ಗುಂಪು ಗಲಾಟೆಗೆ ಯುವ ಬ್ರಿಗೇಡ್‌ ಕಾರ್ಯಕರ್ತ ಬಲಿ

Spread the love

ಗುಂಪು ಗಲಾಟೆಗೆ ಯುವ ಬ್ರಿಗೇಡ್‌ ಕಾರ್ಯಕರ್ತ ಬಲಿ

ಮೈಸೂರು: ಪಟ್ಟಣದಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ದ್ವೇಷಕ್ಕೆ ತಿರುಗಿದ ಪರಿಣಾಮ ಬ್ರಿಗೇಡ್‌ ಕಾರ್ಯಕರ್ತ ಬಲಿಯಾಗಿರುವ ಘಟನೆ ಜಿಲ್ಲೆಯ ತಿ.ನರಸೀಪುರ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ. ಪಟ್ಟಣದ ಶ್ರೀರಾಂಪುರ ಕಾಲನಿ ನಿವಾಸಿ ಯುವ ಬ್ರಿಗೇಡ್‌ನ ತಿ.ನರಸೀಪುರ ತಾಲೂಕು ಸಂಚಾಲಕರಾಗಿದ್ದ ವೇಣುಗೋಪಾಲ್ ನಾಯಕ್ (32)ಮೃತಪಟ್ಟ ದುರ್ದೈವಿ. ಘಟನೆಯಿಂದಾಗಿ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ.

ಪ್ರಕರಣ ಸಂಬಂಧ ಆರೋಪಿಗಳಾದ ಮಣಿಕಂಠ(33), ಸಂದೇಶ್(36) ಎಂಬುವರನ್ನು ಪೊಲೀಸರು ಬಂಧಿಸಿದ್ದು, ಉಳಿದ ಮೂವರ ಪತ್ತೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಶನಿವಾರ ಹನುಮ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಮೆರವಣಿಗೆ ನಡೆದಿದ್ದು, ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸ್ಥಳದಲ್ಲಿದ್ದ ಕೆಲವರು ಸಮಾಧಾನ ಮಾಡಿ ಕಳುಹಿಸಿದ್ದರು. ಆದರೆ ಭಾನುವಾರ ರಾತ್ರಿ ಗಲಾಟೆ ಮುಂದುವರೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.

ಹನುಮ ಜಯಂತಿ ಮೆರವಣಿಗೆಯಲ್ಲಿ ನಟ ಪುನೀತ್ ರಾಜ್‌ಕುಮಾರ್ ಫೋಟೊ ತೆಗೆಸಿದ್ದು ಕೊಲೆಗೆ ಕಾರಣವಾಗಿದೆ. ಅಲಂಕೃತವಾಗುತ್ತಿದ್ದ ವ್ಯಾನ್‌ನಲ್ಲಿ ಭಾರತಮಾತೆ ಫೋಟೋ ಜತೆಗೆ ನಟ ಪುನೀತ್ ರಾಜ್‌ಕುಮಾರ್ ಫೋಟೋ ಸಹ ಹಾಕಲಾಗಿತ್ತು. ಇದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದ್ದರಿಂದ ಯಾವ ವ್ಯಕ್ತಿಯ ಫೋಟೋ ಹಾಕುವುದು ಬೇಡ ಎಂದು ವೇಣುಗೋಪಾಲ್ ನಾಯಕ್ ತೆಗೆಸಿದ್ದರು.

ಅಲ್ಲದೇ, ಶನಿವಾರ ಹನುಮ ಜಯಂತಿಗೆ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ವೇಳೆ ಯಾವುದೇ ವಾಹನವನ್ನು ದೇವಸ್ಥಾನದ ಆವರಣಕ್ಕೆ ಬಿಡಬಾರದು ಎಂದು ವೇಣುಗೋಪಾಲ್ ನಾಯಕ್ ಪೊಲೀಸರಿಗೆ ಕೋರಿದ್ದರು. ಆ ವೇಳೆ ಮಣಿಕಂಠ ಮತ್ತು ಸಂದೇಶ್ ಗುಂಪು ತಮ್ಮ ಬೈಕ್ ಬಿಡುವಂತೆ ಪೊಲೀಸರನ್ನು ಒತ್ತಾಯಿಸಿದರು. ಆದರೆ ಪೊಲೀಸರು ಬೈಕ್ ಬಿಟ್ಟಿರಲಿಲ್ಲ. ಇದರಿಂದ ಮಣಿ ಕಂಠ ಮತ್ತು ಸಂದೇಶ್ ಅವರು ವೇಣುಗೋಪಾಲ್ ವಿರುದ್ಧ ಕೋಪಗೊಂಡಿದ್ದರು.

ಭಾನುವಾರ ಮಧ್ಯಾಹ್ನ ಈ ಎಲ್ಲ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಸ್ಥಳದಲ್ಲಿದ್ದವರು ಎರಡೂ ಕಡೆಯವರನ್ನು ಸಮಾಧಾನ ಮಾಡಿ ಕಳುಹಿಸಿದ್ದರು. ಬಳಿಕ ರಾತ್ರಿ ರಾಜಿ ಪಂಚಾಯಿತಿ ನೆಪದಲ್ಲಿ ಸರ್ವೀಸ್ ಸೆಂಟರ್ ಬಳಿಗೆ ವೇಣುಗೋಪಾಲ್‌ನನ್ನು ಕರೆಸಿಕೊಂಡ ಆರೋಪಿಗಳು ಚಾಕು ಹಾಗೂ ಮಾರಕಾಸ್ತ್ರ ಗಳಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವೇಣುಗೋಪಾಲ್ ನಾಯಕ್ ಮತ್ತು ಆರೋಪಿಗಳಾದ ಮಣಿಕಂಠ, ಸಂದೇಶ್ ಗುಂಪಿನ ನಡುವೆ 2012ರಲ್ಲಿಯೂ ಒಮ್ಮೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಇನ್ನು ಈ ಕುರಿತಂತೆ ಮಾಹಿತಿ ನೀಡಿರುವ ಎಸ್ಪಿ ಸೀಮಾ ಲಾಟ್ಕರ್ ತಿ.ನರಸೀಪುರದಲ್ಲಿ ಬೈಕ್ ನಿಲ್ಲಿಸುವ ವಿಚಾರಕ್ಕೆ ಹಾಗೂ ಪುನೀತ್ ರಾಜಕುಮಾರ್ ಫೋಟೊ ಅಳವಡಿಕೆ ವಿಚಾರದಲ್ಲಿ ಜಗಳ ನಡೆದಿದೆ. ಮತ್ತೇ ಇದೇ ವಿಚಾರವಾಗಿ ಭಾನುವಾರ ರಾತ್ರಿ ಗಲಾಟೆಯಾಗಿದ್ದು, ಬಾಟಲಿನಿಂದ ಹೊಡೆದು ಕೊಲೆ ಮಾಡಲಾಗಿದೆ. ಈ ಸಂಬಂಧ ಆರು ಮಂದಿಯ ವಿರುದ್ದ ದೂರು ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಉಳಿದ ನಾಲ್ವರು ಆರೋಪಿಗಳ ಸೆರೆಗೆ ತಂಡ ರಚಿಸಲಾಗಿದೆ. ಘಟನೆಗೆ ಯಾವುದೇ ಕೋಮು ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


Spread the love