ಗುಜರಾತ್‌ನಲ್ಲಿ ಕ್ರಿಮಿನಲ್ ಸ್ಯಾಂಟ್ರೋ ರವಿ ಬಂಧನ

Spread the love

ಗುಜರಾತ್‌ನಲ್ಲಿ ಕ್ರಿಮಿನಲ್ ಸ್ಯಾಂಟ್ರೋ ರವಿ ಬಂಧನ

ಮೈಸೂರು: ರಾಜ್ಯದಲ್ಲಿ ಸಂಚಲನವನ್ನುಂಟು ಮಾಡಿ ಸುಮಾರು 28 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕ್ರಿಮಿನಲ್ ಮಂಜುನಾಥ್.ಕೆ.ಎಸ್ ಅಲಿಯಾಸ್ ಸ್ಯಾಂಟ್ರೋ ರವಿಯನ್ನು ಗುಜರಾತ್‌ನ ಅಹಮದಾಬಾದ್‌ನಲ್ಲಿ ಬಂಧಿಸುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ಹನ್ನೊಂದು ದಿನಗಳಿಂದ ವೇಶ ಮತ್ತು ಸಿಮ್ ಬದಲಿಸಿ ಬೇರೆ ಬೇರೆ ಕಾರುಗಳಲ್ಲಿ ಐದಾರು ರಾಜ್ಯ ಸುತ್ತಾಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಸ್ಯಾಂಟ್ರೋ ರವಿ ರಾಜ್ಯದ ವಿವಿಧ ಭಾಗ ಹಾಗೂ ಹೊರರಾಜ್ಯಗಳಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ. ಶುಕ್ರವಾರ ಮಧ್ಯಾಹ್ನ ಅಹಮದಾಬಾದ್‌ಗೆ ಬರುವುದನ್ನು ಖಚಿತಪಡಿಸಿಕೊಂಡು ಸ್ಥಳೀಯ ಪೊಲೀಸರ ನೆರವಿನಿಂದ ರಾಜ್ಯದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾನೂನಿನಂತೆ ಅಹಮದಾಬಾದ್‌ನ ನ್ಯಾಯಾಲಯಕ್ಕೆ ಶುಕ್ರವಾರ ಹಾಜರುಪಡಿಸಿದ್ದು, ನಿಯಮಾನುಸಾರ ಶನಿವಾರ ರಾಜ್ಯಕ್ಕೆ ಕರೆತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದದ್ದಾರೆ

ಸ್ಯಾಂಟ್ರೋ ರವಿ ಬಂಧನಕ್ಕಾಗಿ ರಾಜ್ಯದ ಜಿಲ್ಲಾ ಎಸ್‌ಪಿಗಳನ್ನು ಬಳಸಿಕೊಂಡಿದ್ದು, ಇದರಲ್ಲಿ ರಾಮನಗರ, ಮಂಡ್ಯ ಮತ್ತು ರಾಯಚೂರು ಎಸ್‌ಪಿಗಳ ತಂಡ ಕೇರಳ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಆದರೆ ಗುಜರಾತ್‌ನಲ್ಲಿ ಮೈಸೂರು ಪೊಲೀಸರ ತಂಡ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ. ಮೈಸೂರಿನ ಎಸಿಪಿ ಶಿವಶಂಕರ್ ನೇತೃತ್ವದಲ್ಲಿ ಎನ್.ಆರ್.ಠಾಣೆಯ ಇನ್ಸ್‌ಪೆಕ್ಟರ್ ಅಝರುದ್ದೀನ್, ಮೇಟಗಳ್ಳಿ ಇನ್ಸ್‌ಪೆಕ್ಟರ್ ದಿವಾಕರ್ ಗುಜರಾತ್ ಪೊಲೀಸರ ಸಹಕಾರ ಪಡೆದು ಆರೋಪಿಯನ್ನು ಚೇಸ್ ಮಾಡಿ ಬಂಧಿಸಿದ್ದಾರೆ. ಆರೋಪಿಯನ್ನು ಸರಿ ಸುಮಾರು ೧೫೦೦ ಕಿ.ಮೀ ಬೆನ್ನತ್ತಿ ಪತ್ತೆ ಹಚ್ಚಿzರೆ. ಈ ಕಾರ್ಯಾಚರಣೆಯಲ್ಲಿ ಸ್ಯಾಂಟ್ರೋ ರವಿ ಜತೆಗೆ ಇಬ್ಬರನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಳ್ಳಲು ಸಹಕಾರ ನೀಡಿದ ರಾಜ್ಯದ ಸುಥೇಶ್ ಕುಮಾರ್ (35) ಹಾಗೂ ಗುಜರಾತ್‌ನ ರಾಮ್‌ಜೀ (45) ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಕೆಲ ದಿನಗಳ ಹಿಂದೆ ರವಿಯ ಸಹಚರ ಮಧು ಅಲಿಯಾಸ್ ಮಧುಸೂದನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿತ್ತು. ಪ್ರಕರಣ ಸಂಬಂಧ ಪ್ರಮುಖ ಆರೋಪಿಯಾದ ಸ್ಯಾಂಟ್ರೋ ರವಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಬಂಧಿತ ಸ್ಯಾಂಟ್ರೋ ರವಿ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 28 ಪ್ರಕರಣಗಳು ದಾಖಲಾಗಿವೆ. ಯುವತಿಯೊಬ್ಬರಿಗೆ ಕೆಲಸ ನೀಡುವ ಭರವಸೆ ನೀಡಿ ಅವರನ್ನು ಬಲವಂತವಾಗಿ ವಿವಾಹವಾಗಿ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ವರದಕ್ಷಿಣೆ ನಿಷೇಧ ಕಾಯ್ದೆ, ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಐಪಿಸಿ 506 (ಉದ್ದೇಶಪೂರ್ವಕ ಅವಹೇಳನ, ಮನಶಾಂತಿ ಕೆಡಿಸುವ ಪ್ರಯತ್ನ), 504(ಕ್ರಿಮಿನಲ್ ಪಿತೂರಿ), 376 (ಅತ್ಯಾಚಾರ), 270 (ಪ್ರಾಣಹಾನಿಕರವಾದ ಸೋಂಕು ಹರಡುವ ಯತ್ನ), ಬಲವಂತದ ಗರ್ಭಪಾತ (313) ಹಾಗೂ 323 (ಹ), 498ಎ (ಕೌಟುಂಬಿಕ ದೌರ್ಜನ್ಯ) ಪ್ರಕರಣ ದಾಖಲಿಸಲಾಗಿತ್ತು. ಆರೋಪಿ ಸ್ಯಾಂಟ್ರೋ ರವಿಯ ಬೆಂಗಳೂರಿನ ಆರ್.ಆರ್. ನಗರದಲ್ಲಿರುವ ಮನೆ ಹಾಗೂ ಮೈಸೂರಿನ ದಟ್ಟಗಳ್ಳಿಯಲ್ಲಿನ ೨ ಮನೆಗಳಿಗೆ ಪೊಲೀಸರು ತೆರಳಿ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅವನು ಯಾವೆಲ್ಲ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂಬುದು ತನಿಖೆಯಿಂದ ತಿಳಿದುಬರಲಿದೆ. ಈ ಸಂಬಂಧ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದರು.

ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಜ.2ರಂದು ಪ್ರಕರಣ ದಾಖಲಾಗುತ್ತಿದ್ದಂತೆ ಸ್ಯಾಂಟ್ರೋ ರವಿ ತಲೆಮರೆಸಿಕೊಂಡಿದ್ದ. ಇವನೊಬ್ಬ ಹಾರ್ಡ್‌ಕೋರ್ ಕ್ರಿಮಿನಲ್ ಆಗಿದ್ದು, 2005ರಲ್ಲಿಯೇ ಆತನ ಮೇಲೆ ಗೂಂಡಾ ಕಾಯ್ದೆ ಇತ್ತು. 11ತಿಂಗಳು ಜೈಲಿನಲ್ಲಿ ಶಿಕ್ಷೆಯನ್ನೂ ಅನುಭವಿಸಿದ್ದ ಈತ ಬಿಳಿ ಬಟ್ಟೆ ಧರಿಸಿಕೊಂಡು ಅಪರಾಧ ಕೃತ್ಯಗಳನ್ನು ಎಸಗುತ್ತಾ ಬಂದಿದ್ದಾನೆ. ಇವನು ಅಪರಾಧ ಎಸಗುವ ಮತ್ತು ಅದರಿಂದ ತಪ್ಪಿಸಿಕೊಳ್ಳವ ಚಾಣಕ್ಷತೆ ಹೊಂದಿದ್ದ. ಹಾಗಾಗಿಯೇ ಆತನನ್ನು ಸೆರೆ ಹಿಡಿಯಲು ತಡವಾಯಿತು. ಆರಂಭದಿಂದಲೂ ತಾನಿರುತ್ತಿದ್ದ ಮನೆ, ಬಳಸುತ್ತಿದ್ದ ಕಾರು, ಮೊಬೈಲ್, ಸಿಮ್ ಬದಲಿಸುವ ಜತೆಗೆ ತನ್ನ ನೈಜ್ಯ ಮುಖ ಚಹರೆಯನ್ನು ಬದಲಿಸಿದ್ದ. ತಲೆಯ ಮೇಲಿದ್ದ ವಿಗ್ ತೆಗೆದಿರುವುದಲ್ಲದೇ, ಮೀಸೆಯನ್ನೂ ಬೋಳಿಸಿಕೊಂಡು ತಪ್ಪಿಸಿಕೊಳ್ಳುತ್ತಿದ್ದ ಎಂದು ಅಲೋಕ್‌ಕುಮಾರ್ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ರಾಮನಗರ ಎಸ್‌ಪಿ ಡಾ.ಸಂತೋಷ್ ಬಾಬು, ಮಂಡ್ಯ ಎಸ್‌ಪಿ ಎನ್.ಯತೀಶ್, ರಾಯಚೂರು ಎಸ್‌ಪಿ ಬಿ.ನಿಖಿಲ್, ಡಿಸಿಪಿ ಮುತ್ತುರಾಜ್, ಎಸಿಪಿ ಶಿವಶಂಕರ್ ಇದ್ದರು.


Spread the love

Leave a Reply

Please enter your comment!
Please enter your name here