ಕ್ಷೇತ್ರ ಆಯ್ಕೆ ಹೈಕಮಾಂಡ್‌ಗೆ ಬಿಟ್ಟಿದ್ದು: ಸಿದ್ದರಾಮಯ್ಯ

Spread the love

ಕ್ಷೇತ್ರ ಆಯ್ಕೆ ಹೈಕಮಾಂಡ್‌ಗೆ ಬಿಟ್ಟಿದ್ದು: ಸಿದ್ದರಾಮಯ್ಯ

ಮೈಸೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಚಾಮರಾಜನಗರಕ್ಕೆ ತೆರಳಲು ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮೊದಲ ಪಟ್ಟಿ ಬುಧವಾರ ಬಿಡುಗಡೆಯಾಗಲಿದೆ. ಒಬ್ಬರೇ ಆಕಾಂಕ್ಷಿಗಳಿರುವ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ನನ್ನ ಕ್ಷೇತ್ರದ ಬಗ್ಗೆ ಗೊತ್ತಿಲ್ಲ. ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.

ವರುಣಕ್ಕೆ ಬಂದರೆ ಡಾ.ಯತಿಂದ್ರ ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ನಾನು ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಹೇಳಿಲ್ಲ. ರಾಜಕೀಯದಲ್ಲಿ ಯಾವುದೂ ತಳ್ಳಿ ಹಾಕಲಾಗುವುದಿಲ್ಲ. ಅಂತೆ ಕಂತೆಗೆ ಉತ್ತರ ಕೊಡಲ್ಲ ಎಂದು ಪ್ರತಿಕ್ರಿಯಿಸಿದರು.

ನಾನು ಸ್ಪರ್ಧಿಸಲು ಬಾದಾಮಿ, ಕೋಲಾರ ಕ್ಷೇತ್ರಗಳಿವೆ. ಎಚ್.ಡಿ.ಕುಮಾರಸ್ವಾಮಿ ಹೇಳಿದಂತೆ ಕ್ಷೇತ್ರ ಹುಡುಕುತ್ತಿಲ್ಲ. ಬೇಡಿಕೆ ಜಾಸ್ತಿಯಾಗಿದೆ. ಮಾರಿ ಹಬ್ಬಕ್ಕೇ ಪ್ರತಿ ಮನೆಯವರು ಊಟಕ್ಕೆ ಕರೆಯುವಂತೆ ಜನರು ಆಹ್ವಾನಿಸುತ್ತಿದ್ದಾರೆ. ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರು ಗೆಲ್ಲುತ್ತೇನೆ ಎಂದು ಹೇಳಿದರು.

ಗ್ಯಾರಂಟಿ ಕಾರ್ಯಕ್ರಮ ಕೊಡಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಲಂಚ ಕಡಿಮೆ ಮಾಡಿದರೆ ಗ್ಯಾರಂಟಿ ಕಾರ್ಯಕ್ರಮ ಜಾರಿ ಕಷ್ಟವಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಶೇ.40 ರಿಂದ 50ಕ್ಕೆ ಏರಿಕೆಯಾಗಿದೆ ಎಂದು ಆರೋಪಿಸಿದರು.

ನಟ ಚೇತನ್ ಬಂಧನ ವಿಚಾರವಾಗಿ ಪ್ರಜಾಪ್ರಭುತ್ವದಲ್ಲಿ ಮಾತನಾಡುವುದು ತಪ್ಪಾ? ಪ್ರಧಾನಿ ನರೇಂದ್ರ ಮೋದಿ ಎಷ್ಟು ಬಾರಿ ಬಂದ್ರು, ಏನು ಮಾಡಿದರು ಅಷ್ಟೇ. ನಮ್ಮ ಕಾಲದ ಯೋಜನೆಗಳನ್ನು ಅವರು ಉದ್ಘಾಟಿಸುತ್ತಿದ್ದಾರೆ. ಅಡುಗೆ ಮಾಡಿದ್ದು ನಾವು, ಅದನ್ನು ಬಡಿಸಲು ಈಗ ಪ್ರಧಾನಿ ಬರುತ್ತಿದ್ದಾರೆ ಅಷ್ಟೇ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಜಗತ್ತೆ ಕಣ್ಣು ಮುಚ್ಚಿಕೊಂಡಂತೆ ಆಗುವುದಿಲ್ಲ. ಪ್ರಧಾನಿ ಮಾತುಗಳೆನ್ನೆಲ್ಲ ಜನ ನಂಬುವುದಿಲ್ಲ. ದಶಪಥ ರಸ್ತೆ ಮಾಡಿದ್ದು ನಾವು, ಐಐಟಿಗೆ ಜಾಗ ಕೊಟ್ಟು ಗುದ್ದಲಿ ಪೂಜೆ ಮಾಡಿದ್ದು ನಾನು. ಇವರು ಈಗ ಕೇವಲ ಉದ್ಘಾಟನೆಗೆ ಬರುತ್ತಿದ್ದಾರೆ. ಇದು ಜನರಿಗೆ ಅರ್ಥವಾಗುತ್ತದೆ ಬಿಡಿ ಎಂದು ಹೇಳಿದರು.


Spread the love