ಗಜಪಡೆ, ಅಶ್ವದಳಕ್ಕೆ ಸಿಡಿಮದ್ದಿನ ತಾಲೀಮು ಆರಂಭ

Spread the love

ಗಜಪಡೆ, ಅಶ್ವದಳಕ್ಕೆ ಸಿಡಿಮದ್ದಿನ ತಾಲೀಮು ಆರಂಭ

ಮೈಸೂರು: ಐತಿಹಾಸಿಕ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಗಜಪಡೆಗಳ ತಾಲೀಮು ಈಗಾಗಲೇ ಆರಂಭವಾಗಿದ್ದು, ತಾಲೀಮಿನ ಪ್ರಮುಖ ಅಂಗವಾಗಿರುವ ಸಿಡಿಮದ್ದಿನ ತಾಲೀಮನ್ನು ಸೋಮವಾರ ನಡೆಸಲಾಯಿತು.

ಸಿಡಿಮದ್ದಿನ ತಾಲೀಮಿನ ವೇಳೆ ಗಜಪಡೆ ಸೇರಿದಂತೆ ಅಶ್ವದಳ ಪಾಲ್ಗೊಂಡಿದ್ದವು. ಜಂಬೂಸವಾರಿ ವೇಳೆ ಕುಶಾಲತೋಪು ಸಿಡಿಸುವ ವೇಳೆ ಅದರ ಶಬ್ದಕ್ಕೆ ಬೆದರದಂತೆ ಗಜಪಡೆ ಹಾಗೂ ಕುದುರೆಗಳಿಗೆ ಅಭ್ಯಾಸ ಮಾಡುವ ಸಲುವಾಗಿ ಸಿಡಿಮದ್ದಿನ ತಾಲೀಮನ್ನು ನಡೆಸಲಾಗುತ್ತದೆ. ಅದರಂತೆ ಸೋಮವಾರ ಮೊದಲ ಹಂತದ ಸಿಡಿಮದ್ದಿನ ತಾಲೀಮನ್ನು ನಡೆಸಲಾಯಿತು.

ಅರಮನೆಯ ಕೋಟೆ ಮಾರಮ್ಮ ದೇವಸ್ಥಾನದ ಬಳಿಯ ಪಾರ್ಕಿಂಗ್ ಆವರಣದಲ್ಲಿ ಸೋಮವಾರ ಮಧ್ಯಾಹ್ನ ನಡೆದ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು ನೇತೃತ್ವದ 14ಆನೆಗಳಿಗೆ ಹಾಗೂ 44 ಆಶ್ವಗಳಿಗೆ 7 ಫಿರಂಗಿಗಳಲ್ಲಿ ಮೂರು ಸುತ್ತಿನಂತೆ ಒಟ್ಟು 21 ಕುಶಲತೋಪು ಸಿಡಿಸುವ ಮೂಲಕ ಭಾರಿ ಶಬ್ಧದ ತಾಲೀಮು ನಡೆಸಲಾಯಿತು. ಈ ವೇಳೆ ಹೊಸ ಆನೆಗಳಾದ ಪಾರ್ಥಸಾರಥಿ, ಶ್ರೀರಾಮ, ಸುಗ್ರೀವ ಹಾಗೂ ಭೀಮ, ಧನಂಜಯ ಆನೆಗಳು ಬೆದರಿ ಘೀಳಿಟ್ಟವು. ಅಶ್ವದಳದ ಕುದುರೆಗಳು ಸಹ ವಿಚಲಿತಗೊಂಡವು.

ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸಿರುವ ಶ್ರೀರಾಮ, ಸುಗ್ರೀವ, ಅತಿ ಚಿಕ್ಕ ವಯಸ್ಸಿನ ಆನೆಯಾದ ಪಾರ್ಥಸಾರಥಿ ಮತ್ತು ಎರಡನೇ ಬಾರಿಗೆ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಭೀಮ, ಧನಂಜಯ, ಲಕ್ಷ್ಮೀ ಆನೆಗಳು ಸಿಡಿಮದ್ದಿನ ಭಾರೀ ಶಬ್ಧಕ್ಕೆ ಬೆದರಿ ಘೀಳಿಟ್ಟವು. ಮುಂಜಾಗ್ರತಾ ಕ್ರಮವಾಗಿ ವಿಜಯ, ಶ್ರೀರಾಮ, ಸುಗ್ರೀವ ಆನೆಗಳ ಕಾಲಿಗೆ ಸರಪಳಿ ಕಟ್ಟಿ ಪ್ರತ್ಯೇಕವಾಗಿ ನಿಲ್ಲಿಸಲಾಗಿತ್ತು. ಮೊದಲ ಸುತ್ತಿನ ಸಿಡಿಮದ್ದು ಸಿಡಿಸುತ್ತಿದ್ದಂತೆ, ಬೆದರಿ ಹಿಂದೆ ಮುಂದೆ ಚಲಿಸಲಾರಂಭಿಸಿದವು. ಈ ವೇಳೆ ಮಾವುತರು ಆನೆಗಳನ್ನು ನಿಯಂತ್ರಿಸಿದರು. ಕಳೆದ ಎರಡು ವರ್ಷಗಳಿಂದ ಭಾಗವಹಿಸುತ್ತಿರುವ ಧನಂಜಯ ಈ ಬಾರಿಯೂ ಭಾರೀ ಶಬ್ಧಕ್ಕೆ ಬೆದರಿದ್ದು ಕಂಡುಬಂತು.

ಸಿಡಿಮದ್ದು ತಾಲೀಮಿನಲ್ಲಿ ಎಂದಿನಂತೆ ಈ ಬಾರಿಯೂ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಮತ್ತು ಮಾಜಿ ಕ್ಯಾಪ್ಟನ್ ಅರ್ಜುನ ಕೊಂಚವೂ ಬೆದರದೆ ಧೈರ್ಯ ಪ್ರದರ್ಶಿಸಿದವು. ಸಿಡಿಮದ್ದು ಸಿಡಿಸುತ್ತಿದ್ದಂತೆ ಹೊಮ್ಮಿದ ಭಾರೀ ಶಬ್ದಕ್ಕೆ ಎದೆ ಝಲ್ ಎಂದರೂ ಈ ಆನೆಗಳು ಬೆಚ್ಚಲಿಲ್ಲ. ಬದಲಿಗೆ ಜಂಬೂ ಸವಾರಿಯಂದು ಸಿಡಿಮದ್ದು ಸಿಡಿಸುತ್ತಿದ್ದಂತೆ ಮುಂದಡಿಯಿಡುವ ಅಭ್ಯಾಸವಾಗಿ ಅಂತೆಯೇ ಮುಂದಕ್ಕೆ ಹೆಜ್ಜೆ ಹಾಕಿದವು. ಇದೇ ಮೊದಲ ಬಾರಿಗೆ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿರುವ ಮಹೇಂದ್ರ ಆನೆ ಬೆಚ್ಚದೆ ತಾಲೀಮು ಯಶಸ್ವಿಗೊಳಿಸಿದೆ.

ಆದರೆ ಸಿಡಿಮದ್ದು ತಾಲೀಮಿನ ವೇಳೆ ಆನೆಗಳನ್ನು ಸಾಲಾಗಿ ನಿಲ್ಲಿಸಿ ಅವುಗಳ ಮುಂದೆ ಅಶ್ವದಳ ಕುದುರೆಗಳನ್ನು ನಿಲ್ಲಿಸಲಾಗಿತ್ತು. ಈ ವೇಳೆ ಅಶ್ವದಳದ ಕುದುರೆಯೊಂದು ಗಾಬರಿಗೊಂಡು ಆನೆಗಳತ್ತ ಸಾಗಿತು. ಇದರಿಂದ ವಿಚಲಿತಗೊಂಡ ಆನೆಗಳು ಘೀಳಿಟ್ಟವು. ಇದರಿಂದ ಕೆಲಕ್ಷಣ ಆಂತಕದ ವಾತಾವರಣ ಸೃಷ್ಟಿಯಾಯಿತು. ಆನೆಗಳು ಮತ್ತಷ್ಟು ಹೆದರದಂತೆ ಮಾವುತ, ಕಾವಾಡಿಗಳು ಆನೆಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಮುಂದಿನ ಸಿಡಿಮದ್ದಿನ ತಾಲೀಮು ಸೆ.16ರಂದು ನಡೆಯಲಿದೆ.

ಈ ಸಂದರ್ಭ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ, ಡಿಸಿಎಫ್ ಡಾ.ವಿ. ಕರಿಕಾಳನ್, ಆನೆ ವೈದ್ಯ ಮುಜೀಬ್ ಸೇರಿದಂತೆ ಹಲವರು ಇದ್ದರು.


Spread the love

Leave a Reply

Please enter your comment!
Please enter your name here