ಗಾಯಕಿ ಅನಿತಾ ಡಿಸೋಜ ರಿಗೆ 16 ನೇ ಕಲಾಕಾರ್ ಪುರಸ್ಕಾರ

Spread the love

ಗಾಯಕಿ ಅನಿತಾ ಡಿಸೋಜ ರಿಗೆ 16 ನೇ ಕಲಾಕಾರ್ ಪುರಸ್ಕಾರ

ಮಂಗಳೂರು: ಗಾಯನ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಕಾರ್ವಾಲ್ ಕುಟುಂಬ ಮತ್ತು ಮಾಂಡ್ ಸೊಭಾಣ್ ನೀಡುವ 16 ನೇ ಕಲಾಕಾರ್ ಪುರಸ್ಕಾರವು ಕೊಂಕಣಿ ಗಾಯಕಿ ಅನಿತಾ ಡಿಸೋಜ ಇವರಿಗೆ ಲಭಿಸಿದೆ.

 

ಅನಿತಾ ಡಿಸೋಜ ರವರು ಕೊಂಕಣಿ, ಕನ್ನಡ, ತುಳು, ಮಲಯಾಳಂ, ಇಂಗ್ಲೀಶ್, ಹಿಂದಿ, ಗುಜರಾತಿ, ತೆಲುಗು, ತಮಿಳು, ಮರಾಠಿ, ಅರಾಬಿಕ್ ಮತ್ತು ಬ್ಯಾರಿ ಹೀಗೆ ಹನ್ನೆರಡು ಭಾಷೆಗಳಲ್ಲಿ ಹಾಗೂ ನವಾಯತಿ ಭಾಷಾ ಪ್ರಬೇಧದಲ್ಲಿ ಹಾಡಿದ್ದಾರೆ. ವಿವಿಧ ಧ್ವನಿಸುರುಳಿಗಳಲ್ಲಿ 500ಕ್ಕೂ ಮಿಕ್ಕಿ ಹಾಡುಗಳನ್ನು, ಭಾರತ ಮತ್ತು ಗಲ್ಫ್ ದೇಶಗಳ 3000 ಕ್ಕೂ ಮಿಕ್ಕಿ ಕಾರ್ಯಕ್ರಮಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಕಂಠಸಿರಿಯನ್ನು ನೀಡಿದ್ದಾರೆ. ಯಾದ್ ಮತ್ತು ಕಲರ್ಸ್ ಧ್ವನಿಸುರುಳಿಗಳನ್ನು ಹೊರ ತಂದಿದ್ದಾರೆ.

ಅವರ ಪ್ರತಿಭೆಗೆ ಕೇರಳ ಸರಕಾರದಿಂದ ಕಲಾತಿಲಕ, ಕರ್ನಾಟಕ ಬ್ಯಾರಿ ಅಕಾಡೆಮಿಯಿಂದ ತುಳುನಾಡ ಗಾನ ಕೋಗಿಲೆ (2006), ಕನ್ನಡ ಸಾಹಿತ್ಯ ಅಕಾಡೆಮಿಯಿಂದ ವಿಶ್ವ ಗಡಿನಾಡ ರಾಣಿ ಕೋಗಿಲೆ (2011), ಮಾಂಡ್ ಸೊಭಾಣ್ ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರ – ಶ್ರೇಷ್ಟ ಗಾಯಕಿ (2014) ಇತ್ಯಾದಿ ಗೌರವಗಳು ಲಭಿಸಿವೆ.
ಮಂಗಳೂರಿನ ಕುಳೂರು ಮೂಲದ ಅನಿತಾ ಡಿಸೊಜಾ, ಬೇಳ ಪ್ರಸ್ತುತ ಅಬುಧಾಬಿಯಲ್ಲಿ ವಾಸವಿದ್ದು ಕೊಂಕಣಿ ಗಾಯನ ಕ್ಷೇತ್ರವನ್ನು ಶ್ರೀಮಂತಗೊಳಿಸಲು ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಕೋವಿಡ್ ನಿಯಂತ್ರಣ ಕಾರಣಗಳಿಂದಾಗಿ ಈ ಕಾರ್ಯವು ಅಬುಧಾಬಿಯಲ್ಲಿ ನಡೆಯಲಿದ್ದು, ಅನಿವಾಸಿ ಉದ್ಯಮಿ ಲಿಯೊ ರಾಡ್ರಿಗಸ್ ಪುರಸ್ಕಾರ ಹಸ್ತಾಂತರ ಮಾಡಲಿದ್ದಾರೆ.

ಈ ಕಾರ್ಯಕ್ರಮವು ನವೆಂಬರ್ 01 ವೆರ್ ಸಂಜೆ 07 ಗಂಟೆಗೆ ಖಾಸಗಿ ವಾಹಿನಿ ದಾಯ್ಜಿವಲ್ರ್ಡ್ ಟಿವಿಯಲ್ಲಿ ಮಾಂಡ್ ಸೊಭಾಣ್ ತಿಂಗಳ ವೇದಿಕೆ ಸರಣಿಯ 226 ನೇ ಕಾರ್ಯಕ್ರಮ `ಪುರ್ಣಾ ಪಾತೊಳಿ – 3’ ರಲ್ಲಿ ಪ್ರಸಾರವಾಗಲಿದೆ.

ಕೊಂಕಣಿಯ ನೃತ್ಯ, ನಾಟಕ, ಸಂಗೀತ-ಗಾಯನ, ಜನಪದ ಈ ಪ್ರಕಾರಗಳಲ್ಲಿ ಮಹತ್ವದ ಸಾಧನೆ ಮಾಡಿದ ಕರ್ನಾಟಕ ಮೂಲದ ಕಲಾವಿದರನ್ನು ಗೌರವಿಸಲು ಕೊಂಕಣಿ ವಿದ್ವಾಂಸ ವಂ. ಡಾ. ಪ್ರತಾಪ್ ನಾಯ್ಕ್ ಇವರು ತನ್ನ ಕಾರ್ವಾಲ್ ಕುಟುಂಬಸ್ಥರ ಪರವಾಗಿ 2005 ರಲ್ಲಿ ಕಲಾಕಾರ್ ಪುರಸ್ಕಾರ ಸ್ಥಾಪಿಸಿದ್ದರು.


Spread the love