ಗಂಗೊಳ್ಳಿಯಲ್ಲಿ ಮಗುಚಿ ಬಿದ್ದ ನಾಡ ದೋಣಿ – ಏಳು ಮೀನುಗಾರರ ರಕ್ಷಣೆ

Spread the love

ಗಂಗೊಳ್ಳಿಯಲ್ಲಿ ಮಗುಚಿ ಬಿದ್ದ ನಾಡ ದೋಣಿ – ಏಳು ಮೀನುಗಾರರ ರಕ್ಷಣೆ

ಗಂಗೊಳ್ಳಿ: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ನಾಡ ದೋಣಿಯೊಂದು ಮಗುಚಿ ಬಿದ್ದ ಘಟನೆ ಗಂಗೊಳ್ಳಿ ಲೈಟ್‍ಹೌಸ್ ಸಮೀಪದ ಮಡಿ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದ್ದು, ದೋಣಿಯಲ್ಲಿದ್ದ ಏಳು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

ಗಂಗೊಳ್ಳಿಯ ಲೈಟ್‍ಹೌಸ್ ಸಮೀಪದ ಮಡಿ ಎಂಬಲ್ಲಿಂದ ಕಂಚುಗೋಡು ಭರತ್ ಖಾರ್ವಿ ಮಾಲಕತ್ವದ ಶ್ರೀ ಅಷ್ಟದೇವತೆ ಹೆಸರಿನ ನಾಡದೋಣಿಯಲ್ಲಿ ಏಳು ಜನ ಮೀನುಗಾರರು ಶನಿವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದರು. ಮಧ್ಯಾಹ್ನ ಸುಮಾರು 12 ಗಂಟೆ ಹೊತ್ತಿಗೆ ತೀರದಿಂದ ಸುಮಾರು 2-3 ನಾಟಿಕಲ್ ಮೈಲು ದೂರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ಮಗುಚಿ ಬಿದ್ದಿದೆ.

ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಅಕ್ಷಯ್ ಖಾರ್ವಿ, ಸುರೇಶ ಖಾರ್ವಿ, ಅಶೋಕ, ಶಿವರಾಜ್, ಸೃಜನ್, ಶಿವ ಮತ್ತು ಸುಬ್ರಾಯ ಖಾರ್ವಿ ಎಂಬುವರನ್ನು ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೇರೆ ದೋಣಿಯಲ್ಲಿನ ಮೀನುಗಾರರು ರಕ್ಷಿಸಿದ್ದಾರೆ.

ದೋಣಿ ಸಂಪೂರ್ಣ ಹಾನಿಯಾಗಿದ್ದು, ಬಲೆ, ಇಂಜಿನ್ ಮತ್ತಿತರ ಸಲಕರಣೆಗಳು ಸಮುದ್ರದ ನೀರು ಪಾಲಾಗಿದೆ. ಎಲ್ಲಾ ಮೀನುಗಾರರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಸುಮಾರು 4 ಲಕ್ಷಕ್ಕೂ ಮಿಕ್ಕಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ.


Spread the love