
ಗಂಗೊಳ್ಳಿ-ಕುಂದಾಪುರ ಮಾರ್ಗದಲ್ಲಿ ಸ್ಥಗಿತಗೊಂಡ ಕೆ ಎಸ್ ಆರ್ ಟಿ ಸಿ ಬಸ್ಸು ಸಂಚಾರ ಪುನರಾರಂಭಕ್ಕೆ ಆಗ್ರಹ
ಕುಂದಾಪುರ: ಕಳೆದ ಕೆಲವು ದಿನಗಳಿಂದ ಗಂಗೊಳ್ಳಿ-ಕುಂದಾಪುರ ಮಾರ್ಗದಲ್ಲಿ ಕೆಎಸ್ಆರ್ಟಿಸಿ ಬಸ್ಸು ಸಂಚಾರ ಸ್ಥಗಿತಗೊಳಿಸಿದ್ದು, ಆದಷ್ಟು ಶೀಘ್ರ ಸಂಚಾರ ಪುನರಾಂಭಿಸದಿದ್ದಲ್ಲಿ ಡಿಪೋ ಎದುರು ಧರಣಿ ನಡೆಸುವುದಾಗಿ ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿ ತಿಳಿಸಿದೆ.
ಕಳೆದ ಕೆಲವು ತಿಂಗಳ ಹಿಂದೆ ಗಂಗೊಳ್ಳಿ-ಕುಂದಾಪುರ ನಡುವೆ ನಾಲ್ಕು ಕೆಎಸ್ಆರ್ಟಿಸಿ ಬಸ್ ಸಂಚಾರ ನಡೆಸುತ್ತಿದ್ದು, ಕ್ರಮೇಣ ಎರಡು ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಸಂಚಾರ ನಡೆಸುತ್ತಿರುವ ಎರಡು ಬಸ್ಗಳ ಪೈಕಿ ಒಂದು ಬಸ್ ಸಂಚಾರವನ್ನು ಬಸ್ ಕೊರತೆ ನೆಪವೊಡ್ಡಿ ಸ್ಥಗಿತಗೊಳಿಸಲಾಗಿದೆ. ಸಂಚರಿಸುತ್ತಿರುವ ಒಂದು ಬಸ್ ಕೂಡ ಉತ್ತಮ ಸ್ಥಿತಿಯಲ್ಲಿಲ್ಲ. ಕೆಎಸ್ಆರ್ಟಿಸಿ ಅಧಿಕಾರಿಗಳ ತಾರತಮ್ಯ ಧೋರಣೆ ಖಂಡನೀಯ.
ಸುಮಾರು 13 ವರ್ಷಗಳಿಂದ ಎರಡು ಕೆಎಸ್ಆರ್ಟಿಸಿ ಬಸ್ಸುಗಳು ನಿರಂತರವಾಗಿ ಸಂಚರಿಸುತ್ತಿದ್ದರೂ ಇದೀಗ ಬಸ್ ಕೊರತೆ ನೆಪವೊಡ್ಡಿ ಸರಕಾರಿ ಬಸ್ ಸಂಚಾರವನ್ನು ಸ್ಥಗಿತಗೊಳಿಸುವುದು ಅನುಮಾನಕ್ಕೆ ಕಾರಣವಾಗಿದ್ದು, ಇದರ ಹಿಂದೆ ಯಾವುದೋ ಒತ್ತಡ ಮತ್ತು ಖಾಸಗಿ ಬಸ್ ಮಾಲೀಕರ ಲಾಬಿಗೆ ಕೆಲಸ ಮಾಡುತ್ತಿದೆ. ಸ್ಥಗಿತಗೊಳಿಸಲಾಗಿರುವ ಬಸ್ ಸಂಚಾರವನ್ನು ಪುನರಾರಂಭಿಸದಿದ್ದಲ್ಲಿ ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ನಾಗರಿಕರೊಡಗೂಡಿ ಕುಂದಾಪುರ ಡಿಪೋ ಎದುರು ಧರಣಿ ನಡೆಸಲಾಗುವುದು ಎಂದು ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿ ಸಂಚಾಲಕ ರಾಘವೇಂದ್ರ ಪೈ ತಿಳಿಸಿದ್ದಾರೆ.