
ಗೃಹ ಲಕ್ಷ್ಮಿ ಯೋಜನೆಯಡಿ 1.3 ಕೋಟಿ ಅರ್ಜಿ ನಿರೀಕ್ಷೆ: ಕೃಷ್ಣ ಬೈರೇಗೌಡ
ಬೆಂಗಳೂರು: ಗೃಹ ಲಕ್ಷ್ಮಿ ಯೋಜನೆಯಡಿ 1.3 ಕೋಟಿ ಅರ್ಜಿಗಳು ಬರುವ ನಿರೀಕ್ಷೆ ಇದೆ. ಅವುಗಳನ್ನು ಸ್ವೀಕರಿಸಿ, ವಿಲೇವಾರಿ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕಂದಾಯ ಇಲಾಖೆ ಸಹಕಾರ ನೀಡಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಅರ್ಜಿಗಳನ್ನು ಸ್ವೀಕರಿಸಿ, ವಿಲೇವಾರಿ ಮಾಡಲು ಅಗತ್ಯ ಸಿಬ್ಬಂದಿ ಹಾಗೂ ಮೂಲಸೌಕರ್ಯಗಳಿಲ್ಲ. ಈ ಕಾರಣದಿಂದ ಸಹಕಾರ ನೀಡುವಂತೆ ಕಂದಾಯ ಇಲಾಖೆಗೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ. ಈ ಕಾರಣದಿಂದ ಎರಡೂ ಇಲಾಖೆಗಳ ಜಂಟಿ ಸಭೆ ನಡೆಸಲಾಗಿದೆ ಎಂದು ಹೇಳಿದರು.
ಜೂನ್ 15ರಿಂದ ಅರ್ಜಿ ಸ್ಬೀಕಾರಕ್ಕೆ ಚಾಲನೆ ನೀಡುವ ಗುರಿ ಇದೆ. ಇದಕ್ಕಾಗಿ ಮೊಬೈಲ್ ಆಯಪ್ ಮತ್ತು ಆನ್ಲೈನ್ ಆಯಪ್ ಸಿದ್ಧಪಡಿಸಲಾಗುತ್ತದೆ. ಸೋಮವಾರದ ವೇಳೆಗೆ ಎರಡೂ ಆಯಪ್ ಗಳನ್ನು ಪ್ರಾಯೋಗಿಕವಾಗಿ ಪರಿಶೀಲಿಸಲಾಗುವುದು ಎಂದರು.
ನಾಡ ಕಚೇರಿಗಳು, ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್, ಡಿಜಿಟಲ್ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು ಎಂದು ವಿವರಿಸಿದರು.
ಸರ್ಕಾರದಿಂದ ಸಾಮಾಜಿಕ ಪಿಂಚಣಿ ಪಡೆಯುವ ಮಹಿಳೆಯರೂ ಗೃಹ ಲಕ್ಷ್ಮಿ ಯೋಜನೆಯಡಿ ನೆರವು ಪಡೆಯಲು ಅರ್ಹರು. ಈ ವಿಚಾರದಲ್ಲಿ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಯಾರೂ ಗೊಂದಲಕ್ಕೆ ಒಳಗಾಗಬಾರದು ಎಂದರು.