ಲಿ ತಾಲೂಕಿನ ತಹಶೀಲ್ದಾರ್ ಕಛೇರಿ ಎದುರುಗಡೆ ಎಲ್ಲಾ ಕಥೊಲಿಕರು, ಬೆಳಗ್ಗೆ 10 ರಿಂದ 11.30 ರವರೆಗೆ ಜಮಾಯಿಸಿದರು.

ಬಂಟ್ವಾಳ: ಬಂಟ್ವಾಳ ವಲಯದ ಹಾಗೂ ಮೊಗರ್ನಾಡ್ ವಲದದಿಂದ ಬಹುಸಂಖ್ಯೆಯಲ್ಲಿ ಕಥೋಲಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಿ.ಸಿ. ರೊಡಿನ ಮೈದಾನದಲ್ಲಿ ಮಧ್ಯಾಹ್ನ 3.15ಕ್ಕೆ. ಮಾನವ ಸರಪಳಿ ನಿರ್ಮಿಸಿ ಕ್ರೈಸ್ತರ ಮೇಲಿನ ದೌರ್ಜನ್ಯದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೆಲವು ಮುಖಂಡರು ತಾಶೀಲ್ದಾರ್ ಕಚೇರಿಗೆ ಭೇಟಿ ನೀಡಿದರು.

ಪುತ್ತೂರು: ಪುತ್ತೂರಿನ ಮಾಯ್ ದೆ ದೇವುಸ್ ಚರ್ಚ್‍ನಲ್ಲಿ ಸಂಜೆ 5.45ಕ್ಕೆ ಕೆಥೋಲಿಕರು ಜಮಾಯಿಸಿದರು. ಬನ್ನೂರು, ಉಪ್ಪಿನಂಗಡಿ ಮತ್ತು ಮಾರಿಲ್ ಚರ್ಚ್‍ನ ಕಥೋಲಿಕರು ಭಿತ್ತಿಪತ್ರಗಳನ್ನು ಹಿಡಿದು ಮೇಣದಬತ್ತಿಗಳನ್ನು ಬೆಳಗಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ನಂತರ ಪುತ್ತೂರು ತಾಲೂಕು ಕಚೇರಿಯತ್ತ ಮೆರವಣ ಗೆ ನಡೆಸಿದರು.

ಬೆಳ್ತಂಗಡಿ: ಕೆಥೋಲಿಕ್ ಸಭಾ, ಬೆಳ್ತಂಗಡಿ ಮತ್ತು ಇದರ ಸಹ ಘಟಕಗಳು ತಾಲೂಕು ಕಛೇರಿಯಲ್ಲಿ ಜಮಾಯಿಸಿ 2022 ರ ಮಾರ್ಚ್ 02 ರಂದು ಬೆಳಿಗ್ಗೆ ಬೆಳ್ತಂಗಡಿಯಲ್ಲಿ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ತಮ್ಮ ಮನವಿಯನ್ನು ಸಲ್ಲಿಸಿದರು.

ವರದಿ: ವಂದನೀಯ ಅನಿಲ್ ಫೆರ್ನಾಂಡಿಸ್, ಚಿತ್ರಗಳು: ಸ್ಟ್ಯಾನ್ಲಿ, ಜೋಸ್ಟನ್, ಜೋಯಲ್ ಮತ್ತು ಫ್ರೆಡ್ವಿನ್


Spread the love