
ಗಂಗೊಳ್ಳಿ ಬಂದರು ಜೆಟ್ಟಿ ಕುಸಿತ ತನಿಖೆಯಾಗಬೇಕು: ಮಾಜಿ ಶಾಸಕ ಗೋಪಾಲ ಪೂಜಾರಿ ಆಗ್ರಹ
ಕುಂದಾಪುರ: ಗಂಗೊಳ್ಳಿ ಜೆಟ್ಟಿ ಕಾಮಗಾರಿಯಲ್ಲಿ ಸಾಕಷ್ಟು ಲೋಪಗಳು ಉಂಟಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಎಲ್ಲಿ, ಯಾರಿಂದ, ಏನೆಲ್ಲಾ ತಪ್ಪುಗಳಾಗಿವೆ ಎನ್ನುವುದುರ ಕುರಿತು ಸಂಪೂರ್ಣ ತನಿಖೆಯಾಗಬೇಕು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಆಗ್ರಹಿಸಿದ್ದಾರೆ.
ಗಂಗೊಳ್ಳಿ ಜೆಟ್ಟಿ ಕುಸಿತ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ ಅವರು ಮೀನುಗಾರರ ಸಮಸ್ಯೆಗಳನ್ನು ಆಲಿಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಗಂಗೊಳ್ಳಿ ಜೆಟ್ಟಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಕಾಮಗಾರಿ ಕಳಪೆಯಾಗಲು ಕಾರಣ ಏನು ಮತ್ತು ಇದರ ತಾಂತ್ರಿಕ ಪರಿಣತರು ಯಾರು ಎನ್ನುವುದರ ಕುರಿತು ಯಾವುದಾದರೂ ಸಂಸ್ಥೆಯಿಂದ ಪೂರ್ಣಪ್ರಮಾಣದ ತನಿಖೆ ನಡೆಯಬೇಕು. ಕಾಮಗಾರಿ ಇನ್ನೂ ಸಂಪೂರ್ಣ ಪೂರ್ಣಗೊಳ್ಳದೇ 10 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೆ ನೇರ ಶಾಸಕರೇ ಹೊಣೆ. ಅವರ ಮುತುವರ್ಜಿ ಇಲ್ಲದ ಕಾರಣ ಇಷ್ಟೆಲ್ಲಾ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿದ್ದಾರೆ.
ಸಾಮಾನ್ಯವಾಗಿ ಇಂತಹ ಕಾಮಗಾರಿಗಳ ವಿನ್ಯಾಸವನ್ನು ಪುಣೆಯ ಸಿಡಬ್ಲ್ಯುಪಿಆರ್‍ಎಸ್ ಸಂಸ್ಥೆಗೆ ವಹಿಸಲಾಗುತ್ತದೆ. ಆದರೆ ರಾಜ್ಯ ಸರ್ಕಾರ ತರಾತುರಿಯಲ್ಲಿ ಕಮಿಷನ್ ಆಸೆಗೆ ಬೆಂಗಳೂರಿನ ಕಂಪೆನಿಗೆ ಕೆಲಸ ವಹಿಸಿದೆ. ಇಂಜಿನಿಯರ್ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ಕಳಪೆಯಾಗಿದೆ. ಘಟನೆ ನಡೆದು ಎರಡು ದಿನವಾದರೂ ಸ್ಥಳೀಯ ಶಾಸಕರೂ ಸ್ಥಳಕ್ಕೆ ಭೇಟಿ ನೀಡಿಲ್ಲದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದವರು ಹೇಳಿದರು.
40% ಕಮಿಷನ್ ವಾಸನೆ:
ಬಿಜೆಪಿ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪವಿದ್ದು ನಮ್ಮ ಎರಡು ಜಿಲ್ಲೆಗಳಲ್ಲೂ ಅದರ ವಾಸನೆ ಹೊಡೆಯುತ್ತಿದೆ. ಜನರ ಹಣ ಸಮುದ್ರ ಪಾಲಾಗಿದೆ ಎಂಬ ಜನರ ಅಪವಾದ ಇಲ್ಲಿ ಕಣ್ಣೆದುರೇ ಕಾಣುತ್ತಿದೆ. ಖಾಸಗಿಯವರಿಂದ ನೀಲನಕಾಶೆ ತಯಾರಿಸಿ ಬೆಂಗಳೂರು ಜಾಲಳ್ಳಿಯ ಮೀನುಗಾರಿಕಾ ಇಲಾಖೆಯಿಂದ ಅನುಮೋದನೆ ಪಡೆಯಲಾಗಿದೆ. ಹೊಸ ಜೆಟ್ಟಿ ನಿರ್ಮಾಣಕ್ಕೆ 12.3 ಕೋ.ರೂ.ಗೆ ಟೆಂಡರ್ ಆಗಿದ್ದು, ಜೆಟ್ಟಿ ಕುಸಿತದಿಂದ ಮೀನುಗಾರರಿಗೆ ತೊಂದರೆಯಾಗಿದೆ. ಸರಕಾರ, ಮೀನುಗಾರಿಕಾ ಇಲಾಖೆ ತತ್‍ಕ್ಷಣ ಸ್ಪಂದಿಸಬೇಕು ಎಂದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಮಾಹಿತಿ ಕೇಳಿದ್ದು ಅವರಿಗೆ ನೀಡಲಾಗುವುದು ಎಂದರು.
ಈ ವೇಳೆಯಲ್ಲಿ ಸ್ಥಳೀಯ ಮುಖಂಡರಾದ ಮಂಜುಳಾ ದೇವಾಡಿಗ, ದುರ್ಗಾರಾಜ್ ಪೂಜಾರಿ, ದೇವು ಖಾರ್ವಿ, ಪ್ರದೀಪ್ ಖಾರ್ವಿ ಇದ್ದರು.