ಗುಂಡಿಬಿದ್ದ ಬಿಆರ್ ಹಿಲ್ಸ್ ರಸ್ತೆಯಲ್ಲಿ ಪರದಾಟ

Spread the love

ಗುಂಡಿಬಿದ್ದ ಬಿಆರ್ ಹಿಲ್ಸ್ ರಸ್ತೆಯಲ್ಲಿ ಪರದಾಟ

ಯಳಂದೂರು: ಬಿಳಿಗಿರಿರಂಗನಬೆಟ್ಟದ ಕಾಡಿನೊಳಗೆ ಹಾದು ಹೋಗಿರುವ ಗವಿಬೋರೆ ಸಮೀಪ ರಸ್ತೆ ಗುಂಡಿಬಿದ್ದಿರುವ ಕಾರಣ ವಾಹನ ಸವಾರರು ಪರದಾಡುವಂತಾಗಿದೆ.

ಈ ನಡುವೆ ಕಾರೊಂದು ಗುಂಡಿಯಲ್ಲಿ ಸಿಲುಕಿ ಪ್ರಯಾಣಿಕರು ಮತ್ತು ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ. ಬಿಳಿಗಿರಿರಂಗನ ಬೆಟ್ಟಕ್ಕೆ ಪ್ರತಿದಿನ ಭಕ್ತರು ಮತ್ತು ಬೆಟ್ಟದಲ್ಲಿ ವಾಸವಿರುವ ಜನರು ತಮ್ಮ ವಾಹನ ಹಾಗೂ ಬಸ್ಸಿನಲ್ಲಿ ಯಳಂದೂರಿಗೆ ಬಂದು ಹೋಗುತ್ತಾರೆ ಬೆಟ್ಟಕ್ಕೆ ತೆರಳುವಾಗ ಕಾಡಿನೊಳಗಿನ ರಸ್ತೆಯಲ್ಲೆ ಹೋಗಬೇಕಾಗಿರುವುದರಿಂದ ರಸ್ತೆಯು ಗುಂಡಿ ಬಿದ್ದಿದ್ದು ನಿರಂತರವಾಗಿ ಸುರಿದ ಮಳೆಗೆ ಕೆಸರುಮಯವಾಗಿದೆ. ಹೀಗಾಗಿ ವಾಹನವೊಂದು ಗುಂಡಿಬಿದ್ದ ರಸ್ತೆಯಲ್ಲಿಸಿಲುಕಿ ವಾಹನ ಸವಾರರು ಪರದಾಡಿದ್ದಾರೆ ಇದರಿಂದ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಕಾಡೊಳಗೆ ರಸ್ತೆ ಜಾಮ್ ಆಗಿದ್ದು ಭಕ್ತರು ಮತ್ತು ಪ್ರಯಾಣಿಕರು ಪ್ರಯಾಸ ಪಡುವಂತಾಯಿತು. ಬಳಿಕ ಬೇರೆ ವಾಹನಕ್ಕೆ ಹಗ್ಗ ಕಟ್ಟಿ ಕಾರನ್ನು ಎಳೆಸುವ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.

ಐದು ತಿಂಗಳ ಹಿಂದೆ ಬಿಳಿಗಿರಿರಂಗನನಾಥ ಸ್ವಾಮಿಯ ದೊಡ್ಡ ಜಾತ್ರೆಯ ಸಂದರ್ಭದಲ್ಲಿ ಬೆಟ್ಟಕ್ಕೆ ಹೊಸ ಡಾಂಬರು ರಸ್ತೆ ಮಾಡಲಾಗಿತ್ತು. ಈ ರಸ್ತೆಯು ನಿರ್ಮಾಣವಾಗಿ ಐದಾರು ತಿಂಗಳು ಕಳೆದಿದೆ. ಆದರೆ ಕೇವಲ ಐದಾರು ತಿಂಗಳು ಕಳೆಯುವ ವೇಳೆಗೆ ರಸ್ತೆಯು ಗುಂಡಿಬಿದ್ದು ಭಕ್ತರಿಗೆ ಮತ್ತು ವಾಹನ ಸವಾರರಿಗೆ ತೊಂದರೆಯಾಗುತ್ತದೆ ಎಂದರೆ ರಸ್ತೆಯ ಗುಣಮಟ್ಟದ ಹೇಗಿರಬೇಕು ಎಂದು ಜನರು ಪ್ರಶ್ನೆ ಮಾಡಿದ್ದಾರೆ. ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣದಿಂದಾಗಿ ಈ ರಸ್ತೆಯು ಐದಾರು ತಿಂಗಳಿಗೆ ಗುಂಡಿಬಿದ್ದು ಹಾಳಾಗಿರುವುದು ವಾಹನ ಸವಾರ ಆಕ್ರೋಶಕ್ಕೆ ಕಾರಣವಾಗಿದೆ.


Spread the love