ಖಾಸಗಿ ಸ್ವಾಮ್ಯದಲ್ಲಿ ಮೈಷುಗರ್ ಕಾರ್ಯಾರಂಭ: ಡಾ.ಅಶ್ವಥ್ ನಾರಾಯಣ

Spread the love

ಖಾಸಗಿ ಸ್ವಾಮ್ಯದಲ್ಲಿ ಮೈಷುಗರ್ ಕಾರ್ಯಾರಂಭ: ಡಾ.ಅಶ್ವಥ್ ನಾರಾಯಣ

ಮಂಡ್ಯ: ಖಾಸಗಿ ಸ್ವಾಮ್ಯದಲ್ಲಿ ಶೀಘ್ರವೇ ಮೈಷುಗರ್ ಕಾರ್ಖಾನೆ ಕಾರ್ಯ ಆರಂಭಿಸಲಿದೆ ಎಂದು ಡಿಸಿಎಂ ಡಾ.ಅಶ್ವಥ್ ನಾರಾಯಣ ಹೇಳಿದ್ದಾರೆ.

ಮದ್ದೂರು ತಾಲೂಕಿನ ಮಾಲಗರನಹಳ್ಳಿಯಲ್ಲಿ ಮಾತನಾಡಿದ ಅವರು ಕಾರ್ಖಾನೆ ಆರಂಭಿಸುವ ಮೂಲಕ ಕಬ್ಬು ಬೆಳೆಗಾರರ ಕೈಹಿಡಿಯಲು ಸರ್ಕಾರ ಮುಂದಾಗಲಿದೆ. ಆದರೆ ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಖಾನೆ ನಡೆಸುವುದು ಕಷ್ಟವಾಗಿದ್ದು, ಖಾಸಗಿಯಿಂದಲೇ ಪರಿಹಾರ ಸಾಧ್ಯ. ಈ ಹಿಂದೆ ಸರ್ಕಾರಿ ಸ್ವಾಮ್ಯದಲ್ಲಿ ನಡೆಸಿ ಏನೆಲ್ಲ ಅದ್ವಾನಗಳಾಗಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆದ್ದರಿಂದ ಖಾಸಗಿ ಸ್ವಾಮ್ಯದಲ್ಲಿ ಕಾರ್ಖಾನೆ ಆರಂಭಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದರು.

ಈ ನಡುವೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಸೇರಿದಂತೆ ಮಂಡ್ಯದ ಕೆಲವು ಶಾಸಕರು ಕಾರ್ಖಾನೆಯನ್ನು ಖಾಸಗಿ ಸ್ವಾಮ್ಯದಲ್ಲಿ ನಡೆಸದೆ ಸರ್ಕಾರದ ಸ್ವಾಮ್ಯದಲ್ಲಿಯೇ ನಡೆಸುವಂತೆ ಒತ್ತಾಯಿಸಿದ್ದರು. ಅಲ್ಲದೆ ಸಂಸದೆ ಸುಮಲತಾ ಅಂಬರೀಶ್ ಅವರ ವಿರುದ್ಧ ಖಾಸಗಿಯವರಿಗೆ ಬೆಂಬಲ ನೀಡುತ್ತಿದ್ದು ತಮಗೆ ಬೇಕಾದವರಿಗೆ ಅವಕಾಶ ಮಾಡಿಕೊಡಲು ಈ ಧೋರಣೆ ಅನುಸರಿಸುತ್ತಿದ್ದಾರೆ. ಅವರದು ಮೀರ್ ಸಾಬಿ ಆಡಳಿತ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ‍್ರೀಕಂಠಯ್ಯ ಆರೋಪಿಸಿದ್ದರು.

ಇದೀಗ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರು ಖಾಸಗಿ ಸ್ವಾಮ್ಯದಲ್ಲಿಯೇ ಕಾರ್ಖಾನೆ ನಡೆಯುತ್ತದೆ ಎಂದು ಹೇಳಿಕೆ ನೀಡಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಆರೋಪ ಪ್ರತ್ಯಾರೋಪ, ಪರ-ವಿರೋಧಗಳನ್ನು ಗಮನಿಸಿದರೆ ಸದ್ಯಕ್ಕೆ ಮೈಶುಗರ್ ಕಾರ್ಖಾನೆ ಆರಂಭವಾಗುವುದಂತು ಮರೀಚಿಕೆಯೇ…


Spread the love