
ಗೃಹಜ್ಯೋತಿ, ಗೃಹ ಲಕ್ಷ್ಮೀ ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ನಕಲಿ ಆ್ಯಪ್ ಗಳ ಬಗ್ಗೆ ಎಚ್ಚರವಹಿಸಿ – ಎಸ್ಪಿ ಅಕ್ಷಯ್ ಹಾಕೆ ಮಚ್ಚೀಂದ್ರ
ಉಡುಪಿ: ರಾಜ್ಯ ಸರಕಾರದ ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗಳ ಹೆಸರಿನಲ್ಲಿ ನಕಲಿ ಅ್ಯಪ್ ಗಳ ಮೂಲಕ ಸೈಬರ್ ಕಳ್ಳರು ಸಾರ್ವಜನಿಕರ ವೈಯುಕ್ತಿಕ ಮಾಹಿತಿ ಕಲೆ ಹಾಕಿ ದುರ್ಬಳಕೆ ಮಾಡಿಕೊಳ್ಳುವ ಸಂಭವವಿದ್ದು ಜನಸಾಮಾನ್ಯರು ಎಚ್ಚರ ವಹಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚಿಂದ್ರ ತಿಳಿಸಿದ್ದಾರೆ
ಕರ್ನಾಟಕ ಸರಕಾರದ ಉಚಿತ ಯೋಜನೆಗಳಾದ ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಸಾರ್ವಜನಿಕ ಜಾಲತಾಣಗಳಲ್ಲಿ ನಕಲಿ ಅಪ್ಲಿಕೇಷನ್ಗಳು ಕಾರ್ಯಾಚರಿಸುತ್ತಿದ್ದು, ಅವುಗಳನ್ನು ಸಾರ್ವಜನಿಕರು ತಮ್ಮ ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬಾರದು ಮತ್ತು ಸೈಬರ್ ಕಳ್ಳರು ಮೆಸೇಜ್ ಮೂಲಕ ಹಾಗೂ ವಾಟ್ಸ್ಯಾಪ್ ಮೂಲಕ ಈ ಬಗ್ಗೆ ನೀಡುವ ಯಾವುದೇ ಲಿಂಕ ನ್ನು ಬಳಸಬಾರದು.
ಈ ರೀತಿಯಾದ ಲಿಂಕ್ ಕ್ಲಿಕ್ ಮಾಡಿದಾಗ ನಿಮ್ಮ ವೈಯುಕ್ತಿಕ ಮಾಹಿತಿಗಳು ಸೋರಿಕೆಯಾಗಬಹುದು. ಯಾವುದೇ ಹೆಲ್ಪ್ ಡೆಸ್ಕ್ ನಿಂದ ಕರೆ ಮಾಡಿ ನೀವು ಈ ಯೋಜನೆಗೆ ಆಯ್ಕೆಯಾಗಿದ್ದಿರಿ ನಿಮ್ಮ ವೈಯುಕ್ತಿಕ ವಿವರಗಳನ್ನು ನೀಡುವಂತೆ ತಿಳಿಸಿದ್ದಲ್ಲಿ ಕೂಡ ಯಾವುದೇ ಮಾಹಿತಿ ನೀಡಬಾರದು. ಸಾರ್ವಜನಿಕರು ಇಂತಹ ನಕಲಿ ಅಪ್ಲಿಕೇಷನ್ಗಳ ಮೂಲಕ ತಮ್ಮ ವೈಯುಕ್ತಿಕ ಆಧಾರ್, ಪ್ಯಾನ್ ಕಾರ್ಡ್ ಮಾಹಿತಿ ನೀಡಿ ಮೋಸಹೋಗಬೇಡಿ. ಈ ಯೋಜನೆಗಳಿಗೆ ಸಂಬಂಧಿಸಿದಂತೆ ಸರಕಾರವು ಇದುವರೆಗೂ ಯಾವುದೇ ಅಂಡ್ರಾಯ್ಡ್ ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡಿರುವುದಿಲ್ಲ. ಈ ಯೋಜನೆಗಳ ನೋಂದಣಿಗಾಗಿ ಸೇವಾ ಸಿಂಧು ಪೋರ್ಟಲ್ಗೆ ಭೇಟಿ ನೀಡುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.