ಗಮನಸೆಳೆದ ಅಕ್ಷರ ದಾಸೋಹ ನಡಿಗೆ ಮಕ್ಕಳ ಮನೆಯ ಕಡೆಗೆ…

Spread the love

ಗಮನಸೆಳೆದ ಅಕ್ಷರ ದಾಸೋಹ ನಡಿಗೆ ಮಕ್ಕಳ ಮನೆಯ ಕಡೆಗೆ…

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಗ್ರಾಮವಾದ ಹೊಂಗಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಶಾಲೆಯ ವಿದ್ಯಾರ್ಥಿಗಳಿಗೆ 83 ದಿನಗಳ ಆಹಾರ ಧಾನ್ಯಗಳನ್ನು “ಅಕ್ಷರ ದಾಸೋಹ ನಡಿಗೆ – ಮಕ್ಕಳ ಮನೆಯ ಕಡೆಗೆ” ಎಂಬ ಘೋಷ ವಾಕ್ಯದೊಂದಿಗೆ ಎತ್ತಿನ ಗಾಡಿಗಳನ್ನು ಮತ್ತು ಎತ್ತುಗಳಿಗೆ ಶೃಂಗಾರ ಮಾಡಿ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಕೊಂಡೊಯ್ದು ನೀಡುವ ಮೂಲಕ ಗಮನಸೆಳೆಯಲಾಗಿದೆ.

ಒಂದರಿಂದ ಐದನೇ ತರಗತಿ ವಿದ್ಯಾರ್ಥಿಗಳಿಗೆ(ತಲಾ) 6900 ಗ್ರಾಂ ಅಕ್ಕಿ ಮತ್ತು 600 ಗ್ರಾಂ ಗೋಧಿ, 1 ಕೆಜಿ ಉಪ್ಪು ಮತ್ತು 3 ಲೀಟರ್ ಸೂರ್ಯಕಾಂತಿ ಎಣ್ಣೆಯನ್ನು ಪ್ಲಾಸ್ಟಿಕ್ ಕವರ್ ಗಳಲ್ಲಿ ಎರಡು ಪ್ಯಾಕೆಟ್ ಆಗಿ ಪ್ರತ್ಯೇಕವಾಗಿ ಪ್ಯಾಕ್ ಮಾಡಿ ಹಾಗೂ ಆರು ಮತ್ತು ಏಳನೇ ತರಗತಿ ವಿದ್ಯಾರ್ಥಿಗಳಿಗೆ 10350 ಗ್ರಾಂ ಅಕ್ಕಿ ಮತ್ತು 900 ಗ್ರಾಂ ಗೋಧಿ, 1 ಕೆಜಿ ಉಪ್ಪು ಮತ್ತು 3 ಲೀಟರ್ ಸೂರ್ಯಕಾಂತಿ ಎಣ್ಣೆಯನ್ನು ಎರಡು ಪ್ಯಾಕೆಟ್ ಗಳಾಗಿ ಪ್ರತ್ಯೇಕವಾಗಿ ಪ್ಯಾಕ್ ಮಾಡಿ ಗ್ರಾಮಸ್ಥರ ಸಹಕಾರದೊಂದಿಗೆ ಎತ್ತಿನ ಗಾಡಿಗಳಲ್ಲಿ ತುಂಬಿಕೊಂಡು ಶಾಲೆಯ ಪ್ರತಿಯೊಂದು ವಿದ್ಯಾರ್ಥಿಗಳ ಮನೆಯ ಬಾಗಿಲಿಗೆ ತೆರಳಿ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ.

ಈ ವಿನೂತನ ಕಾರ್ಯಕ್ರಮದ ರೂವಾರಿ ಶಾಲೆಯ ಮುಖ್ಯ ಶಿಕ್ಷಕ ಮಹದೇಶ್ವರ ಸ್ವಾಮಿ ಆ ಮೂಲಕ ಗ್ರಾಮಸ್ಥರು ಕಡ್ಡಾಯವಾಗಿ ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಆಗಾಗ್ಗೆ ಸಾಬೂನಿನಿಂದ ಕೈ ತೊಳೆದುಕೊಂಡು, ಪ್ರತಿಯೊಂದು ಹಂತದಲ್ಲೂ ಸ್ವಚ್ಛತೆ ಹಾಗೂ ಸುರಕ್ಷತೆ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದ್ದಾರೆ.

ನಾವು ಕೋವಿಡ್ – 19 ಹಿನ್ನಲೆಯಲ್ಲಿ ಮಕ್ಕಳು ಹಾಗೂ ಪೋಷಕರ ಆರೋಗ್ಯದ ಹಿತದೃಷ್ಟಿಯಿಂದ ಈ ಒಂದು ವಿನೂತನ ಕಾರ್ಯಕ್ರಮವನ್ನು ಆಯೋಜಿಸಿ ಗ್ರಾಮಸ್ಥರ ಸಹಕಾರದೊಂದಿಗೆ ಯಶಸ್ವಿಯಾಗಿರುವುದಾಗಿ ಅವರು ಹೇಳಿದ್ದಾರೆ. ಒಟ್ಟಾರೆಯಾಗಿ ಇತ್ತೀಚೆಗೆ ನಡೆದ ಈ ಕಾರ್ಯಕ್ರಮ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.


Spread the love