
ಗಂಟಿಹೊಳೆ ಶಾಸಕರಾದರೆ ಯಾವ ಭಯೋತ್ಪಾದಕರೂ ಬೈಂದೂರಿಗೆ ತಲೆ ಹಾಕಲ್ಲ – ಕೋಟ ಶ್ರೀನಿವಾಸ ಪೂಜಾರಿ
ಕುಂದಾಪುರ: ಗುರುರಾಜ್ ಗಂಟಿಹೊಳೆ ಶಾಸಕರಾಗಿ ಆಯ್ಕೆಯಾದರೆ ಯಾವ ಭಯೋತ್ಪಾದಕರೂ ಬೈಂದೂರಿಗೆ ತಲೆ ಹಾಕಿ ನೋಡುವುದಿಲ್ಲ. ಇದು ವ್ಯಕ್ತಿಗಳ ನಡುವಿನ ಚುನಾವಣೆಯಲ್ಲ. ಇದು ಸೈದ್ಧಾಂತಿಕ ಹೋರಾಟದ ಚುನಾವಣೆ. ಇಲ್ಲಿ ಗೋಪಾಲ ಪೂಜಾರಿ ಹಾಗೂ ಗುರುರಾಜ್ ಗಂಟಿಹೊಳೆ ನಡುವಿನ ಪ್ರಶ್ನೆಯಲ್ಲ. ಭಯೋತ್ಪಾದನೆಯನ್ನು ವೈಭವೀಕರಿಸುವ ಹಾಗೂ ಭಯೋತ್ಪಾದನೆಯನ್ನು ಮಟ್ಟಹಾಕುವವರ ನಡುವಿನ ಚುನಾವಣೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಗುರುವಾರ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಬೈಂದೂರಿನ ಹೊಸ ಬಸ್ ನಿಲ್ದಾಣದಲ್ಲಿ ನಡೆದ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ದೇವರಿಗೆ ಸರಿಯಾಗಿ ಯಾರಾದರೂ ಕೆಲಸ ಮಾಡುವವರಿದ್ದರೆ ಅದು ಬಿಜೆಪಿ ಮಾತ್ರ. ದೇವರು ಮೆಚ್ಚುವ ರಾಜಕೀಯ ಪಕ್ಷ ಯಾವುದಾದರೂ ಇದ್ದರೆ ಅದು ಭಾರತೀಯ ಜನತಾ ಪಕ್ಷ ಮಾತ್ರ. ಗುರುರಾಜ್ ಗಂಟಿಹೊಳೆಯವರಲ್ಲಿ ಎಷ್ಟು ಹಣವಿದೆಯೊ ನನಗೆ ಗೊತ್ತಿಲ್ಲ. ಒಂದು ವೇಳೆ ಹಣ ಇಲ್ಲದೇ ಇದ್ದರೆ ಬೈಂದೂರು ಕ್ಷೇತ್ರದಲ್ಲಿ 25000 ಕಾರ್ಯಕರ್ತರಿದ್ದೇವೆ. ಎಲ್ಲಾ 10 ರೂ ಕೊಟ್ಟರೂ ಚುನಾವಣೆ ನಡೆದು ಹೋಗುತ್ತದೆ. ರಾಜಕಾರಣದ ತಂತ್ರ, ಕುತಂತ್ರಗಳಿಗೆ ಬಗ್ಗುವ ಪ್ರಶ್ನೆ ಇಲ್ಲ ಎಂದರು.
ಸಚಿವ ಸುನೀಲ್ ಕುಮಾರ್ ಮಾತನಾಡಿ, ಬೈಂದೂರಲ್ಲಿ ಸಂಸದ ಬಿವೈ ರಾಘವೇಂದ್ರ, ಶಾಸಕ ಸುಕುಮಾರ್ ಶೆಟ್ಟರು ಮಾಡಿರುವಂತಹ ಅಭಿವೃದ್ಧಿ ಕಾರ್ಯವನ್ನು ಮುಂದುವರಿಸಲು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಪಕ್ಷದ ಕಾರ್ಯಕರ್ತರು ವಹಿಸಿಕೊಳ್ಳಬೇಕು. ಇವತ್ತು ಸೇರಿರುವ ಜನಸ್ತೋಮವನ್ನು ನೋಡಿದರೆ ನಮ್ಮ ಗೆಲುವು ನಿಶ್ಚಿತ ಎನ್ನುವ ಅವರು ವಿಶ್ವಾಸವನ್ನು ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಮಾತನಾಡಿ, ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ. ಇಷ್ಟು ದೊಡ್ಡ ರಾಷ್ಟ್ರೀಯ ಪಕ್ಷ ನನಗೆ ಬಹುದೊಡ್ಡ ಜವಾಬ್ದಾರಿ ಕೊಟ್ಟಿದೆ. ಕಾರ್ಯಕರ್ತರ ಬೆಂಬಲ, ಪ್ರೀತಿಯೇ ನನ್ನ ಬಹುದೊಡ್ಡ ಆಸ್ತಿ. ಎರಡು ದಿನದಲ್ಲಿ ಎಲ್ಲ ೩೯ ಗ್ರಾಮಗಳಿಗೂ ಹೋಗಿ ಬಂದು, ನಾಮಪತ್ರ ಸಲ್ಲಿಸುವ ದಿನ ಎಲ್ಲರೂ ಬನ್ನಿ ಆಶೀರ್ವಾದ ಮಾಡಿ ಎಂದಿದ್ದೆ. ಇವತ್ತು ಬಂದ ಜನಸ್ತೋಮ ನೋಡಿದಾಗ ನನ್ನಲ್ಲಿದ್ದ ಆತಂಕ ದೂರವಾಗಿದ್ದು, ಬೈಂದೂರಿನ ಯಾರಿಗೂ ಸಮಸ್ಯೆಯಾದರೂ ನಾನು ಹಾಗೂ ಕಾರ್ಯಕರ್ತರು ನಿಮ್ಮೊಂದಿಗಿದ್ದೇವೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಗುರುರಾಜ್ ಕೇವಲ ಬಡವರ ಮನೆ ಹುಡುಗ ಮಾತ್ರವಲ್ಲ, ಬಡವರನ್ನು ಪ್ರೀತಿಸುವ ದೊಡ್ಡ ಹೃದಯ ಶ್ರೀಮಂತಿಕೆಯುಳ್ಳವರು. ಯಡಿಯೂರಪ್ಪ, ಬೊಮ್ಮಾಯಿ ನೇತೃತ್ವದ ಸರಕಾರದಿಂದ ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದು, ಅದನ್ನು ಪೂರ್ತಿಗೊಳಿಸುವ ಸಲುವಾಗಿ ಮತ್ತೊಮ್ಮೆ ನಮ್ಮನ್ನು ಗೆಲ್ಲಿಸಬೇಕು ಎಂದವರು ಮನವಿ ಮಾಡಿಕೊಂಡರು.
ಬೃಹತ್ ಸಮಾವೇಶಕ್ಕೂ ಮೊದಲು ನಡೆದ ಮೆರವಣಿಗೆಯಲ್ಲಿ ಕ್ಷೇತ್ರದ ಬೇರೆ ಬೇರೆ ಕಡೆಗಳಿಂದ ಸಹಸ್ರಾರು ಮಂದಿ ಪಾಲ್ಗೊಂಡರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಂಗಳೂರು ಪ್ರಭಾರಿ ಉದುಯ್ ಕುಮಾರ್ ಶೆಟ್ಟಿ, ಕಾಪು ಅಭ್ಯರ್ಥಿ ಸುರೇಶ್ ಶೆಟ್ಟಿ ಗುರ್ಮೆ, ಬೈಂದೂರು ಬಿಜೆಪಿ ಉಸ್ತುವಾರಿ ಕ್ಯಾ. ಬ್ರಿಜೇಶ್ ಚೌಟ, ಪ್ರಭಾರಿ ಕಿಶೋರ್ ಕುಮಾರ್, ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪ್ರಿಯದರ್ಶಿನಿ ದೇವಾಡಿಗ, ಮಾಲತಿ ನಾಯ್ಕ್, ಶ್ಯಾಮಲಾ ಕುಂದರ್, ಜಿ.ಪಂ. ಮಾಜಿ ಸದಸ್ಯರಾದ ಸುರೇಶ್ ಬಟವಾಡಿ, ರೋಹಿತ್ ಕುಮಾರ್ ಶೆಟ್ಟಿ, ಪ್ರಣಯ್ ಕುಮಾರ್ ಶೆಟ್ಟಿ, ಸುರೇಶ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಮತ್ತಿತರರು ಉಪಸ್ಥಿತರಿದ್ದರು.