ಗಾಣಿಗ ಕೊಲೆ ಪ್ರಕರಣದಲ್ಲಿ ಬಿಜೆಪಿ ಮೌನದ ಬಗ್ಗೆ ಅನುಮಾನ ಹುಟ್ಟುತ್ತಿದೆ: ಡಿಕೆ ಶಿವಕುಮಾರ್

Spread the love

ಉದಯ್ ಗಾಣಿಗ ಕೊಲೆ ಪ್ರಕರಣದಲ್ಲಿ ಬಿಜೆಪಿ ಮೌನದ ಬಗ್ಗೆ ಅನುಮಾನ ಹುಟ್ಟುತ್ತಿದೆ: ಡಿಕೆ ಶಿವಕುಮಾರ್

ಕುಂದಾಪುರ: ರಾಜಕೀಯ ದ್ವೇಷ ಸಾಧನೆಗಾಗಿ ಯಡಮೊಗೆಯಲ್ಲಿ ಬಿಜೆಪಿ ಪಕ್ಷದ ಮುಖಂಡರು ತಮ್ಮ ಪಕ್ಷದವರೇ ಆದ ಉದಯ್ ಗಾಣಿಗ‌ ಅವರನ್ನು ಅಮಾನುಷವಾಗಿ ಹತ್ಯೆ ನಡೆಸಿರುವುದು ಖಂಡನೀಯ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

ತಾಲೂಕಿನ ಯಡಮೊಗೆಯ ಹೊಸಬಾಳು ಉದಯ್ ಗಾಣಿಗ ಅವರ ಮನೆಗೆ ಮಂಗಳವಾರ ಸಂಜೆ ಭೇಟಿ ನೀಡಿ ಅವರ ಪತ್ನಿ ಹಾಗೂ ಕುಟುಂಬಿಕರಿಗೆ ಸಾಂತ್ವನ‌ ಹೇಳಿದ ಅವರು ಮಾಧ್ಯಮ‌ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಪಕ್ಷ,‌ ಜಾತಿ, ಧರ್ಮದ ನೆಲೆಯಲ್ಲಿ ಹತ್ಯೆಗಳಾಗುವುದು‌ ಖಂಡನೀಯ. ಅವಿಭಜಿತ‌ ದ.ಕ‌ ಜಿಲ್ಲೆಯಲ್ಲಿ ಹತ್ಯೆಗಳು ನಡೆದಾಗ ಓಡೋಡಿ ಬರುತ್ತಿದ್ದ ಬಿಜೆಪಿಗರು ಇಂದು‌ ತಮ್ಮ ಪಕ್ಷದ ಕಾರ್ಯಕರ್ತನ‌ ಹತ್ಯೆ ನಡೆದಿದ್ದರೂ ಮೌನವಾಗಿರುವ ಬಗ್ಗೆ ಅನುಮಾನ ಹುಟ್ಟುತ್ತಿದೆ.‌ ಮೃತ ಗಾಣಿಗರ ಪತ್ನಿ,‌ ತಾಯಿ‌ ಹಾಗೂ ಕುಟುಂಬಿಕರು ನಮಗೆ ನ್ಯಾನ ನೀಡಿ ಎಂದು ಕಣ್ಣೀರಿಡುತ್ತಿದ್ದಾರೆ. ಈ‌ ಪ್ರಕರಣದಲ್ಲಿ‌ ಪ್ರಭಾವಿ ಮುಖಂಡರ ಕೈವಾಡ ಇರುವ ಬಗ್ಗೆಯೂ ಅನುಮಾನ‌ ವ್ಯಕ್ತಪಡಿಸುತ್ತಿದ್ದಾರೆ. ಹಿಂದೆಲ್ಲಾ ಹತ್ಯೆ ಪ್ರಕರಣಗಳು ನಡೆದಾಗ ಸಿಬಿಐ ತನಿಖೆಗೆ ನೀಡಿರುವ ದೃಷ್ಟಾಂತಗಳು ಇರುವುದರಿಂದ‌ ಸರ್ಕಾರ ಕೂಡಲೇ ಈ ಪ್ರಕರಣದ ತನಿಖೆಯನ್ನು ಸಿಬಿಐ ಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ‌ ಸಚಿವ‌ ವಿನಯ್ ಕುಮಾರ್ ಸೊರಕೆ, ಬಿಜೆಪಿ‌ ಪಕ್ಷದ ಜಿಲ್ಲಾ ಪ್ರಧಾನ‌ ಕಾರ್ಯದರ್ಶಿ ಈ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಗೃಹ ಸಚಿವರೇ ಆಗಿರುವುದರಿಂದ ತನಿಖೆಯ ಮೇಲೆ ಪರಿಣಾಮ‌ ಬೀರುವ ಸಾಧ್ಯತೆಗಳಿರುವುದರಿಂದ‌ ಸರ್ಕಾರ ಕೂಡಲೇ‌ ಸಿಬಿಐ ತನಿಖೆಗೆ ನೀಡಬೇಕು ಹಾಗೂ ಉದಯ್ ಗಾಣಿಗ ಅವರ ಕುಟುಂಬಕ್ಕೆ ಇಪ್ಪತ್ತೈದು ಲಕ್ಷ ರೂಪಾಯಿಯ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕಣ್ಣೀರಿಟ್ಟ ಕುಟುಂಬ
ಮನೆಗೆ ಭೇಟಿ ನೀಡಿದ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರ ಎದುರು ಕಣ್ಣೀರ ಕೋಡಿ ಹರಿಸಿದ ಮೃತ ಉದಯ್ ಗಾಣಿಗರ ಪತ್ನಿ‌‌ ಹಾಗೂ ತಾಯಿ‌ ನಮಗೆ ನ್ಯಾಯ ಕೊಡಿಸುವಂತೆ ಪರಿಪರಿಯಾಗಿ ಕೇಳಿಕೊಂಡರಲ್ಲದೇ ಪ್ರಕರಣದಿಂದ‌ ಹಿಂದೆ ಸರಿಯುವಂತೆ ನಮಗೆ ಆಮೀಶ ಹಾಗೂ ಒತ್ತಡಗಳನ್ನು ಹೇರಲಾಗುತ್ತಿದೆ ಎಂದರು.

ಘಟನೆಯಾದ ಇಂದಿನವರೆಗೂ ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ಬಿವೈ ರಾಘವೇಂದ್ರ ಅವರು‌ ಮೃತರ ಮನೆಗೆ ಭೇಟಿ ನೀಡದೆ ಇರುವುದನ್ನು ಬೊಟ್ಟು ಮಾಡಿದ ಸ್ಥಳೀಯರು ಹಾಗೂ ಗಾಣಿಗ ಸಮಾಜದ ಪ್ರಮುಖರು ಅಮಾನುಷವಾಗಿ ಹತ್ಯೆಯಾದ ಉದಯ ಗಾಣಿಗ ಅವರ ಕುಟುಂಬದ ಬಗ್ಗೆ ಇವರಿಗೆ ಅನುಕಂಪವಿಲ್ಲವೇ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ವತಿಯಿಂದ 1.25 ಲಕ್ಷ ರೂ.‌ಚೆಕ್ ಅನ್ನು ಮೃತ ಉದಯ್ ಗಾಣಿಗ ಪತ್ನಿಯವರಿಗೆ ಹಸ್ತಾಂತರಿಸಿದರು.

ಮಾಜಿ ‌ಶಾಸಕ‌ ಕೆ.‌ಗೋಪಾಲ ಪೂಜಾರಿ, ಜಿಲ್ಲಾ‌ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಪ್ರಮುಖರಾದ ಮಿಥುನ್‌ ಕುಮಾರ್ ರೈ, ಕಿಶನ್ ಹಗ್ಡೆ ಕೊಳ್ಕೆಬೈಲ್, ಎಸ್ ರಾಜು ಪೂಜಾರಿ, ಗೌರಿ‌ ದೇವಾಡಿಗ, ಹರಿಪ್ರಸಾದ್ ಶೆಟ್ಟಿ ಬಿದ್ಕಲ್‌ಕಟ್ಟೆ, ಟಿಎಂ ಶಹೀದ್ ಸುಳ್ಯ, ಪಿವಿ ಮೋಹನ್, ಪ್ರದೀಪ್‌ ಕುಮಾರ್ ಶೆಟ್ಟಿ ಗುಡಿಬೆಟ್ಟು ಇದ್ದರು.

https://www.facebook.com/MangaloreanNews/videos/781620449057014


Spread the love