ಕ್ರೈಸ್ತ ಭಗಿನಿಯರ ಬಂಧನ ಖಂಡನೀಯ – ವಿನಯ್ ಕುಮಾರ್ ಸೊರಕೆ
ಉಡುಪಿ: ಛತ್ತೀಸ್‌ಗಢದಲ್ಲಿ ಇಬ್ಬರು ಕ್ರೈಸ್ತ ಧರ್ಮ ಭಗಿನಿಯರನ್ನು ಸುಳ್ಳು ಆರೋಪದ ಆಧಾರದ ಮೇಲೆ ಬಂಧಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಮಾಜಿ ಸಚಿವರು ಹಾಗೂ ಕರ್ನಾಟಕ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ತೀವ್ರವಾಗಿ ಖಂಡಿಸಿದ್ದಾರೆ.
ಸಿಸ್ಟರ್ಸ್ ಆಫ್ ಮೇರಿ ಇಮ್ಯಾಕುಲೇಟ್ ಆಫ್ ಅಸಿಸ್ಸಿ ಸಂಸ್ಥೆಯ ಸದಸ್ಯರಾದ ಸಿಸ್ಟರ್ ವಂದನಾ ಫ್ರಾನ್ಸಿಸ್ ಮತ್ತು ಸಿಸ್ಟರ್ ಪ್ರೀತಿ ಮೇರಿ ಅವರನ್ನು ಮಾನವ ಕಳ್ಳಸಾಗಣೆ ಹಾಗೂ ಧಾರ್ಮಿಕ ಮತಾಂತರದ ಆಧಾರವಿಲ್ಲದ ಆರೋಪಗಳ ಮೂಲಕ ಬಂಧಿಸಲಾಗಿದೆ.
ಬಂದಿತ ಭಗಿನಿಯರು ಉತ್ತರ ಭಾರತದ ಆಗ್ರಾ ಪ್ರದೇಶದಲ್ಲಿ ಮನೆ ಕೆಲಸಕ್ಕಾಗಿ ಮಹಿಳೆಯರನ್ನು ಕರೆದುಕೊಂಡು ಹೋಗುತ್ತಿದ್ದರು. ಈ ಮಹಿಳೆಯರು ತಮ್ಮ ಪೋಷಕರ ಸಹಮತದೊಂದಿಗೆ ತೆರಳುತ್ತಿದ್ದರೇನಲ್ಲದೆ, ಯಾವುದೇ ಬಲವಂತ ಅಥವಾ ಮತಾಂತರ ನಡೆಸಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ಸ್ಪಷ್ಟವಾಗಿದೆ. ಬಂಧಿತ ಸನ್ಯಾಸಿನಿಯರ ಮೇಲೆ ಒತ್ತಡ ತಂದು, ಕೃತಕ ಹೇಳಿಕೆ ಕೊಡಿಸುವ ಪ್ರಯತ್ನಗಳೂ ನಡೆಯುತ್ತಿವೆ ಎಂದು ಸ್ಥಳೀಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಈ ಪ್ರಕರಣದಲ್ಲಿ ಚರ್ಚ್ ಪ್ರತಿನಿಧಿಗಳಿಗೆ ಭೇಟಿಯ ಅವಕಾಶವಿಲ್ಲ, ಮತ್ತು ಭಗಿನಿಯರ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಇದು ಅಲ್ಪಸಂಖ್ಯಾತ ಸಮುದಾಯದ ಮೇಲಿನ ದೌರ್ಜನ್ಯಕ್ಕೆ ಮತ್ತೊಂದು ಉದಾಹರಣೆ. ದೇಶದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಉತ್ತರ ಭಾರತದಲ್ಲಿ, ಇತ್ತೀಚೆಗಿನ ದಿನಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹಾಗೂ ಧಾರ್ಮಿಕ ಸಂಸ್ಥೆಗಳ ವಿರುದ್ಧದ ದಾಳಿಗಳು ಗಂಭೀರವಾಗಿ ಹೆಚ್ಚುತ್ತಿವೆ.
“ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಎಂಬ ಘೋಷಣೆಯೊಂದಿಗೆ ಆಡಳಿತ ನಡೆಸುತ್ತಿರುವ ಕೇಂದ್ರ ಸರ್ಕಾರ, ಈ ಪ್ರಕರಣವನ್ನು ತಕ್ಷಣ ಗಮನಿಸಿ, ಇಬ್ಬರು ಭಗಿನಿಯರ ಬಿಡುಗಡೆಗೆ ಕ್ರಮ ವಹಿಸಬೇಕು ಎಂಬುದು ನನ್ನ ದಿಟ್ಟ ಆಗ್ರಹ,” ಎಂದು ಶ್ರೀ ವಿನಯ್ ಕುಮಾರ್ ಸೊರಕೆ ತಿಳಿಸಿದ್ದಾರೆ.