ಕ್ಷೇತ್ರದ ಕಡೆಗೆ ತಲೆ ಹಾಕದ ಸಂಸದೆಗೆ ಗೋ ಬ್ಯಾಕ್ ಶೋಭಾ ಅಂದವರು ಯಾರು?: ಗೀತಾ ವಾಗ್ಳೆ

Spread the love

ಕ್ಷೇತ್ರದ ಕಡೆಗೆ ತಲೆ ಹಾಕದ ಸಂಸದೆಗೆ ಗೋ ಬ್ಯಾಕ್ ಶೋಭಾ ಅಂದವರು ಯಾರು?: ಗೀತಾ ವಾಗ್ಳೆ

ಸಂಸದೆ ಶೋಭಾ ಕರಂದ್ಲಾಜೆ ಅವರೊಂದಿಗೆ ಸೆಲ್ಫಿ ಯ ಕುರಿತು ಮಿಥುನ್ ರೈ ಅವರ ಹೇಳಿಕೆಯ ಬೆನ್ನಲ್ಲೇ ಉಡುಪಿಯ ಬಿಜೆಪಿ ನಾಯಕರೆಲ್ಲ ಗುಡುಗು ಸಿಡಿಲು ಮಿಂಚು ಎಲ್ಲಾ ಒಟ್ಟಿಗೇ ಬಂದು ಮೇಲೆರಗಿದಂತೆ ಹೇಳಿಕೆಗಳನ್ನು ಕೊಡುತ್ತಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ.ಜನರಿಂದ ಆಯ್ಕೆಯಾಗಿರುವ ಒಬ್ಬ ಜನ ಪ್ರತಿನಿಧಿ ಕ್ಷೇತ್ರದ ಜನರ ಕಡೆ ತಲೆಹಾಕಿಯೂ ನೋಡದಾಗ ಅವರನ್ನು ಎಚ್ಚರಿಸುವುದು ಪ್ರಜಾಪ್ರಭುತ್ವದಲ್ಲಿ ಎಲ್ಲಾ ನಾಗರಿಕರ ಕರ್ತವ್ಯವೇ ಆಗಿದೆ.ಕ್ಷೇತ್ರದಲ್ಲಿ ವಿರೂಪಗೊಂಡಿರುವ ರಸ್ತೆಗಳು,ಮಾತ್ರವಲ್ಲದೇ ಹಲವಾರು ಜ್ವಲಂತ ಸಮಸ್ಯೆಗಳು ಉದ್ಬವಿಸಿದಾಗ ಜನತೆಯ ಗೋಳನ್ನು ಯಾರೂ ಕೇಳದಾಗ ಇಂತಹ ಹೇಳಿಕೆಗಳು ಹೊರಡುವುದು ಸರ್ವೇ ಸಾಮಾನ್ಯ.ಅಷ್ಟಕ್ಕೂಈ ಹಿಂದೆ ಸಂಸದೆಯಾಗಿದ್ದಾಗ ತಮ್ಮ ಕ್ಷೇತ್ರದ ಕಡೆಗೆ ತಲೆ ಹಾಕದ ಇದೇ ಶೋಭಾ ಕರಂದ್ಲಾಜೆ ಅವರನ್ನು ಗೋ ಬ್ಯಾಕ್ ಶೋಭಾ ಎನ್ನುವುದರ ಮೂಲಕ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡಬಾರದು ಎಂಬ ಒತ್ತಡವನ್ನು ಬಿಜೆಪಿಯವರೇ ತಂದಿದ್ದನ್ನು ಕ್ಷೇತ್ರದ ಜನತೆ ಇನ್ನೂ ಮರೆತಿಲ್ಲ.ಇನ್ನು ವಿರೋಧ ಪಕ್ಷದ ನಾಯಕರೊಬ್ಬರು ಇದಕ್ಕೆ ಸರಿಸಮಾನವಾದ ಹೇಳಿಕೆಯನ್ನು ಕೊಟ್ಟರೆ ಉಡುಪಿಯ ಬಿಜೆಪಿಯವರು ಉರಿಯೋದು ಯಾಕೆ?ಈ ಹೇಳಿಕೆಗೆ ಪ್ರತಿಯಾಗಿ ಬಿಜೆಪಿಯ ರಾಜ್ಯ ಉಪಾಧ್ಯಕ್ಷರು ಚುನಾವಣೆಯಲ್ಲಿ ಸೋತಿರುವ ಮಿಥುನ್ ರೈತರಿಗೆ ಇಂತಹ ಹೇಳಿಕೆ ಕೊಡಲು ಅಧಿಕಾರವಿಲ್ಲ ಎಂದಿದ್ದಾರೆ.ಸೋಲು ಗೆಲುವು ಸಾಮಾನ್ಯ.ಚುನಾವಣೆ ಎಂದರೆ ಯಾರಾದರೊಬ್ಬರು ಸೋಲಲೇಬೇಕು.ಹಾಗೆಂದು ಸೋತವರಿಗೆ ಪ್ರತಿಭಟಿಸುವ ಹಕ್ಕಿಲ್ಲವೇ?ಪ್ರಜಾ ಪ್ರಭುತ್ವದಲ್ಲಿ ಪ್ರತಿಭಟನೆಯ ಧ್ವನಿಗಳನ್ನು ಯಾರೂ ಹತ್ತಿಕ್ಕುವುದು ಸಾಧ್ಯವಿಲ್ಲಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಹೇಳಿದ್ದಾರೆ.

ಬಿಜೆಪಿಯ ಜಿಲ್ಲಾಧ್ಯಕ್ಷರು ಮಿಥುನ್ ರೈ ಅವರನ್ನು ಒಬ್ಬ ಪುಂಡು ಪೋಕರಿ ಅಂತೆಲ್ಲಾ ಕರೆದಿದ್ದಾರೆ.ಮಾನ್ಯ ಅಧ್ಯಕ್ಷರೇ,ತಮ್ಮ ಪಕ್ಷದಲ್ಲಿ ಇಂತಹ ಬಿರುದಾಂಕಿತರು ಅಸಂಖ್ಯ ಮಂದಿ ಇದ್ದಾರೆನ್ನುವುದು ನಮಗೂ ಗೊತ್ತು.ಹಾಗೆಂದು ಅವರನ್ನು ಹಾಗೆ ಸಂಬೋಧಿಸುವುದು ನಮ್ಮ ಪಕ್ಷದ ಸಂಸ್ಕೃತಿ ಅಲ್ಲ.ಒಬ್ಬ ಜಿಲ್ಲಾಧ್ಯಕ್ಷನಾಗಿಒಂದು ರಾಷ್ಟ್ರೀಯ ಪಕ್ಷದ ಲೋಕಾಸಭಾ ಅಭ್ಯರ್ಥಿಯ ಬಗ್ಗೆ ಈ ರೀತಿಯ ಮಾತುಗಳನ್ನು ಬಹಿರಂಗವಾಗಿ ಹೇಳುವುದು ತಮ್ಮ ಘನತೆಗೆ ತಕ್ಕುದಲ್ಲ.ತಮಗೆ ಸಾಧ್ಯವಿದ್ದರೆ, ಕ್ಷೇತ್ರದ ಮತದಾರರ ಬಗ್ಗೆ ನಿಜವಾದ ಕಳಕಳಿ ಇದ್ದರೆ, ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ಮನಸ್ಸು ನಿಜವಾಗಿಯೂ ತುಡಿಯುತ್ತಿದ್ದರೆ ಬಹಳಷ್ಟು ಸಮಯದಿಂದ ಕ್ಷೇತ್ರದ ಕಡೆಗೆ ತಲೆ ಹಾಕದ ಸಂಸದೆಯನ್ನು ಕರೆಸಿ ,ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸುವಂತೆ ಮಾಡಿ . ಆಡಳಿತ ಪಕ್ಷದ ಒಬ್ಬ ಜಿಲ್ಲಾಧ್ಯಕ್ಷ ನಾಗಿ ಮೊದಲು ಈ ಕೆಲಸವನ್ನು ಮಾಡಿ.ಎಂದವರು ಹೇಳಿದ್ದಾರೆ.

ಮಿಥುನ್ ರೈ ಅವರು ಚುನಾವಣೆಯಲ್ಲಿ ಸೋತರೂ ಸದಾ ಕಾಲ ತಮ್ಮ ಕ್ಷೇತ್ರದಲ್ಲಿ ಪಾದರಸದಂತೆ ಓಡಾಡಿ ಜನರ ಕಷ್ಟ ಗಳಿಗೆ ಸ್ಪಂದಿಸುತ್ತಿದ್ದಾರೆ.ಅವರು ಯಾರಿಗೂ ಹೆದರಿ ಮಂಗಳೂರು ಬಿಟ್ಟಿಲ್ಲ.ಕಂಡದ್ದು ಕಂಡ ಹಾಗೆ ಹೇಳಿದರೆ ಬಂದು ಎದೆಗೆ ಒದ್ದಂತೆ ಆಯ್ತು ಅನ್ನೋ ಹಾಗೇ ಮಿಥುನ್ ರೈ ಅವರು ಹೇಳಿರುವ ಹೇಳಿಕೆ ಸತ್ಯವೆಂದರಿತ ಬಿಜೆಪಿ ನಾಯಕರು ಏನು ಮಾಡಬೇಕೆಂದು ತಿಳಿಯದೇ ಪರಿತಪಿಸುತ್ತಿದ್ದಾರೆ.ಸತ್ಯ ಯಾವಾಗಲೂ ಕಹಿ.ಆದ್ದರಿಂದ ಈ ಹೇಳಿಕೆಯ ಹಿಂದಿರುವ ಸತ್ಯವನ್ನು ಅರಿತು ಒಬ್ಬ ಜವಾಬ್ದಾರಿಯುತ ನಾಯಕರಾಗಿ ವರ್ತಿಸುವುದನ್ನು ಉಡುಪಿಯ ಬಿಜೆಪಿಯವರು ಕಲಿತುಕೊಳ್ಳಬೇಕಾಗಿದೆ,ಎಂದು ಗೀತಾ ವಾಗ್ಳೆ ಅವರು ಹೇಳಿದ್ದಾರೆ.


Spread the love