
ಗೃಹಪ್ರವೇಶ ನಡೆದ ಐದು ದಿನದಲ್ಲೆ ಮನೆಯೊಡತಿ ಆತ್ಮಹತ್ಯೆ!
ಮಂಗಳೂರು: ನೂತನ ಮನೆಯೊಂದನ್ನು ಖರೀದಿಸಿ ಅದ್ದೂರಿಯಾಗಿ ಗೃಹಪ್ರವೇಶ ನಡೆಸಿದ 5 ದಿನದಲ್ಲಿ ಅದೇ ಮನೆಯಲ್ಲಿ ಯುವತಿಯೋರ್ವಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲದಲ್ಲಿ ನಡೆದಿದೆ.
ಮೃತ ಯುವತಿಯನ್ನು ಮೂಲತಃ ಫರಂಗಿಪೇಟೆಯ ಪ್ರಸ್ತುತ ಕುಂಪಲ ಚಿತ್ರಾಂಜಲಿ ನಗರದ ನಿವಾಸಿಯಾಗಿದ್ದು ಅಶ್ವಿನಿ ಬಂಗೇರ ಎಂದು ಗುರುತಿಸಲಾಗಿದೆ.
ಅಶ್ವಿನಿ ಬುಧವಾರ ರಾತ್ರಿ ತನ್ನ ಸ್ನೇಹಿತೆಯೊಂದಿಗೆ ಮೊಬೈಲ್ ನಲ್ಲಿ ಚಾಟ್ ಮಾಡಿದ್ದು ಸ್ನೇಹಿತಿ ಬೆಳಿಗ್ಗೆ ಬಂದು ಕೋಣೆಯ ಬಾಗಿಲು ಒಡೆದು ನೋಡಿದಾಗ ಅಶ್ವಿನಿ ಫ್ಯಾನಿಗೆ ಸೀರೆಯಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ಬಂದಿದ್ದು, ಅಶ್ವಿನಿ ಅವರು ಆತ್ಮಹತ್ಯೆಗೆ ಮುನ್ನ 24 ಪುಟಗಳ ಡೆತ್ ನೋಟ್ ಬರೆದಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ತಾನು ಮನೆ ಖರೀದಿಸಿ ಮೋಸ ಹೋಗಿದ್ದು ಬ್ಯಾಂಕ್ ಅಧಿಕಾರಿಗಳು ಬಂದು ಪೀಡಿಸುತ್ತಿರುವುದಾಗಿ ಬರೆದುಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆಗೈದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ವಿದೇಶದಲ್ಲಿ ಉದ್ಯೋಗದಲ್ಲಿದ್ದ ಅಶ್ವಿನಿ ಒಂದುವರೆ ತಿಂಗಳ ಹಿಂದೆ ಊರಿಗೆ ಮರಳಿದ್ದು ಕುಂಪಲ ಚಿತ್ರಾಂಜಲಿ ನಗರದಲ್ಲಿ ಸಂಗೀತ ಎಂಬವರಿಂದ ಮನೆಯೊಂದನ್ನು ಖರೀದಿಸಿ ಜೂನ್ 3 ರಂದು ಗೃಹಪ್ರವೇಶ ಮಾಡಿದ್ದರು ಎನ್ನಲಾಗಿದೆ.
ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.