ಗಣೇಶ್ ಮಾರ್ಬಲ್ಸ್ ಹಾಗೂ ಕಜಾರಿಯ ಕಂಪೆನಿಗೆ ದಂಡ ವಿಧಿಸಿದ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ

Spread the love

ಗಣೇಶ್ ಮಾರ್ಬಲ್ಸ್ ಹಾಗೂ ಕಜಾರಿಯ ಕಂಪೆನಿಗೆ ದಂಡ ವಿಧಿಸಿದ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ

ಕುಂದಾಪುರ: ಉಡುಪಿಯ ಮಾರ್ಬಲ್ ವಿತರಣಾ ಅಂಗಡಿ ಹಾಗೂ ಅದರ ಕಂಪೆನಿಗೆ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿ ತೀರ್ಪು ನೀಡಿದೆ.

ಸ್ಟೇಟ್ ಬ್ಯಾಂಕ್ ಉದ್ಯೋಗಿ ಪ್ರಕಾಶ್ ರವರು ತಮ್ಮ ಹಳೆ ಮನೆಯ ನವೀಕರಣಕ್ಕಾಗಿ ಉಡುಪಿಯ ನಿಟ್ಟೂರು ರಾ.ಹೆ 66 ರ ಬಳಿಯಿರುವ ಗಣೇಶ್ ಮಾರ್ಬಲ್ಸ್ ನಿಂದ ಕಜಾರಿಯ ಕಂಪೆನಿಯ ಸುಮಾರು ರೂ.81,158/- ಬೆಲೆ ಬಾಳುವ ಟೈಲ್ಸ್ ಗಳನ್ನು ಖರೀದಿಸಿರುತ್ತಾರೆ. ಹೀಗೆ ಖರೀದಿ ಮಾಡಿದ ಟೈಲ್ಸ್ ಗಳ ಪೈಕಿ ಹಾಲ್ ಹಾಗೂ ಬೆಡ್ ರೂಂಗೆ ಅಳವಡಿಸಿದ ಟೈಲ್ಸ್ ಗಳ ಎಲ್ಲಾ ಅಂಚುಗಳು ಮೇಲಕ್ಕೆ ಉಬ್ಬಿಕೊಂಡಿದ್ದು ದೋಷಪೂರಿತವಾಗಿದ್ದವು. ಈ ಬಗ್ಗೆ ಪ್ರಕಾಶ್ ರವರು ಗಣೇಶ್ ಮಾರ್ಬಲ್ಸ್ ರವರನ್ನು ಸಂಪರ್ಕಿಸಿ ವಿಚಾರ ತಿಳಿಸಿ ಬೇರೆ ಟೈಲ್ಸ್ ಗಳನ್ನು ನೀಡುವoತೆ ಕೇಳಿಕೊoಡಾಗ ಅವರು ಗ್ರಾಹಕನಿಗೆ ಹಾರಿಕೆಯ ಉತ್ತರವನ್ನು ನೀಡಿರುತ್ತಾರೆ.

ಈ ಬಗ್ಗೆ ಪ್ರಕಾಶ್ ರವರು ಕಜಾರಿಯ ಕಂಪೆನಿಯನ್ನು ಸಂಪರ್ಕಿಸಿದಾಗ ಅವರಿಂದಲೂ ಸೂಕ್ತ ಪ್ರತಿಕ್ರಿಯೆ ಬರದ ಕಾರಣ ಗಣೇಶ್ ಮಾರ್ಬಲ್ಸ್ ಹಾಗೂ ಕಜಾರಿಯ ಕಂಪೆನಿ ವಿರುದ್ದ ದೋಷಪೂರಿತ ಟೈಲ್ಸ್ ಪೂರೈಕೆ, ನಷ್ಟ ಹಾಗೂ ಮಾನಸಿಕವಾಗಿ ವೇದನೆಯನ್ನು ಉಂಟುಮಾಡಿದ ಬಗ್ಗೆ ಪರಿಹಾರವಾಗಿ ಒಟ್ಟು ರೂ. 5,60,000/- ನೀಡಲು ಸೂಕ್ತ ನಿರ್ದೇಶನ ಕೋರಿ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದಾವೆಯನ್ನು ದಾಖಲಿಸಿದ್ದರು.

ವಾದ ವಿವಾದವನ್ನು ಆಲಿಸಿದ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಗಣೇಶ್ ಮಾರ್ಬಲ್ಸ್ ರವರು ಪೂರೈಕೆ ಮಾಡಿದ ಟೈಲ್ಸ್ ದೋಷಪೂರಿತ ಎ0ದು ಗ್ರಾಹಕನು ಸಾಬೀತುಪಡಿಸಿದ್ದು ಈ ಬಗ್ಗೆ ತಪ್ಪಿತಸ್ಥ ಗಣೇಶ್ ಮಾರ್ಬಲ್ಸ್ ಗೆ ಹಾಗೂ ಕಜಾರಿಯ ಕಂಪೆನಿಯವರಿಗೆ ಟೈಲ್ಸ್ ಖರೀದಿಯ ಬಾಬ್ತು ರೂಪಾಯಿ 50,592/- ಕೆಲಸದ ವೆಚ್ಚ ರೂಪಾಯಿ 15,000/- ಮಾನಸಿಕ ಹಿಂಸೆ, ತೊಂದರೆ, ದೈಹಿಕ ಶ್ರಮ ಇತ್ಯಾದಿಗಳಿಗೆ ಪರಿಹಾರವಾಗಿ ರೂಪಾಯಿ 25,000/-ಗಳು ಹಾಗೂ ವ್ಯಾಜ್ಯದ ಕರ್ಚು ರೂಪಾಯಿ 20,000/- ವನ್ನು ಗ್ರಾಹಕನಿಗೆ ಒಟ್ಟು 30 ದಿನಗಳ ಒಳಗಾಗಿ ಪಾವತಿಸುವಂತೆ ಆದೇಶಿಸಿರುತ್ತದೆ. ಗ್ರಾಹಕ ಪ್ರಕಾಶ್ ರವರ ಪರವಾಗಿ ಕುಂದಾಪುರದ ನ್ಯಾಯಾವಾದಿ ನೀಲ್ ಬ್ರಿಯಾನ್ ಪಿರೇರಾರವರು ವಾದಿಸಿದರು.


Spread the love