ಗಣೇಶೋತ್ಸವದಲ್ಲಿ ಪಾಲಿಕೆ ನಿಯಮ ಪಾಲನೆ ಕಡ್ಡಾಯ

Spread the love

ಗಣೇಶೋತ್ಸವದಲ್ಲಿ ಪಾಲಿಕೆ ನಿಯಮ ಪಾಲನೆ ಕಡ್ಡಾಯ

ಮೈಸೂರು: ಗಣೇಶೋತ್ಸವ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ಕೆಲವು ನಿಬಂಧನೆಗಳನ್ನು ತಂದಿದ್ದು ಅದನ್ನು ಕಡ್ಡಾಯವಾಗಿ ಪಾಲಿಸುವಂತೆ ಗಣೇಶ ಮೂರ್ತಿ ತಯಾರಕರು, ಮಾರಾಟಗಾರರು ಮತ್ತು ಸಾರ್ವಜನಿಕರಿಗೆ ಸೂಚಿಸಲಾಗಿದೆ.

ಗಣೇಶ ಮೂರ್ತಿಯ ತಯಾರಿಕೆಗಾಗಿ ಬಳಸುವ ರಾಸಾಯನಿಕ ಬಣ್ಣಗಳು, ಧರ್ಮಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್‌ಗಳ ಬಳಕೆಯನ್ನು ಸರ್ಕಾರವು ಸಂಪೂರ್ಣವಾಗಿ ನಿರ್ಬಂಧಿಸಿರುವುದರಿಂದ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ರೀತಿಯ ವಸ್ತುಗಳನ್ನು ಬಳಸಿ ಗಣೇಶ ಮೂರ್ತಿಗಳ ತಯಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಇದನ್ನು ಉಲ್ಲಂಘಿಸಿದಲ್ಲಿ ಕ್ರಮದ ಎಚ್ಚರಿಕೆ ನೀಡಲಾಗಿದೆ.

ಪ್ಲಾಸ್ಟರ್ ಆಫ್ ಪ್ಯಾರೀಸ್ ವಸ್ತುಗಳನ್ನು ಬಳಸಿ ಗಣೇಶ ಮೂರ್ತಿಗಳನ್ನು ತಯಾರಿಸಿದಲ್ಲಿ ಸಂಬಧಧಪಟ್ಟವರ ವಿರುದ್ಧ IPC 1860 ರ ಪ್ರಕಾರ ಕ್ರಿಮಿನಲ್ ಮೊಕದಮ್ಮೆಯನ್ನು ದಾಖಲಿಸಲಾಗುವುದು, ಪ್ಲಾಸ್ಟರ್ ಆಫ್ ಪ್ಯಾರೀಸ್ ವಸ್ತುಗಳಲ್ಲಿ ತಯಾರಿಸಿದ ಗಣೇಶ ಮೂರ್ತಿಗಳ ಮಾರಾಟವನ್ನು ಸಹ ಸಂಪೂರ್ಣವಾಗಿ ನಿಷೇಧಿಸಿದೆ. ಈ ರೀತಿಯ ಗಣೇಶ ಮೂರ್ತಿ ಮಾರಾಟಗಾರರ ವಿರುದ್ಧವು ಕ್ರಮ ಕೈಗೊಳ್ಳಲಾಗುವುದು ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್ ವಸ್ತುಗಳಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪಾಲಿಕೆ ವಶಕ್ಕೆ ಪಡೆಯಲಾಗುವುದು, ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾತ್ರ ತಯಾರಿಸಲು ಅಥವಾ ಮಾರಾಟ ಮಾಡಲು ಸೂಚಿಸಿದೆ.

ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ ಬಕೆಟ್‌ಗಳಲ್ಲಿ ವಿಸರ್ಜನೆಗೊಳಿಸಿ ಬರುವ ಮಣ್ಣನ್ನು ಕೈತೋಟದಲ್ಲಿ ಹೂವಿನ ಕುಂಡಗಳಿಗೆ ಬಳಸಲು ಸೂಚಿಸಲಾಗಿದೆ.

ಪಾಲಿಕೆ ವ್ಯಾಪ್ತಿಯ ಕೆರೆ, ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಯನ್ನು ನಿಷೇಧಿಸಿದ್ದು, ಸದರಿ ಸ್ಥಳಗಳ ಸಮೀಪದಲ್ಲಿ ತಾತ್ಕಾಲಿಕ ವಿಸರ್ಜನೆಗೆ ಅವಕಾಶ ಮಾಡಿದ್ದು, ಸದರಿ ವಿಸರ್ಜನೆಯಿಂದ ಬರುವ ಮಣ್ಣು, ಪೂಜಾ ಹೂಗಳು ಹಾಗೂ ಪ್ಲಾಸ್ಟಿಕ್ ಇತ್ಯಾದಿ ವಸ್ತುಗಳನ್ನು ಪ್ರತ್ಯೇಕವಾಗಿ ಹಸಿತ್ಯಾಜ್ಯ ಮತ್ತು ಒಣತ್ಯಾಜ್ಯವನ್ನಾಗಿ ವಿಂಗಡಿಸಿ, ವಿಲೇ ಮಾಡುವುದು ಸೂಕ್ತವಾಗಿರುತ್ತದೆ. ಪರಿಸರ ಸ್ನೇಹಿ ಗಣೇಶ ಆಚರಣೆಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಮೈಸೂರು ಮಹಾನಗರ ಪಾಲಿಕೆ, ಪರಿಸರ ಇಲಾಖೆ ಹಾಗೂ ಪೊಲೀಸ್ ಇಲಾಖೆ ಹೊರಡಿಸುವ ಸೂಚನೆಗಳನ್ನು ಪಾಲಿಸಿ, ಗಣೇಶ ಹಬ್ಬ ಆಚರಣೆ ಮಾಡಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ,.

ಪ್ಲಾಸ್ಟಿಕ್ ನಿಷೇಧ ಆದೇಶ ಜಾರಿಯಲ್ಲಿರುವುದರಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿ ನಿಷೇಧಿತ ಪ್ಲಾಸ್ಟಿಕ್ ಬಳಸತಕ್ಕದಲ್ಲ, ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಇಚ್ಛಿಸುವ ಆಯೋಜಕರು, ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ.


Spread the love