ಕ್ವಾರಿ ಉದ್ಯಮ ಸ್ಥಗಿತಕ್ಕೆ ದಕ ಮತ್ತು ಉಡುಪಿ ಜಿಲ್ಲಾ ಕ್ವಾರಿ ಮ್ಹಾಲಕರ ಖಂಡನೆ

Spread the love

ಕ್ವಾರಿ ಉದ್ಯಮ ಸ್ಥಗಿತಕ್ಕೆ ದಕ ಮತ್ತು ಉಡುಪಿ ಜಿಲ್ಲಾ ಕ್ವಾರಿ ಮ್ಹಾಲಕರ ಖಂಡನೆ

ಮಂಗಳೂರು: ಶಿವಮೊಗ್ಗ / ಚಿಕ್ಕಬಳ್ಳಾಪುರದ ಕ್ವಾರಿ ಸೈಟೊಂದರ ಹೊರಗೆ ಇತ್ತೀಚೆಗೆ ಸಂಭವಿಸಿದ ಸ್ಫೋಟದಲ್ಲಿ ಕೆಲವು ಜನರು ಸಾವನ್ನಪ್ಪಿದ ದುರಂತದ ನಂತರ, ಕರ್ನಾಟಕದ ಇಡೀ ಕ್ವಾರಿ ಉದ್ಯಮವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಎಲ್ಲಾ ಕ್ವಾರಿ ಚಟುವಟಿಕೆಗಳನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರವು ಎಲ್ಲಾ ಪರವಾನಗಿ ಪಡೆದ ಕ್ವಾರಿ ಮಾಲಕರಿಗೆ ಆದೇಶಿಸಿದೆ ಮತ್ತು ಉದ್ಯಮವನ್ನು ಪುನರಾರಂಭಿಸಲು ಅರ್ಥಹೀನ ನಿಯಮಗಳು ಮತ್ತು ಷರತ್ತುಗಳನ್ನು ವಿಧಿಸಿದೆ. ಪ್ರಸ್ತುತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 190 ಪರವಾನಗಿ ಪಡೆದ ಕ್ವಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 6000 ಕಾರ್ಮಿಕರಿಗೆ ನೇರ ಉದ್ಯೋಗ ಮತ್ತು ಇತರ ಸಾವಿರಾರು ಜನರಿಗೆ ಪರೋಕ್ಷ ಉದ್ಯೋಗವನ್ನು ಒದಗಿಸುತ್ತಿದೆ. ಇದಲ್ಲದೆ ಈ ಉದ್ಯಮವು ರಾಜ್ಯ ಸರ್ಕಾರಕ್ಕೆ ರಾಯಲ್ಟಿ ಪಾವತಿಸುವ ರೂಪದಲ್ಲಿ ಸುಮಾರು ರೂ. 75 ಕೋಟಿ ಯಷ್ಟು ನೇರ ಆದಾಯವನ್ನು ಗಳಿಸುತ್ತದೆ. ಶಿವಮೊಗ್ಗ / ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಡೆದ ಸ್ಫೋಟದ ನಂತರ, ಸಮಸ್ಯೆಯ ಮೂಲ ಕಾರಣವಾಗಿರುವ ರಾಜ್ಯದಲ್ಲಿ ವ್ಯಾಪಕವಾಗಿ ಹರಡಿರುವ ಅಕ್ರಮ ಕಲ್ಲುಗಣಿಗಾರಿಕೆಯನ್ನು ನಿರ್ಲಕ್ಷಿಸಿ ಪರವಾನಗಿ ಪಡೆದ ಅಧಿಕೃತ ಕ್ವಾರಿ ಮಾಲಕರಿಗೆ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಪೊಲೀಸರು ಅನಗತ್ಯವಾಗಿ ಕಿರುಕುಳ ಕೊಟ್ಟು ಪೀಡಿಸುತ್ತಿದ್ದಾರೆ.

ಪೀಡಿತ ಪರವಾನಗಿ ಪಡೆದ ಕ್ವಾರಿಗಳು ಮುಖ್ಯವಾಗಿ ಕಟ್ಟಡ ನಿರ್ಮಾಣದಲ್ಲಿ ಉಪಯೋಗಿಸುವಂತಹ ಕಲ್ಲುಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿವೆ. ಇದು ಈ ಪ್ರದೇಶದ ಕಟ್ಟಡ ನಿರ್ಮಾಣ ಉದ್ಯಮಕ್ಕೆ ಮೂಲ ಕಚ್ಚಾ ವಸ್ತುವಾಗಿದೆ. ಕಳೆದ ಹತ್ತು ದಿನಗಳಿಂದ ಕಲ್ಲುಗಣಿಗಾರಿಕೆ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಇದು ಸ್ಥಳೀಯ ಆರ್ಥಿಕತೆಯ ಮೇಲೆ ಭಾರಿ ಪ್ರತಿಕೂಲ ಪರಿಣಾಮ ಬೀರಲಿದೆ ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಯನ್ನು ಸ್ಥಗಿತಗೊಳಿಸಲಿದೆ. ಆದ್ದರಿಂದ ರಾಜ್ಯದಲ್ಲಿ ಕಲ್ಲುಗಣಿಗಾರಿಕೆ ಪುನರಾರಂಭಕ್ಕೆ ತಕ್ಷಣ ಅನುಮತಿ ನೀಡುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕ್ವಾರಿ ಮಾಲಕರ ಸಂಘ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿದೆ. ಎಲ್ಲಾ ಪರವಾನಗಿ ಪಡೆದ ಕ್ವಾರಿ ನಿರ್ವಾಹಕರು ಈಗಾಗಲೇ ಪರಿಸರ ಕಾನೂನುಗಳು ಮತ್ತು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕ್ವಾರಿ ಮಾಲಕರು ಕಾನೂನುನ್ನು ಯಾವುದೇ ರೀತಿಯ ಉಲ್ಲಂಘನೆಗಳಿಲ್ಲದೆ ಅನುಸರಿಸಿ ಬಂದಿದ್ದಾರೆ. ಆದ್ದರಿಂದ ಸರ್ಕಾರ ಕಲ್ಲುಗಣಿಗಾರಿಕೆ ಚಟುವಟಿಕೆಗಳನ್ನು ಅನಗತ್ಯವಾಗಿ ಸ್ಥಗಿತಗೊಳಿಸುವುದು ಮತ್ತು ಸಾವಿರಾರು ಜನರಿಗೆ ಹೀಗೆ ತೊಂದರೆಕೊಡುವುದು ಸರಿಯಲ್ಲ.

“ರಾಜ್ಯದಲ್ಲಿ ಪ್ರಸ್ತುತ ಕಲ್ಲುಗಣಿಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು ಶಿವಮೊಗ್ಗ / ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ಸಂಭವಿಸಿದ ಅಪಘಾತಕ್ಕೆ ರಾಜ್ಯ ಸರ್ಕಾರದ ಅವಸರದ ಪ್ರತಿಕ್ರಿಯೆಯಾಗಿದೆ. ರಾಜ್ಯ ವಿಧಿಸಿರುವ ಹೊಸ ನಿಯಮಗಳು ಮತ್ತು ಷರತ್ತುಗಳು ಅರ್ಥಹೀನ ಮತ್ತು ಗೊಂದಲಮಯವಾಗಿವೆ. ಈ ಪರಿಸ್ಥಿತಿಗೆ ಕಾರಣವಾಗಿರುವ ದುರದೃಷ್ಟಕರ ಅಪಘಾತವನ್ನು ಕೂಲಂಕಷವಾಗಿ ತನಿಖೆ ಮಾಡಬೇಕು ಮತ್ತು ಅಗತ್ಯವಿದ್ದಲ್ಲಿ ಯಾವುದೇ ಹೊಸ ಸುರಕ್ಷತಾ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುವಲ್ಲಿ ಕ್ವಾರಿ ಉದ್ಯಮವು ಬದ್ಧವಾಗಿದೆ. ಆದ್ದರಿಂದ ಕಲ್ಲುಗಣಿಗಾರಿಕೆ ನಿμÉೀಧದ ಆದೇಶವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಮತ್ತು ವಿಳಂಬವಿಲ್ಲದೆ ಕ್ವಾರಿ ಚಟುವಟಿಕೆಗಳನ್ನು ಪುನರಾರಂಭಿಸಲು ಅನುಮತಿ ನೀಡಬೇಕಾಗಿ ನಾವು ಸರಕಾರವನ್ನು ಕೋರುತ್ತಿದ್ದೇವೆ,” ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕ್ವಾರಿ ಮಾಲಕರ ಸಂಘವು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕ್ವಾರಿ ಮಾಲಕರ ಸಂಘವು ಈಗಾಗಲೇ ರಾಜ್ಯ ಸರ್ಕಾರಕ್ಕೆ ಎಲ್ಲಾ ಸಮಸ್ಯೆಗಳು, ಗೊಂದಲಗಳು, ಬೇಡಿಕೆಗಳು ಮತ್ತು ಸಲಹೆಗಳನ್ನು ಒಳಗೊಂಡಿರುವ ವಿವರವಾದ ಮನವಿಯನ್ನು ಸಲ್ಲಿಸಿದೆ. ಕಾನೂನುಬದ್ಧ ಮತ್ತು ಕಾನೂನು ಪಾಲನೆ ಮಾಡುವ ಸಣ್ಣ ಕ್ವಾರಿ ಮಾಲಕರಿಗೆ ಕಿರುಕುಳ ಕೊಡುವುದು ಮತ್ತು ಬಲಿಪಶುಕಳನ್ನಾಗಿಸುವುದನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಕಾನೂನುಬದ್ಧ ಕಲ್ಲುಗಣಿಗಾರಿಕೆ ಉದ್ಯಮವನ್ನು ನಾಶಪಡಿಸುವುದರ ಜೊತೆಗೆ ಪರಿಸರ ಮತ್ತು ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಅಕ್ರಮ ಕಲ್ಲುಗಣಿಗಾರಿಕೆಯನ್ನು ನಿಗ್ರಹಿಸಲು ತನ್ನ ಗಮನವನ್ನು ಕೇಂದ್ರೀಕರಿಸುವಂತೆ ಸಂಘವು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಸಮಸ್ಯೆಗಳು ಮತ್ತು ಬೇಡಿಕೆಗಳು

ಪರವಾನಗಿ / ಅನುಮತಿ ಬಗ್ಗೆ ಗೊಂದಲ
ಪ್ರಸ್ತುತ ಕರ್ನಾಟಕದ ಕ್ವಾರಿ ಮಾಲಕರು ರಾಜ್ಯ ಸರ್ಕಾರ ನೀಡಿರುವ ಪರವಾನಗಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಇದನ್ನು ಕೆಎಂಎಂಸಿಆರ್ ಕಾಯ್ದೆಯಿಂದ ನಿಯಂತ್ರಿಸಲಾಗುತ್ತದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಯಾವುದೇ ಕಾರಣಗಳನ್ನು ನೀಡದೆ ಕ್ವಾರಿ ಮಾಲಕರಿಗೆ ಖನಿಜ ರವಾನೆ ಪರವಾನಗಿ (ಎಂಡಿಪಿ) ನೀಡುವುದನ್ನು ನಿಲ್ಲಿಸಿದೆ. ವಿಚಾರಿಸಿದಾಗ ಕ್ವಾರಿ ಮಾಲಕರು ಕ್ವಾರಿ ಒಳಗೆ ಸ್ಫೋಟಕವನ್ನು ಬಳಸುವುದಕ್ಕಾಗಿ ಕೇಂದ್ರ ಸರ್ಕಾರದ ಗಣಿ ಸುರಕ್ಷತೆಯ ಮಹಾನಿರ್ದೇಶಕರ (ಡಿಜಿಎಂಎಸ್) ಅನುಮತಿ ಪಡೆಯಲು ನಿರ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ.

ಇದು ಗೊಂದಲಮಯ ಪರಿಸ್ಥಿತಿಗೆ ಕಾರಣವಾಗಿದೆ ಮತ್ತು ವಿವಿಧ ಕೇಂದ್ರ ಮತ್ತು ರಾಜ್ಯ ಕಾನೂನುಗಳ ವ್ಯಾಖ್ಯಾನದಲ್ಲಿನ ವ್ಯತ್ಯಾಸದಿಂದಾಗಿ ಈ ವಿಷಯದ ಬಗ್ಗೆ ಕಾನೂನು ಸ್ಪಷ್ಟತೆಯ ಕೊರತೆಯೂ ಇದೆ. ಡಿಜಿಎಂಎಸ್ ಮುಖ್ಯವಾಗಿ ದೊಡ್ಡ ಪ್ರಮಾಣದ ಕೈಗಾರಿಕಾ ಗಣಿಗಾರಿಕೆ ಚಟುವಟಿಕೆಗಳೊಂದಿಗೆ ವ್ಯವಹರಿಸುತ್ತದೆ, ಆದರೆ ಸ್ಥಳೀಯ ಕಲ್ಲುಗಣಿಗಾರಿಕೆ ಐದು ಎಕರೆಗಿಂತ ಕಡಿಮೆ ಭೂ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತದೆ. ಡಿಜಿಎಂಎಸ್ ನಿಯಮಗಳ ಪ್ರಕಾರ, 2.5 ಎಕರೆಗಿಂತ ಕಡಿಮೆ ಭೂಮಿಗೆ ಬೀಳುವ ಸಣ್ಣ ಕಲ್ಲುಗಣಿಗಾರಿಕೆ ನಿಯಂತ್ರಿಸಲು ಅದಕ್ಕೆ ಅಧಿಕಾರವಿಲ್ಲ. ಆದರೆ ಕೇಂದ್ರ ಸರ್ಕಾರದ ಎಂಎಂಡಿಆರ್ ಕಾಯ್ದೆಯ ಸೆಕ್ಷನ್ 30 ಸಣ್ಣ ಖನಿಜಗಳ ನಿಯಮಗಳನ್ನು ನಿಯಂತ್ರಿಸಲು ಮತ್ತು ರೂಪಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸ್ಪಷ್ಟವಾಗಿ ತಿಳಿಸುತ್ತದೆ. 1994 ರ ಕರ್ನಾಟಕ ಮೈನರ್ ಖನಿಜ ರಿಯಾಯಿತಿ ನಿಯಮಗಳಲ್ಲಿ ಡಿಜಿಎಂಎಸ್ ಪರವಾನಗಿ ಪಡೆಯುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಗಣಿ ಸಚಿವ ಶ್ರೀ ಮುರ್ಗೇಶ್ ನಿರಣಿ, ಕರ್ನಾಟಕದ ಮುಖ್ಯ ಸಚೇತಕ ಶ್ರೀ ಸುನೀಲ್ ಕುಮಾರ್ ಮತ್ತು ಎರಡು ಜಿಲ್ಲೆಗಳ ವಿವಿಧ ಶಾಸಕರು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀ ಕುಮಾರ್ ನಾಯ್ಕ್, ಗಣಿಗಳ ನಿರ್ದೇಶಕರಾದ ಶ್ರೀ ರಮೇಶ್ ಮತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ವೈಪರೀತ್ಯವನ್ನು ಗಮನಿಸಿದಾಗ ಅವರು ಅಂತಹ ಆದೇಶವನ್ನು ಅಂಗೀಕರಿಸುವಂತಹ ಸಂಬಂಧಿತ ಕಾಯ್ದೆಯನ್ನು ಎತ್ತಿ ತೋರಿಸುವ ಸ್ಥಿತಿಯಲ್ಲಿರಲಿಲ್ಲ. ಆದರೆ ಕಲ್ಲುಗಣಿಗಾರಿಕೆ ನಿμÉೀಧವನ್ನು ಹಿಂತೆಗೆದುಕೊಳ್ಳುವ ಮುನ್ಸೂಚನೆಯಂತೆ ಕ್ವಾರಿ ಮಾಲಕರು ಎರಡು ತಿಂಗಳೊಳಗೆ ಡಿಜಿಎಂಎಸ್ ಅನುಮತಿಯನ್ನು ಸಲ್ಲಿಸುವುದಾಗಿ ದೃಢೀಕರಣಪತ್ರವನ್ನು (ಎಫಿಡವಿಟ್) ನೀಡಬೇಕೆಂದು ಅವರು ಒತ್ತಾಯಿಸಿದರು. ಈ ಬೇಡಿಕೆಯು ಅರ್ಥಹೀನ ಮತ್ತು ಅಪ್ರಾಯೋಗಿಕವಾಗಿದೆ ಮತ್ತು ಈಗಾಗಲೇ ನೀಡಿರುವ ಪರವಾನಗಿಯಡಿಯಲ್ಲಿ ಕ್ವಾರಿ ಮಾಲಕರು ನ್ಯಾಯಸಮ್ಮತವಾದ ಕಲ್ಲುಗಣಿಗಾರಿಕೆಗೆ ಅವಕಾಶ ನೀಡುವ ರಾಜ್ಯ ಸರ್ಕಾರದ ಜವಾಬ್ದಾರಿಯನ್ನು ಇದು ಮರೆಮಾಡುತ್ತದೆ. ಪ್ರಸ್ತುತ ನಿμÉೀಧವು ಸಂಪೂರ್ಣವಾಗಿ ಅನಗತ್ಯವಾಗಿದೆ ಮತ್ತು ಅದನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು. ಇದಲ್ಲದೆ, ಐದು ಎಕರೆ ಅಥವಾ ಅದಕ್ಕಿಂತ ಕಡಿಮೆ ಹೊಂದಿರುವ ಸಣ್ಣ ಕ್ವಾರಿ ಮಾಲೀಕರಿಗೆ ಡಿಜಿಎಂಎಸ್ ನಿಂದ ಅನುಮತಿ ಪಡೆಯುವುದರಿಂದ ವಿನಾಯಿತಿ ನೀಡಲು ನಿರ್ದಿಷ್ಟವಾಗಿ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿ ರಾಜ್ಯ ಸರ್ಕಾರವು ಕಾನೂನಿನಲ್ಲಿ ಸ್ಪಷ್ಟತೆಯನ್ನು ತರಬೇಕು.

ರಾಯಲ್ಟಿ ಪಾವತಿ
ಅನುಮತಿ ಪಡೆದ ಪ್ರಮಾಣವನ್ನು ಅವಲಂಬಿಸಿ ರಾಜ್ಯ ಸರ್ಕಾರವು ಕ್ವಾರಿ ಮಾಲಕರಿಂದ ನಿಗದಿತ ರಾಯಧನವನ್ನು ಸಂಗ್ರಹಿಸುತ್ತದೆ. ಪರವಾನಗಿ ನೀಡುವುದು ಮತ್ತು ಅನುಗುಣವಾದ ರಾಯಧನವನ್ನು ಸಂಗ್ರಹಿಸುವುದು ಹಿಂದಿನ ರೂಢಿಯಾಗಿತ್ತು. ತರುವಾಯ, ಸರ್ಕಾರಿ ಯೋಜನೆಗಳಿಗೆ ಸಾಗಿಸಲು ರಾಯಲ್ಟಿ ವಿಧಿಸುವ ನಿಯಮವನ್ನು ಬದಲಾಯಿಸಲಾಯಿತು. ಕ್ವಾರಿ ಹೊಂದಿರುವ ಸರ್ಕಾರಿ ಗುತ್ತಿಗೆದಾರರಿಗೆ ಒಟ್ಟು ಮೊತ್ತವನ್ನು ಸರ್ಕಾರಿ ಯೋಜನೆಗಳಿಗೆ ‘ಶೂನ್ಯ’ ಪರವಾನಗಿಯೊಂದಿಗೆ ಸಾಗಿಸಲು ಅನುಮತಿ ನೀಡಲಾಯಿತು, ಇದರ ಮೂಲಕ ರಾಯಧನವನ್ನು ಅಂತಿಮ ಹಂತದಲ್ಲಿ ಪಾವತಿಸಬಹುದು (ಸರ್ಕಾರಿ ಗುತ್ತಿಗೆದಾರರ ಬಿಲ್ ನಿಂದ ರಾಯಲ್ಟಿ ಕಡಿತಗೊಳಿಸುವ ಮೂಲಕ).

ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲು, ಎಲ್ಲಾ ಪರವಾನಗಿ ಪಡೆದ ಕ್ವಾರಿಗಳಿಗೆ ‘ಶೂನ್ಯ’ ಪರವಾನಗಿ ವ್ಯವಸ್ಥೆಯನ್ನು ವಿಸ್ತರಿಸಬೇಕು. 70% ರಷ್ಟು ಆದಾಯವನ್ನು ಸರ್ಕಾರಿ ಯೋಜನೆಗಳಿಂದ ಸಂಗ್ರಹಿಸಲಾಗುವುದರಿಂದ, ಇದು ಸರಕಾರಕ್ಕೆ ಆದಾಯದಲ್ಲಿ ಆಗುಬಹುದಂತಹ ನಷ್ಟವನ್ನು ತಪ್ಪಿಸುವುದಲ್ಲದೆ, ಕಾನೂನುಬದ್ಧ ಕಲ್ಲುಗಣಿಗಾರಿಕೆಯನ್ನು ಉತ್ತೇಜಿಸುತ್ತದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುತ್ತದೆ.

ಬಾಕಿ ಉಳಿದ ಪರವಾನಗಿಗಳು
12.08.2016 ರಿಂದ ಜಾರಿಗೆ ಬರುವಂತೆ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಸರ್ಕಾರಿ ಆಸ್ತಿಗಳ ಮೇಲೆ ಕಲ್ಲುಗಣಿ ಗುತ್ತಿಗೆ ನೀಡುವುದನ್ನು ಸರ್ಕಾರ ನಿಲ್ಲಿಸಿದೆ. ಆದರೆ 12.08.2016 ಕ್ಕೆ ಮೊದಲು ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಗುತ್ತಿಗೆ ನೀಡಲು ಯಾವುದೇ ಅಡೆತಡೆಗಳಿಲ್ಲ. ಆದ್ದರಿಂದ ಬಾಕಿ ಇರುವ ಅರ್ಜಿಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸಲು ಸರ್ಕಾರವನ್ನು ಕೋರಲಾಗಿದೆ.

ಡೀಮ್ಡ್ ಫಾರೆಸ್ಟ್ ಬಗ್ಗೆ
ಈ ಹಿಂದೆ ಬೇರೊಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ವೋಚ್ಚ ನ್ಯಾಯಾಲಯದ ವಿಚಾರಣೆಗೆ ಪ್ರತಿಕ್ರಿಯಿಸುವಾಗ, ರಾಜ್ಯ ಸರ್ಕಾರವು ಕಾಡಿನ ವ್ಯಾಖ್ಯಾನವನ್ನು ಪೂರೈಸದಿದ್ದರೂ, ರಾಜ್ಯದಲ್ಲಿ ಹೆಚ್ಚಿದ ಅರಣ್ಯ ಪ್ರದೇಶವನ್ನು ತೋರಿಸುವ ಸಲುವಾಗಿ ಕೆಲವು ಪ್ರದೇಶಗಳನ್ನು ‘ಡೀಮ್ಡ್’ ಕಾಡುಗಳೆಂದು ಗುರುತಿಸಿದೆ. ಇದು ಕ್ವಾರಿ ಪರವಾನಗಿ ಹೊಂದಿರುವವರು ಸೇರಿದಂತೆ ಹಲವಾರು ಮಂದಿಗೆ ಸಮಸ್ಯೆಗಳನ್ನು ಉಂಟುಮಾಡಿದೆ ಮತ್ತು ಈ ಜಮೀನುಗಳಲ್ಲಿ ವಾಸಿಸುವವರು ತಮ್ಮ ಭೂ ಹಿಡುವಳಿಗಳಿಗೆ ಖಾತಾ ಪಡೆಯುವುದನ್ನು ತಡೆಯುತ್ತದೆ. ಈ ಜಮೀನುಗಳಿಗೆ ಕೂಡಲೇ ತೆರವು ನೀಡುವಂತೆ ರಾಜ್ಯ ಸರ್ಕಾರವನ್ನು ಕೋರಲಾಗಿದ್ದು, ಇದು ರಾಜ್ಯಕ್ಕೆ ಭಾರಿ ಆದಾಯವನ್ನು ಸಹ ನೀಡುತ್ತದೆ.


Spread the love