ಗುರುರಾಜ್‌ ಸನಾತನ ಪರಂಪರೆಯ ಧ್ವನಿಯಾಗಿ ವಿಧಾನಸಭೆ ಪ್ರವೇಶಿಸಲಿ: ತೇಜಸ್ವಿ ಸೂರ್ಯ

Spread the love

ಗುರುರಾಜ್‌ ಸನಾತನ ಪರಂಪರೆಯ ಧ್ವನಿಯಾಗಿ ವಿಧಾನಸಭೆ ಪ್ರವೇಶಿಸಲಿ: ತೇಜಸ್ವಿ ಸೂರ್ಯ

 
ಕುಂದಾಪುರ: ಭಾರತೀಯ ಜನತಾ ಪಾರ್ಟಿಯ ಸಂಘದ ಓರ್ವ ಸಾಮಾನ್ಯ ಕಾರ್ಯಕರ್ತನಾಗಿ, ಪೂರ್ಣ ಸಮರ್ಪಣಾ ಭಾವದಿಂದ ಕೆಲಸ ಮಾಡಿದ ಕಾರ್ಯಕರ್ತನನ್ನು ಪಕ್ಷ ಗುರುತಿಸಿ ಟಿಕೆಟ್‌ ನೀಡಿದೆ. ಈ ಭಾಗದಲ್ಲಿ ಯುವಕರ, ಧಮನಿತರ, ಸನಾತನ ಪರಂಪರೆಯ ಧ್ವನಿಯಾಗಿ ಗುರುರಾಜ್‌ ಗಂಟಿಹೊಳೆ ವಿಧಾನಸಭೆ ಪ್ರವೇಶಿಸಬೇಕು ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿದರು.


ಅವರು ಗುರುವಾರ ಮಧ್ಯಾಹ್ನ ಬೈಂದೂರು ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಇಡೀ ಕರಾವಳಿ ಭಾಗದಲ್ಲಿ ಅತ್ಯಂತ ದೊಡ್ಡ ಅಂತರದಲ್ಲಿ ಗೆಲ್ಲುವ ಕ್ಷೇತ್ರವಿದ್ದರೆ ಅದು ಗುರುರಾಜ್‌ ಗಂಟಿಹೊಳೆ ಪ್ರತಿನಿಧಿಸುವ ಬೈಂದೂರು ವಿಧಾನಸಭಾ ಕ್ಷೇತ್ರ. ಇಡೀ ಕರಾವಳಿಯಲ್ಲಿ ಭಾಜಪದ ಪರವಾದ ಬಹಳ ದೊಡ್ಡ ಅಲೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೂರುವರೆ-ನಾಲ್ಕು ವರ್ಷಗಳ ಹಿಂದೆ ಯುವಮೋರ್ಚಾದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ನನ್ನನ್ನು ಪಕ್ಷ ಗುರುತಿಸಿ ಲೋಕಸಭಾ ಚುನಾವಣೆಯ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿತ್ತು. ಪಕ್ಷದ ಈ ತೀರ್ಮಾನದಿಂದಾಗಿ ಅಂದು ಬೆಂಗಳೂರಿನ ದಕ್ಷಿಣ ಕಾರ್ಯಕರ್ತರಲ್ಲಿ ಯಾವ ರೀತಿಯ ಸಂಚಲನ ಮೂಡಿಸಿತ್ತೊ ಅದೇ ರೀತಿಯ ಮಿಂಚಿನ ಸಂಚಲನವನ್ನು ಇಂದು ಗುರುರಾಜ್‌ ಗಂಟಿಹೊಳೆಯವರನ್ನು ಅಭ್ಯರ್ಥಿ ಮಾಡುವ ಮೂಲಕ ನಾವೆಲ್ಲರೂ ಅನುಭವಿಸುತ್ತಿದ್ದೇವೆ ಎಂದರು.

ಸಣ್ಣ-ಪುಟ್ಟ ವ್ಯವಹಾರಗಳ ಜೊತೆ ಜೊತೆಗೆ ಅವರಿಗೆ ಬರುವ ಆದಾಯದಲ್ಲಿ ಈಶಾನ್ಯ ಭಾರತದಲ್ಲಿರುವ ನಮ್ಮ ಯುವಕರನ್ನು ಕರೆತಂದು ಅವರ ವಿದ್ಯಭ್ಯಾಸದ ಜವಾಬ್ದಾರಿಯನ್ನು ಹೆಗಲ ಮೇಲೆ ಹಾಕಿಕೊಂಡು ಒಂದೇ ಭಾರತದ ಪರಿಕಲ್ಪನೆಯನ್ನು ಹಳ್ಳಿಗಾಡಿನಲ್ಲಿ ತರುವ ಚಿಂತನೆಯಲ್ಲಿ ಗುರುರಾಜ್ ತೊಡಗಿಕೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ದಿನಪತ್ರಿಕೆಗಳಲ್ಲಿ ಅಭ್ಯರ್ಥಿಗಳ ಆಸ್ತಿಗಳ ಲೆಕ್ಕಾಚಾರಗಳು ಎಲ್ಲರ ಹುಬ್ಬೇರಿಸುವಂತೆ ಮಾಡುತ್ತಿದೆ. ಆದರೆ ಈ ಹಣಗಳ ಕೋಟ್ಯಾಧೀಶ್ವರರ ಮಧ್ಯದಲ್ಲಿ ಗುಣಗಳ ಕೋಟ್ಯಾಧೀಶರಾಗಿ ಜನ ಸಂಪತ್ತನ್ನು ಗಳಿಸಿರುವ ಒಬ್ಬ ಕಾರ್ಯಕರ್ತನಾಗಿ ಗುರುರಾಜ್‌ ಗಂಟಿಹೊಳಿ ಕಂಗೊಳಿಸುತ್ತಿದ್ದಾರೆ ಎಂದರು.

ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಚುನಾವಣಾ ರಾಜಕಾರಣದಿಂದ ದೂರ ಸರಿದ ಬಳಿಕ ಆ ಜಾಗವನ್ನು ಯಾರು ತುಂಬುತ್ತಾರೆ ಎನ್ನುವ ಪ್ರಶ್ನೆ ಸಾವಿರಾರು ಕಾರ್ಯಕರ್ತರಲ್ಲಿ ಮೂಡಿರುವುದು ಸಹಜ. ಬಹಳ ಹೆಮ್ಮೆಯಿಂದ, ವಿಶ್ವಾಸದಿಂದ ಹೇಳಬಲ್ಲೆ, ಈ ಭಾಗದಲ್ಲಿ ಕುಂದಾಪುರದ ವಾಜಪೇಯಿ ಎಂದು ಯಾವ ರೀತಿಯಲ್ಲಿ ಶ್ರೀನಿವಾಸ ಶೆಟ್ಟರು ಹೆಸರು ಮಾಡಿದ್ದರೋ ಅದೇ ರೀತಿಯ ಪ್ರೀತಿ, ವಿಶ್ವಾಸ, ಗೌರವವನ್ನು ಕಾರ್ಯಕರ್ತರಲ್ಲಿ, ಮತದಾರರಲ್ಲಿ ಗುರುರಾಜ್‌ ಗಂಟಿಹೊಳೆ ಬರುವ ದಿನಗಳಲ್ಲಿ ಸಂಪಾದಿಸುತ್ತಾರೆ, ಆ ಸ್ಥಾನವನ್ನು ಅಲಂಕರಿಸುತ್ತಾರೆ ಎಂದರು.

ಬಿಜೆಪಿಯ ಮೇಲೆ ಹಿಟ್‌ ಆಂಡ್‌ ರನ್‌ ರೀತಿ ಭ್ರಷ್ಟಾಚಾರ ಆರೋಪ ಹೊರಿಸುತ್ತಿರುವ ಕಾಂಗ್ರೆಸ್‌ ನಾಯಕರು ಆರೋಪಗಳನ್ನು ಸಾಬೀತು ಮಾಡುತ್ತಿಲ್ಲ. ನಮ್ಮ ಮೇಲಿನ ಭ್ರಷ್ಟಾಚಾರದ ಕುರಿತು ದಾಖಲಾತಿ ಇದ್ದರೆ ಕೋರ್ಟ್‌ ಗೆ ಹೋಗಿ ಸಾಬೀತು ಮಾಡುವ ಧೈರ್ಯ ತೋರಿಸಲಿ ಎಂದರು.

ಚಿತ್ರನಟಿ ಶ್ರುತಿ ಮಾತನಾಡಿ, ರಾಜ್ಯದ ಹಲವಾರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೆ. ಆದರೆ ಬೈಂದೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಹಳ ವಿಭಿನ್ನ. ಹಣವಿರುವ ಅಭ್ಯರ್ಥಿಗಳನ್ನು ನೋಡಿದ್ದೇನೆ. ಆದರೆ ಕೇವಲ ಗುಣಕ್ಕೆ ಹೆಸರಾಗಿರುವ ಅಭ್ಯರ್ಥಿ ಕ್ಷೇತ್ರದಲ್ಲಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಕನಸೇ ಅದು. ಓಬ್ಬ ಚಾ ಮಾರುವ ವ್ಯಕ್ತಿ ನಮ್ಮ ದೇಶದ ಪ್ರಧಾನಿಯಾಗಿದ್ದು ನಮ್ಮ ಕಣ್ಮುಂದೆ ಇದೆ. ಹಾಗೆಯೇ ಬಡವರ ಮನೆ ಹುಡುಗನನ್ನು ಶಾಸಕನಾಗಿ ಕಾಣುವ ದಿನಗಳು ದೂರವಿಲ್ಲ. ಈ ಚುನಾವಣೆಯಲ್ಲಿ ಒಂದಷ್ಟು ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ೬೦ ಕ್ಕೂ ಹೆಚ್ಚು ಹೊಸ ಮುಖಗಳಿಗೆ ಬಿಜೆಪಿ ಪ್ರಾಶಸ್ತ್ಯ ನೀಡಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ, ಬಿಜೆಪಿ ಅಭರ್ಯರ್ಥಿ ಗುರುರಾಜ್‌ ಗಂಟಿಹೊಳೆ, ಚುನಾವಣಾ ಉಸ್ತುವಾರಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ, ಮುಖಂಡರಾದ ಸದಾನಂದ ಉಪ್ಪಿನಕುದ್ರು, ಪ್ರಿಯದರ್ಶಿನಿ ದೇವಾಡಿಗ ಉಪಸ್ಥಿತರಿದ್ದರು.


Spread the love