
ಗೃಹ ಜ್ಯೋತಿ ಯೋಜನೆ ಕುರಿತು ಬಾಡಿಗೆದಾರರಲ್ಲಿ ಬಿಜೆಪಿ ಗೊಂದಲ ಮೂಡಿಸುತ್ತಿದೆ – ಜಿ ಪರಮೇಶ್ವರ್
ಉಡುಪಿ: ಗೃಹ ಜ್ಯೋತಿ ಯೋಜನೆ ಬಗ್ಗೆ ಸರ್ಕಾರ ಎಲ್ಲವನ್ನು ಸ್ಪಷ್ಟವಾಗಿ ಹೇಳಿದೆ. ಬಾಡಿಗೆದಾರರಲ್ಲಿ ಗೊಂದಲ ಉಂಟು ಮಾಡುತ್ತಿರುವುದು ಬಿಜೆಪಿಯವರು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಕಿಡಿಕಾರಿದ್ದಾರೆ.
ಉಡುಪಿ ಎಸ್ಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಷ್ಟೇ ಹಣ ಖರ್ಚಾಗುತ್ತೆ ಎಂಬುದನ್ನು ಗಮನಿಸಿ ಸ್ಪಷ್ಟ ತೀರ್ಮಾನ ಕೈಗೊಂಡಿದ್ದೇವೆ. ಬಿಪಿಎಲ್ ಎಪಿಎಲ್ ಯಾವುದೇ ವರ್ಗೀಕರಣ ಮಾಡಿಲ್ಲ. ಮುಖ್ಯಮಂತ್ರಿಗಳು ಎಲ್ಲ ವಿಚಾರವನ್ನು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಹೇಳಿದರು.
12 ತಿಂಗಳ ಸರಾಸರಿ ತೆಗೆದುಕೊಳ್ಳುತ್ತೇವೆ, ಶೇಕಡ 10 ಸೇರ್ಪಡೆ ಮಾಡುತ್ತೇವೆ. ಶೇಕಡ 10 ಬೆನಿಫಿಟ್ ಆಫ್ ಡೌಟ್ ನೀಡಿದ್ದೇವೆ. ಮಾಲೀಕರ ಹೆಸರಲ್ಲಿ ಅವರಿಗೆ ಲಾಭ ಆಗುತ್ತೆ. ಆದರೆ ಆ ಲಾಭ ಬಾಡಿಗೆದಾರರಿಗೆ ವರ್ಗಾವಣೆ ಆಗಲೇಬೇಕು. ಬೆನಿಫಿಟ್ ಆಫ್ ಡೌಟ್ನ ಲಾಭ ಬಾಡಿಗೆದಾರರಿಗೆ ಸಿಗಬೇಕು. ಈ ಸಮಸ್ಯೆಯನ್ನು ನಾವು ಬಗೆಹರಿಸುತ್ತವೆ ಎಂದರು.
ಯೋಜನೆ ಎಂದ ಮೇಲೆ ಕೆಲವೊಂದು ಕಂಡೀಶನ್ ಹಾಕಲೇಬೇಕಾಗುತ್ತದೆ. ಯಾರೋ ನಿನ್ನೆ ಬಾಡಿಗೆ ಬಂದು ಇವತ್ತು ವಿನಾಯಿತಿ ಕೇಳಿದರೆ ಆಗುತ್ತಾ? ಒಂದು ಹಂತದ ಮಾರ್ಜಿನಲ್ ಕಂಡೀಶನ್ ಇರುತ್ತೆ. ಬಡಜನರನ್ನು ಸಬಲೀಕರಣಗೊಳಿಸಬೇಕು ಎಂಬ ಉದ್ದೇಶದಿಂದ ಯೋಜನೆ ಜಾರಿ ಮಾಡಿದ್ದೇವೆ. ಅದರಲ್ಲಿ ಒಂದಿಷ್ಟು ಆಚೀಚೆ ಆದರೆ ಬೊಬ್ಬೆ ಹೊಡೆದರೆ ನಾವೇನು ಮಾಡೋದು, ಹೊಡೆದುಕೊಳ್ಳಿ ಬಿಡಿ. ಬಿಜೆಪಿಯವರಿಗೆ ಈ ಯೋಜನೆ ಮಾಡುವುದು ಬೇಡ ಎಂದು ಯಾರಾದ್ರೂ ಹೇಳಿದ್ದಾರಾ? ಸುಳ್ಳು ಹೇಳಿಕೊಂಡು ಬಂದವರು ಈಗ ಅನುಭವಿಸುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಬಿಜೆಪಿ ಕಾರ್ಯಕರ್ತರ ರಕ್ಷಣೆಗೆ ಹೆಲ್ಪ್ ಡೆಸ್ಕ್ ವಿಚಾರವಾಗಿ ಮಾತನಾಡಿ, ಪಕ್ಷದ ಕಾರ್ಯಕರ್ತರ ರಕ್ಷಣೆ ಮಾಡಲು ಹೆಲ್ಪ್ ಡೆಸ್ಕ್ ಮಾಡಿರಬಹುದು. ಅವರಿಗೊಳ್ಳೇದಾಗೋದಾದ್ರೆ ತಪ್ಪಲ್ಲ ಮಾಡಲಿ. ಅದು ಬಿಜೆಪಿಯ ಆಂತರಿಕ ವಿಚಾರ. ಕಾಂಗ್ರೆಸ್ ತನ್ನ ಕಾರ್ಯಕರ್ತರ ರಕ್ಷಣೆಗೆ ಇಂಥದ್ದನ್ನು ಮುಂದೆ ಮಾಡಬಹುದು ಎಂದರು.
ಚಕ್ರವರ್ತಿ ಸೂಲಿಬೆಲೆ ಜೈಲಿಗಟ್ಟುವ ಎಂಬಿ ಪಾಟೀಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಈ ಪ್ರಶ್ನೆಗಳಿಗೆ ತಕ್ಕ ಉತ್ತರ ಎಂಬಿ ಪಾಟೀಲ್ ಅವರೇ ಕೊಡುತ್ತಾರೆ. ಆಮೇಲೆ ಗೃಹ ಇಲಾಖೆ ಆ ಬಗ್ಗೆ ಯೋಚನೆ ಮಾಡುತ್ತದೆ. ಬಿಜೆಪಿ ಮಾಡಿದ ಎಲ್ಲಾ ಆರೋಪಕ್ಕೆ ಉತ್ತರ ಕೊಡೋಕೆ ಆಗುತ್ತಾ? ಬಿಜೆಪಿಯ ಒಬ್ಬ ಕಾರ್ಯಕರ್ತ ಹೇಳಿದರು ಎಂದು ಅದಕ್ಕೆ ನಾನು ಉತ್ತರ ಕೊಡಬೇಕಾ ಎಂದು ಪ್ರಶ್ನಿಸಿದರು. ಜವಾಬ್ದಾರಿಯಿಂದ ಯಾವುದಾದರೂ ಒಂದು ವಿಚಾರದ ಮೇಲೆ, ಘಟನೆ ಮೇಲೆ ಆರೋಪ ಮಾಡಿದರೆ ಉತ್ತರ ಕೊಡಬಹುದು ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ನನಗೇನು ಗೊತ್ತಿಲ್ಲ, ಮಾಧ್ಯಮಗಳೇ ಹೇಳಿವೆ ಅಷ್ಟೇ. ಅವರು ನಮ್ಮ ಬಳಿ ಚರ್ಚೆ ಮಾಡಿದ್ದಾರಾ ಎಂದು ಪ್ರಶ್ನಿಸಿದರು. ಅವರೇನು ಮಾಡಿಕೊಂಡಿದ್ದಾರೆ ನಮಗೆ ಹೇಗೆ ಗೊತ್ತಾಗಬೇಕು. ಅವರಿಗೆ ಸೂಕ್ತ ಅನಿಸಿದ್ದನ್ನು ಮಾಡುತ್ತಾರೆ ಅಲ್ವಾ ಎಂದರು.
ಕರಾವಳಿ ಪ್ರದೇಶದಲ್ಲಿ ನಡೆಯುತ್ತಿರುವ ಘಟನೆಗಳ ಮಾಹಿತಿ ಪಡೆದಿದ್ದೇನೆ. ನೈತಿಕ ಪೊಲೀಸ್ ಗಿರಿ ಹತ್ತಿಕ್ಕುವ ಕ್ರಮದ ಬಗ್ಗೆ ಚರ್ಚೆಯಾಗಿದೆ. ಸಮಾಜದ ಸ್ವಾಸ್ತ್ಯ ಹಾಳು ಮಾಡಿ ಕೋಮುವಾದ ಪ್ರಚೋದನೆ ಮಾಡುವ ಕೆಲಸ ಸಹಿಸಲ್ಲ. ಮಾದಕ ವಸ್ತುಗಳ ದಂಧೆ ಕರಾವಳಿ ಪ್ರದೇಶದಲ್ಲಿ ನಡೆಯುತ್ತಿದೆ. ಸೆನ್ಸಿಟಿವ್ಗಳನ್ನು ಗುರಿ ಮಾಡಿ ಸರಬರಾಜು ಮಾಡಲಾಗುತ್ತಿದೆ. ಡ್ರಗ್ ಪೆಡ್ಲರ್ಸ್ ಕಂಟ್ರೋಲ್ ಮಾಡುತ್ತೇವೆ. ಮಟ್ಕಾ, ದರೋಡೆ ಕ್ರಿಮಿನಲ್ ಚಟುವಟಿಕೆ ಹತ್ತಿಕ್ಕುತ್ತೇವೆ. ನಕ್ಸಲ್ ಪಡೆ ಬರ್ಕಾಸ್ತು ಬಗ್ಗೆ ಯೋಚನೆ ಮಾಡಿಲ್ಲ ಎಂದರು.