ಗಾಂಧಿ ಶಿಲ್ಪ ಬಜಾರ್‌ ನಲ್ಲಿ ಕಲೆಗಳ ಅನಾವರಣ

Spread the love

ಗಾಂಧಿ ಶಿಲ್ಪ ಬಜಾರ್‌ ನಲ್ಲಿ ಕಲೆಗಳ ಅನಾವರಣ

ಮೈಸೂರು: ಒಂದೆಡೆ ಹೊಸ್ತಿಲಿಗೆ ಬಂದು ನಿಂತಿರುವ ನಾಡ ಹಬ್ಬ ದಸರಾದ ಸಂಭ್ರಮ. ಮತ್ತೊಂದೆಡೆ ವಿಶ್ವಕ್ಕೆ ಶಾಂತಿಯ ಮಂತ್ರ ಬೋಧಿಸಿದ ಮಹಾತ್ಮ ಗಾಂಧಿ ಜಯಂತಿ. ಇವೆರಡರ ಸಮಾಗಮವಾಗಿ ಆಯೋಜನೆಗೊಂಡಿರುವ ಗಾಂಧಿ ಶಿಲ್ಪ ಬಜಾರ್‌… ಎರಡೂ ಹಬ್ಬಗಳ ಸಂಭ್ರಮಕ್ಕೆ ಮೆರುಗು ನೀಡುತ್ತಿದೆ.

ಕೇಂದ್ರ ಸರ್ಕಾರದ ಜವಳಿ ಸಚಿವಾಲಯ, ಜೆಎಸ್‌ಎಸ್‌ ಮಹಾವಿದ್ಯಾಪೀಠದ, ಹೆಬ್ಬಾಳ ರಿಂಗ್ ರಸ್ತೆಯಲ್ಲಿರುವ ಜೆಎಸ್‌ಎಸ್‌ ಅರ್ಬನ್‌ ಹಾತ್‌ನಲ್ಲಿ ಸೆ.25ರವರೆಗೆ ಹಮ್ಮಿಕೊಂಡಿರುವ ಗಾಂಧಿ ಶಿಲ್ಪ ಬಜಾರ್‌ ವಿವಿಧ ಕಲೆಗಳ ಅನಾವರಣಕ್ಕೆ ವೇದಿಕೆಯಾಗಿದೆ. ಹಬ್ಬದ ಸಂಭ್ರಮದ ಖರೀದಿಗೆ ಒಂದೇ ಸೂರಿನಲ್ಲಿ ಅಣಿಯಾಗಿರುವ ಈ ವೇಳದ ವೈಶಿಷ್ಟ್ಯತೆಯನ್ನು ಕಣ್ತುಂಬಿಸಿಕೊಳ್ಳುವುದೂ ಒಂದು ಹಬ್ಬವೇ ಆಗಿದೆ.

ಅರ್ಬನ್‌ ಹಾತ್‌ನ ವಿಶಾಲ, ಸುಂದರ ಅಂಗಣವನ್ನು ಪ್ರವೇಶಿಸುತ್ತಿದ್ದೆ ಎದುರಾಗುವ ಕಲಾಕೃತಿಗಳು ವಿಶಿಷ್ಟ ಕಲಾಲೋಕಕ್ಕೆ ನಮ್ಮನ್ನು ತೆರೆದುಕೊಳ್ಳುತ್ತಾ ಹೋಗುತ್ತವೆ. ಪ್ರವೇಶದ್ವಾರದ ಬಳಿಯಲ್ಲೇ ಇರುವ ಮಳಿಗೆಯಲ್ಲಿರುವ ಮಣ್ಣಿನ ವಿವಿಧ ಬಗೆಯ ಆಲಂಕಾರಿಕ ಹಾಗೂ ದಿನ ಬಳಕೆಯ ವಸ್ತುಗಳು ಮನ ಸೆಳೆಯುತ್ತವೆ. ವಿವಿಧ ಬಗೆಯ ಹೂಜಿಗಳು, ಹೂದಾನಿಗಳು, ಪಾತ್ರೆಗಳು, ಮನೆಗಳಲ್ಲಿ, ಕಚೇರಿಗಳಲ್ಲಿ ಇಡಲು ಅನುಕೂಲವಾಗುವಂಥ ಪರಿಕರಗಳು ಇವೆ. ಮತ್ತೊಂದು ಕಡೆ ಮಣ್ಣಿನಿಂದ ತಯಾರಿಸಿರುವ ಸಣ್ಣ ಸಣ್ಣ ಅಲಂಕಾರಿ ವಸ್ತುಗಳು ಆಕರ್ಷಿಸುತ್ತವೆ. ಹಾಗೆ ಮುಂದೆ ಸಾಗುತ್ತಿದ್ದರೆ ಈಶಾನ್ಯ ರಾಜ್ಯಗಳ ಕಲಾವಿದರ ಕೈಚಳಕದಿಂದ ಮೂಡಿಬಂದಿರುವ ಬಿದಿರು, ಬೆತ್ತದ ವಿವಿಧ ಪರಿಕರಗಳು, ಉತ್ಪನ್ನಗಳ ಕೌಶಲ ತಲೆದೂಗುವಂತೆ ಮಾಡುತ್ತವೆ.

ಹಕ್ಕಿಗಳ ಗರಿಗಳ ಮೇಲೆ ಕಲೆಯ ಸೆಳೆ: ರಾಜಸ್ಥಾನದ ಬುಡಕಟ್ಟು ಕಲಾವಿದರಿಗೆ ವಿವಿಧ ಹಕ್ಕಿಗಳ ಗರಿಗಳೇ ಕ್ಯಾನ್ವಾಸ್‌ ಆಗಿವೆ. ‘ಭಿಲ್‌’ ಹೆಸರಿನ ಈ ಕಲೆಯ ಪ್ರಕಾರ ಮೂಲಕ ಹಕ್ಕಿಗಳ ಗರಿಗಳ ಮೇಲೆ ವಿವಿಧ ಚಿತ್ತಾರಗಳನ್ನು ಮೂಡಿಸಲಾಗಿದೆ. ಅವುಗಳಿಗೆ ಫ್ರೇಂ ಹಾಕಿಸಿ ಉಡುಗೊರೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.

ವಿಶಿಷ್ಟ ಕಲೆ ಪೈರೋಗ್ರಫಿ: ಕೇರಳದ ಕೊಲ್ಲಂ ಜಿಲ್ಲಿಯ ಜಾಕೊಬ್ ಕುರಿಯನ್‌ ಅವರು ಈ ಬಾರಿಯ ಮೇಳದಲ್ಲಿ ವಿಶಿಷ್ಟ ಕಲೆಯ ಪ್ರಕಾರದ ಜತೆಗೆ ಬಂದಿದ್ದಾರೆ. ಪೈರೋಗ್ರಫಿ ಎನ್ನುವ ಈ ವಿಶಷ್ಟವಾದ ಕಲೆಯನ್ನು ಮರದ ಹಲಗೆಗಳ ಮೇಲೆ ಮೂಡಿಸಲಾಗುತ್ತದೆ. ಬಣ್ಣ ಬಳಸದೆ ಮರಗಳ ಮೇಲೆ ಬಿಸಿ ತಾಗಿಸಿ ಚಿತ್ತಾರ ಮೂಡಸಲಾಗುತ್ತಿದೆ. ವಿವಿಧ ಬಗೆಯ ಟೀಕ್‌ವುಡ್‌ ಅನ್ನು ಇದಕ್ಕಾಗಿ ಬಳಸುತ್ತಿದ್ದಾರೆ. ಕನಿಷ್ಠ 100 ರೂಪಾಯಿಯಿಂದ ಆರಂಭವಾಗುವ ಅವರ ಕಲಾಕೃತಿಗಗಳ ಬೆಲೆ ಗಾತ್ರಕ್ಕೆ ತಕ್ಕಂತೆ ವಿಭಿನ್ನವಾಗಿದೆ.

ಮಣ್ಣಿನಿಂದಲೂ ವಿವಿಧ ಆಭರಣಗಳನ್ನು ತಯಾರಿಸಬಹುದು ಎಂಬುದನ್ನು ಶಿಲ್ಪ ಬಜಾರ್‌ನ ಕುಶಲಕರ್ಮಿಗಳು ಅನಾವರಣಗೊಳಿಸಿದ್ದಾರೆ. ಸರಗಳು, ಕಿವಿಯ ಆಭರಣಗಳನ್ನು ಟೆರಕೋಟಾ ಜುವೆಲ್ಲರಿ ಹೆಸರಿನಲ್ಲಿ ಪರಿಚಯ ಮಾಡಿಕೊಡುತ್ತಿದ್ದಾರೆ. ಸಮುದ್ರದಲ್ಲಿ ಸಿಗುವ ಶಂಖಗಳ ಮೌಲ್ಯವರ್ಧನೆ ಮಾಡಿ ಅವುಗಳಿಗೆ ಆಕರ್ಷಕ ರೂಪ ನೀಡಿರುವ ಪಶ್ಚಿಮ ಬಂಗಾಳದ ಕಲಾವಿದರೂ ಇದ್ದಾರೆ. ಪೂಜೆಗಳಿಗೆ ಬಳಸುವಂಥ ಶಂಖಗಳು, ಊದಲು ಬಳಸುವಂತ ಶಂಖಗಳು, ಬಾಗಿಲಿಗೆ ನೇತು ಹಾಕುವಂತ ಆಲಂಕಾರಿಕ ವಸ್ತುಗಳೂ ಇಲ್ಲಿವೆ. ಕುಂಕುಮದ ಭರಣಿಗಳು, ಬಳೆಗಳೂ ಈ ಮಳಿಗೆಯಲ್ಲಿವೆ.

ದಸರೆಯ ಸಂಭ್ರಮಕ್ಕೆ ಮೆರುಗು ನೀಡುವ ಗೊಂಬೆಗಳ ಸಂಗ್ರಹವೂ ಇದೆ. ಸ್ಟೋನ್‌ ಡಸ್ಟ್‌ ಪೇಂಟಿಂಗ್‌ ಪರಿಚಯಿಸುತ್ತಿರುವ ಭೋಪಾಲ್‌ನ ಕಲಾವಿದರ ಮಳಿಗೆಯೂ ಮೇಳದಲ್ಲಿ ಅವಕಾಶ ಪಡೆದಿದೆ. ದೇವರ ಚಿತ್ರಗಳು, ಪ್ರಕೃತಿ, ಪಶು, ಪಕ್ಷಿಗಳ ಚಿತ್ತಾರಗಳನ್ನೂ ತ್ರಿಡಿ ಮಾದರಿಯಲ್ಲಿ ಮೂಡಿಸಿದ್ದಾರೆ.

ಕೊಲ್ಲಾಪುರದ ಪ್ರಸಿದ್ಧ ಚರ್ಮದ ಚಪ್ಪಲಿ, ಬ್ಯಾಗ್‌, ಪರ್ಸ್‌, ಬೆಲ್ಟ್‌ ಸೇರಿದಂತೆ ವಿವಿಧ ಉತ್ಪನ್ನಗಳೂ ಮೇಳದಲ್ಲಿವೆ. ಬಿದಿರು, ಬೆತ್ತದಿಂದ ತಯಾರಿಸಿರುವ ಆಲಂಕಾರಿಕ ವಸ್ತುಗಳ ಸಂಗ್ರಹವೂ ಹೆಚ್ಚಾಗಿದೆ. ಬಿದಿರಿನಿಂದಲೇ ತಯಾರಿಸಿ ಅದಕ್ಕೆ ಮೆರುಗು ನೀಡಿ ಪೆನ್‌ಸ್ಟ್ಯಾಂಡ್‌, ಹೂದಾನಿ, ಕೀ ಹ್ಯಾಂಗರ್‌, ಮೊಬೈಲ್ ಸ್ಟ್ಯಾಂಡ್‌ಗಳನ್ನೂ ಮಾಡಿರುವ ಕುಶಲಕರ್ಮಿಗಳ ಕೌಶಲ ಇಲ್ಲಿ ಅನಾವರಣವಾಗಿದೆ.

ಈ ಬಾರಿಯ ಶಿಲ್ಪ ಕಲಾ ಮೇಳದಲ್ಲಿ ವಿವಿಧೆಡೆಯ ಕಲಾವಿದ ಸಮಾಗಮವಾಗಿದೆ. ಒಡಿಶಾದ ಪಟ್ಟಾ ಚಿತ್ರ ಕಲಾವಿದರು, ಕೇರಳದ ಕಲಾವಿದರು ತಮ್ಮ ಕೌಶಲವನ್ನು ಕ್ಯಾನ್ವಾಸ್‌ಗಳಲ್ಲಿ ಮೂಡಿಸಿದ್ದಾರೆ. ತೆಂಗಿನ ಕಾಯಿ ಚಿಪ್ಪುಗಳನ್ನು ಮೌಲ್ಯವರ್ಧನೆಗೊಳಿಸಿರುವ ಕುಶಲಕರ್ಮಿಗಳು ಅವುಗಳಿಗೆ ವಿವಿಧ ರೂಪ ನೀಡಿದ್ದಾರೆ. ಗಣಪತಿಯ ವಿಗ್ರಹವನ್ನು ಇರಿಸುವ ಸಾಧನ, ಸೌಟುಗಳನ್ನೂ ಮಾಡಿದ್ದಾರೆ. ಅಲ್ಲದೆ, ಬಿದಿರಿನಿಂದ ಸಟ್ಟುಗಗಳನ್ನೂ ಮಾಡಿದ್ದಾರೆ. ವಿಶಿಷ್ಟ ಹುಲ್ಲಿನಿಂದ ತಯಾರಿಸಿರುವ ಚಾಪೆಗಳ ಸಂಗ್ರವೂ ಮನ ಸೆಳೆಯುತ್ತದೆ. ಈ ಪ್ರದರ್ಶನವು ಸೆ.25ರವರೆಗೆ ಬೆಳಿಗ್ಗೆ 10.30ರಿಂದ ರಾತ್ರಿ 9.30ರವರೆಗೆ ನಡೆಯಲಿದೆ.


Spread the love

Leave a Reply

Please enter your comment!
Please enter your name here