ಕ್ಲಪ್ತ ಸಮಯಕ್ಕೆ ಸಾಲ ಮರುಪಾವತಿ ಸದಸ್ಯರ ಜವಾಬ್ದಾರಿ – ಸಾಧು ಎಸ್‌ ಬಿಲ್ಲವ

Spread the love

ಕ್ಲಪ್ತ ಸಮಯಕ್ಕೆ ಸಾಲ ಮರುಪಾವತಿ ಸದಸ್ಯರ ಜವಾಬ್ದಾರಿ – ಸಾಧು ಎಸ್‌ ಬಿಲ್ಲವ

ಕುಂದಾಪುರ: ಗ್ರಾಮೀಣ ಭಾಗದ ಬಡ ಮಹಿಳೆಯರು ಸಾಲವನ್ನು ಪಡೆದು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪ್ರಗತಿ ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘವು ಸಹಕಾರಿಯಾಗಿದೆ. ಸಾ¯ ಮರುಪಾವತಿಯಲ್ಲಿ ವಿಳಂಬವಾದರೆ ಸಂಘಕ್ಕೆ ಬಹುದೊಡ್ಡ ಹೊಡೆತ ಬಿದ್ದು ಬ್ಯಾಂಕುಗಳ ವ್ಯವಸ್ಥೆಯೇ ಬುಡಮೇಲಾಗುತ್ತದೆ. ಪಡೆದುಕೊಂಡ ಸಾಲವನ್ನು ಕ್ಲಪ್ತ ಸಮಯಕ್ಕೆ ಕಟ್ಟುವುದು ತಮ್ಮ ಜವಾಬ್ದಾರಿ ಎಂದು ಪ್ರತಿಯೊಬ್ಬ ಸದಸ್ಯರು ತಿಳಿದುಕೊಂಡರೆ ಮಾತ್ರ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತದೆ ಎಂದು ಪ್ರಗತಿ ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಸಾಧು ಎಸ್ ಬಿಲ್ಲವ ಹೇಳಿದರು.

ಶನಿವಾರ ಹೆಮ್ಮಾಡಿಯ ಪಂಚಾಗಂಗಾ ರೈತರ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಜರುಗಿದ ಪ್ರಗತಿ ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘ ಹೆಮ್ಮಾಡಿ ಇದರ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್‍ವಿ ಮಾತನಾಡಿ, ನೋಂದಣಿಯಾದ ದಿನದಿಂದಲೂ ಈ ಸಂಘ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಕ್ರೀಯಾಶೀಲ ನಿರ್ದೇಶಕರು, ಪ್ರಾಮಾಣಿಕ ನೌಕರರಿದ್ದರೆ ಯಾವ ಸಂಘವನ್ನಾದರೂ ಮುನ್ನಡೆಸಿಕೊಂಡು ಹೋಗಬಹುದು. ಸಂಘದ ಸದಸ್ಯರು ಪ್ರಾಮಣಿಕವಾಗಿ ಸಾಲ ಮರುಪಾವತಿ ಮಾಡಿದರೆ ಆ ಸಂಘವು ಅತ್ಯಂತ ಲಾಭದಾಯಕವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ಸಹಕರಿಸಬೇಕು ಎಂದ ಅವರು, ಮುಂದಿನ ವರ್ಷ ದಶಮಾನೋತ್ಸವಕ್ಕೆ ಕಾಲಿಡುತ್ತಿರುವ ಈ ಸಂಸ್ಥೆ ಆ ಸಂಭ್ರಮಕ್ಕೂ ಮೊದಲು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಪಡೆದು ಉತ್ತೀರ್ಣರಾದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಿ ಗೌರವಿಸಲಾಯಿತು. ಇದೇ ವೇಳೆಯಲ್ಲಿ ಝೀ ಕನ್ನಡ ಚಾನೆಲ್‍ನ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‍ನಲ್ಲಿ ಸೆಮಿಫೈನಲ್ ಹಂತದವರೆಗೂ ಬಂದು ವೀಕ್ಷಕರ ಮೆಚ್ಚುಗೆಗೆ ಪಾತ್ರರಾದ ಹೆಮ್ಮಾಡಿಯ ಪ್ರತಿಭೆ ಚೈತ್ರಾ ಕೌಶಿಕ್ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಪ್ರಗತಿ ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷೆ ಅನ್ನಪೂರ್ಣ ಸುಳ್ಸೆ, ನಿರ್ದೇಶಕರುಗಳಾದ ಕುಸುಮಾ ಆರ್ ಮೊಗವೀರ, ಶೋಭಾ ಜಿ ಪುತ್ರನ್, ಜಯಲಕ್ಷ್ಮೀ ಎಸ್ ರಾವ್, ಪದ್ಮಾವತಿ ಶೆಟ್ಟಿ, ಜೀತಾ ಕ್ರಾಸ್ತಾ, ಆಶಿಯಾ ಬಾನು, ಶಾರದಾ ಪೂಜಾರಿ, ಪ್ರತೀಮಾ ವರ್ಗೀಸ್, ನೇತ್ರಾವತಿ, ಸಹ ನಿರ್ದೇಶಕರುಗಳಾದ ಭಾರತಿ, ಗೀತಾ ಡಿ.ಹೆಚ್ ಉಪಸ್ಥಿತರಿದ್ದರು.

ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಕುಲಾಲ್ ವಾರ್ಷಿಕ ವರದಿಯನ್ನು ವಾಚಿಸಿದರು. ಸಂಘದ ಸಿಬ್ಬಂದಿ ಕುಮಾರಿ ಅಂಕಿತಾ ಸ್ವಾಗತಿಸಿದರು. ಸುಜಾತ ಪ್ರಾರ್ಥಿಸಿದರು, ಶಿವರಾಮ್ ನಿರೂಪಿಸಿದರು, ಸಿಬ್ಬಂದಿಗಳಾದ ವರದಾ ಹಾಗೂ ನಾಗರಾಜ್ ಪೂಜಾರಿ ಸಹಕರಿಸಿದರು.

ಚಿತ್ರ: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‍ನ ಹೆಮ್ಮಾಡಿಯ ಪ್ರತಿಭೆ ಚೈತ್ರಾ ಕೌಶಿಕ್ ಅವರನ್ನು ಸನ್ಮಾನಿಸಲಾಯಿತು


Spread the love