
ಗೈರಾದ ಸದಸ್ಯರಿಗೆ ಸಾಮಾನ್ಯ ಸಭೆಯ ಹಾಜರಾತಿ ಕೊಡಬಾರದು: ಕಟ್ಬೇಲ್ತೂರು ಗ್ರಾಮಸಭೆಯಲ್ಲಿ ನಿರ್ಣಯ
- ವಾರ್ಡ್ ನಿವಾಸಿಗಳ ಸಮಸ್ಯೆ ಕೇಳಲು ಸಮಯವಿಲ್ಲದಿದ್ದರೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲಿ: ಮತ್ತೆ ಗ್ರಾಮಸಭೆಗೆ ಗೈರಾದ ಸದಸ್ಯರ ವಿರುದ್ದ ಜನಾಕ್ರೋಶ.
ಕುಂದಾಪುರ: ಸದಸ್ಯರ ಅನುಪಸ್ಥಿತಿಯ ಕಾರಣದಿಂದಾಗಿ ಗ್ರಾಮಸ್ಥರ ಒಕ್ಕೊರಲ ಅಭಿಪ್ರಾಯದ ಮೇಲೆ ಮುಂದೂಡಲಾಗಿದ್ದ ಕಟ್ಬೇಲ್ತೂರು ಗ್ರಾ.ಪಂನ ಪ್ರಥಮ ಸುತ್ತಿನ ಗ್ರಾಮಸಭೆ ಬುಧವಾರ ಕಟ್ಬೇಲ್ತೂರು ಭದ್ರಮಹಾಕಾಳಿ ದೇವಸ್ಥಾನದ ಸಭಾಭವನದಲ್ಲಿ ಜರುಗಿತು.
ಕಳೆದ ಗ್ರಾಮಸಭೆಯಲ್ಲಿ ಸದಸ್ಯರು ಗೈರಾದ ಹಿನ್ನೆಲೆ ಗ್ರಾಮಸಭೆಯನ್ನು ಮುಂದೂಡಲಾಗಿತ್ತು. ಮುಂದಿನ ಗ್ರಾಮಸಭೆಗೆ ಕಡ್ಡಾಯವಾಗಿ ಬರುವಂತೆ ಗ್ರಾ.ಪಂ ನೋಟೀಸ್ ಜಾರಿಗೊಳಿಸಿದರೂ ಸದಸ್ಯರಿಬ್ಬರು ಮತ್ತೆ ಸಭೆಗೆ ಬಾರದೇ ಇರುವುದು ಉದ್ದಟತನದ ಪರಮಾವಧಿ. ಗ್ರಾಮಸಭೆಗೆ ಬಂದು ಗ್ರಾಮಸ್ಥರ ಸಮಸ್ಯೆ ಕೇಳುವ ಸಮಯ ಇವರಿಗೆ ಇಲ್ಲವಾದರೆ ಕೂಡಲೇ ಅವರು ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿ ಎಂದು ಗ್ರಾಮಸ್ಥ ಸುಕುಮಾರ್ ಪೂಜಾರಿ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಗ್ರಾಮಸ್ಥ ಸಂಜು ಬಗ್ವಾಡಿ, ಗ್ರಾಮಸಭೆಗೆ ಗೈರಾಗುವ ಹರೆಗೋಡು ಒಂದನೇ ವಾರ್ಡ್ನ ಇಬ್ಬರು ಸದಸ್ಯರಿಗೆ ಗ್ರಾಮಸಭೆಯ ಹಾಜರಾತಿ ಕೊಡಬಾರದು. ಈ ಬಗ್ಗೆ ಗ್ರಾಮಸಭೆಯಲ್ಲಿ ನಿರ್ಣಯ ಕೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ನಾಗರಾಜ್ ಪುತ್ರನ್ ಸದಸ್ಯರ ಅಭಿಪ್ರಾಯಕ್ಕೆ ಮನ್ನಣೆ ಕೊಡುವುದು ನಮ್ಮ ಆದ್ಯ ಕರ್ತವ್ಯ. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಗ್ರಾಮಸ್ಥ ಚಂದ್ರ ಭಟ್ ಮಾತನಾಡಿ, ಕಟ್ಬೇಲ್ತೂರು ಗ್ರಾ.ಪಂ ವ್ಯಾಪ್ತಿಯ ದೇವಲ್ಕುಂದಲ್ಲಿ ಕಾರ್ಯಾಚರಿಸುತ್ತಿರುವ ಹಾಲು ಡೈರಿಗೆ ಕೆಂಚನೂರಿನ ಹೆಸರು ಇರಿಸಲಾಗಿದೆ. ಈ ಬಗ್ಗೆ ಹಲವು ವರ್ಷಗಳಿಂದಲೂ ಹೇಳುತ್ತಾ ಬಂದಿದ್ದೇನೆ. ಇದುವರೆಗೂ ಯಾರಿಂದಲೂ ಸ್ಪಂದನೆ ಸಿಕ್ಕಿಲ್ಲ. ಅಲ್ಲಿ ಕಾರ್ಯಾಚರಿಸುತ್ತಿರುವ ಹಾಲು ಡೈರಿ ಯಾವ ಗ್ರಾಮದಲ್ಲಿದೆ ಎಂದು ಈ ಸಭೆಯಲ್ಲಿ ನಮಗೆ ಸ್ಪಷ್ಟನೆ ಕೊಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಡೈರಿ ದೇವಲ್ಕುಂದ ವ್ಯಾಪ್ತಿಯಲ್ಲಿದ್ದರೂ ಅದು ಸ್ಥಾಪನೆಯಾದಾಗ ಕೆಂಚನೂರು ಹೆಸರಿನಲ್ಲಿ ನೋಂದಣಿಯಾಗಿದೆ. ಹಾಲು ಡೈರಿಯಲ್ಲಿ ಶೇಕಡಾ 80ರಷ್ಟು ಜನ ನಮ್ಮವರೇ ಸದಸ್ಯರಾಗಿದ್ದಾರೆ. ಡೈರಿ ಸಾರ್ವಜನಿಕ ಸೇವೆಯಲ್ಲಿರುವುದರಿಂದ ಪಂಚಾಯತ್ನಿಂದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದ್ದೇವೆ ಎಂದರು. ಇದಕ್ಕುತ್ತರಿಸಿದ ಕಟ್ಬೇಲ್ತೂರು ಗ್ರಾಮಕರಣಿಕ ಸೋಮಪ್ಪ, ಈ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಿ. ಬಳಿಕ ತಹಸೀಲ್ದಾರ್ ಬಳಿ ಚರ್ಚೆ ನಡೆಸಿ ಮುಂದಿನ ತೀರ್ಮಾನ ಹೇಳುತ್ತೇವೆ ಎಂದರು.
ಕಟ್ಬೇಲ್ತೂರು ಪಶು ಚಿಕಿತ್ಸಾಲಯದ ಪ್ರಭಾರ ವೈದ್ಯಾಧಿಕಾರಿ ತರುಣ್ ಇಲಾಖೆಯಡಿಯಲ್ಲಿ ಬರುವ ಸರ್ಕಾರಿ ಸೌಲಭ್ಯದ ಕುರಿತು ಮಾತನಾಡಿದರು. ಈ ವೇಳೆಯಲ್ಲಿ ಮಾತನಾಡಿದ ಗ್ರಾಮಸ್ಥ ಸಂಜು ಬಗ್ವಾಡಿ, ಪಶು ಇಲಾಖೆಯಲ್ಲಿ ಯಾವೊಂದು ಸೌಲಭ್ಯವೂ ಸಿಗುತ್ತಿಲ್ಲ. ಮೂರು ಬಾರಿ ಅರ್ಜಿ ಸಲ್ಲಿಸಿದರೂ ನಮಗೆ ಏನು ಸಿಕ್ಕಿಲ್ಲ ಎಂದು ದೂರಿದರು. ಇದಕ್ಕೆ ದ್ವನಿಗೂಡಿಸಿದ ಗ್ರಾಮಸ್ಥೆ ಸಹನಾ, ಇದುವರೆಗೂ ಪಶು ಇಲಾಖೆಯಿಂದ ಸೌಲಭ್ಯ ಯಾರಿಗೆ ಸಿಕ್ಕಿದೆ, ಯಾವ ಕೃಷಿಕರು ಇದರಿಂದ ಪ್ರಯೋಜನ ಪಡೆದಿದ್ದಾರೆ ಎನ್ನುವ ಅಂಕಿಅಂಶ ಸಭೆಗೆ ನೀಡಿ. ಅಂಕಿಅಂಶ ಇಲ್ಲದೇ ಸಭೆಗೆ ಬರುವುದಾದರೆ ಇನ್ಯಾವುದಕ್ಕೆ ನೀವು ಬರುವುದು ಎಂದು ಪ್ರಶ್ನಿಸಿದರು. ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸದಸ್ಯ ಶರತ್ ಕುಮಾರ್ ಶೆಟ್ಟಿ ಅಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು. ಸಭೆಯ ಮಧ್ಯದಲ್ಲಿ ಮಾಹಿತಿ ಪಡೆದುಕೊಂಡ ಪಶು ವೈದ್ಯಾಧಿಕಾರಿ ಸಭೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಅಂಕಿಅಂಶಗಳ ಮೂಲಕವೇ ಉತ್ತರಿಸಿದರು.
ಗ್ರಾಮಸ್ಥೆ ಸಹನಾ ಮಾತನಾಡಿ, ದೇವಲ್ಕುಂದ ಭಾಗದಲ್ಲಿ ಸ್ಮಶಾನದ ಅವಶ್ಯಕತೆ ಇದೆ. ಹಿಂದಿನ ಆಡಳಿತಾವಧಿಯಲ್ಲಿ ಈ ಬಗ್ಗೆ ಸ್ಥಳ ಗುರುತಿಸಿ ನಿರ್ಣಯ ಮಾಡಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ದಾಖಲೆ ಇದೆ. ಆದರೆ ಇದುವರೆಗೂ ಸ್ಮಶಾನ ಆಗದೇ ಇರುವುದು ದುರಂತ ಎಂದರು. ಸದಸ್ಯ ಶರತ್ ಕುಮಾರ್ ಶೆಟ್ಟಿ ಮಾತನಾಡಿ, ಪ್ರತೀ ಗ್ರಾಮದಲ್ಲಿಯೂ ಸ್ಮಶಾನ ಇರಬೇಕು ಎನ್ನುವುದು ಸರ್ಕಾರದ ಉದ್ದೇಶ. ಹಿಂದಿನ ಆಡಳಿತದ ಅವಧಿಯಲ್ಲಿ ಸ್ಥಳ ಗುರುತಿಸಿ ಆರ್ಟಿಸಿಯೂ ಹೆಸರಿಗೆ ಆಗಿದೆ. ಕೆಲವರ ವೈಯಕ್ತಿಕ ಹಿತಾಸಕ್ತಿಗಳಿಂದಾಗಿ ಮುಂದೂಡುತ್ತಾ ಬರಲಾಗಿದೆ. ಆದರೆ ಈ ಬಾರಿ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಂಡು ಅದನ್ನು ಜಿಲ್ಲಾಧಿಕಾರಿಯವರಿಗೆ ಕಳುಹಿಸಿಕೊಡುವ ಕೆಲಸ ಮಾಡಬೇಕು ಎಂದರು. ಸುಳ್ಸೆ ಕ್ರಾಸ್ನಿಂದ ಕಿಣಿಯರಕಟ್ಟಿನ ತನಕವೂ ರಸ್ತೆ ಸಂಪೂರ್ಣ ಹಾಳಾಗಿದ್ದು, ದಾರಿ ದೀಪದ ವ್ಯವಸ್ಥೆಯು ಇಲ್ಲ ಎಂದು ಗ್ರಾಮಸ್ಥ ರೋಹಿತ್ ಆಚಾರ್ಯ ದೂರಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ನಾಗರಾಜ್ ಎಸ್ ಪುತ್ರನ್ ರಸ್ತೆ ದುರಸ್ತಿಯ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದೇವೆ. ಮೇ ಅಂತ್ಯದೊಳಗೆ ರಸ್ತೆ ಮಾಡಿಕೊಡುವುದಾಗಿ ಭರವಸೆ ನೀಡಿದರು. ಕಂಚಾಡಿ ಪರಿಶಿಷ್ಟ ಜಾತಿ ಕಾಲನಿಗೆ ಹೋಗಲು ರಸ್ತೆ ಸಮಸ್ಯೆ ಇದೆ. ಈ ಬಗ್ಗೆ ಸಂಬಂಧಟ್ಟವರ ಗಮನಕ್ಕೆ ತಂದಿದ್ದೇವೆ. ಮೂರು ತಲೆಮಾರು ಕಳೆದಿದ್ದೇವೆ. ಮೂಲಭೂತ ಸೌಲಭ್ಯಗಳಲ್ಲೊಂದಾದ ರಸ್ತೆ ಸಮಸ್ಯೆಯನ್ನು ಬಗೆಹರಿಸಿ ಕೊಡಿ ಎಂದು ಗ್ರಾಮಸ್ಥರಾದ ನಾಗರಾಜ್ ಕಂಚಾಡಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಈಗಾಗಲೇ ಸ್ಥಳೀಯ ನಿವಾಸಿಗಳನ್ನು ಕರೆದು ಮಾತನಾಡಿದ್ದೇವೆ. ಸ್ವಂತ ಜಾಗದಲ್ಲಿ ರಸ್ತೆ ಬಿಡುವುದಿಲ್ಲ ಎಂದಿದ್ದಾರೆ. ಸ್ಥಳ ತನಿಖೆ ನಡೆಸಿ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ಗೈರಾದ ಸದಸ್ಯರಿಗೆ ಸಾಮಾನ್ಯ ಸಭೆಯಲ್ಲಿ ಹಾಜರಾತಿ ಕೊಡಬಾರದು ಎನ್ನುವ ಬಗ್ಗೆ ಕಾನೂನಾತ್ಮಕ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇವೆ. ಅವರಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ನೋಟೀಸ್ ನೀಡಲಾಗಿದೆ. ನಾವು ಒತ್ತಾಯಪೂರ್ವಕವಾಗಿ ಕರೆಯಲು ಸಾಧ್ಯವಿಲ್ಲ. ಅವರೇ ತಿಳಿದು ಬರಬೇಕು ಎಂದು ಹಿರಿಯ ಸದಸ್ಯ ಅಶೋಕ್ ಬಳೆಗಾರ್ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಗ್ರಾಮಕರಣಿಕ ಸೋಮಪ್ಪ, ಕಟ್ಬೇಲ್ತೂರು ಪಶು ಆಸ್ಪತ್ರೆಯ ಪ್ರಭಾರ ವೈದ್ಯಾಧಿಕಾರಿ ಅರುಣ್ ಕುಮಾರ್, ಅಂಗನವಾಡಿ ಮೇಲ್ವಿಚಾರಕಿ ರಾಜೇಶ್ವರಿ, ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ತಾಂತ್ರಿಕ ಸಹಾಯಕ ಅಭಿಯಂತರರಾದ ಸುದನ್ವಕೃಷ್ಣ, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಶುಶ್ರೂಷಕಿಸುಜಾತ ಎನ್ ಇಲಾಖಾವಾರು ಮಾಹಿತಿಗಳನ್ನು ನೀಡಿದರು.
ಗ್ರಾ.ಪಂ ಅಧ್ಯಕ್ಷ ನಾಗರಾಜ್ ಎಸ್ ಪುತ್ರನ್, ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶ್ವೇತಾ ದೇವಾಡಿಗ, ಅಶೋಕ್ ಬಳೆಗಾರ್, ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಸಚ್ಚೀಂದ್ರ ದೇವಾಡಿಗ, ಗಣೇಶ್ ಪ್ರಸಾದ್ ಶೆಟ್ಟಿ, ಜ್ಯೋತಿ, ಸವಿತಾ, ಶಾಲಿನಿ, ವೈಶಾಲಿ, ಸುಮತಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ, ಮಂಜುನಾಥ ಇದ್ದರು.
ಕಾರ್ಯದರ್ಶಿ ಗಣೇಶ್ ಸ್ವಾಗತಿಸಿದರು. ಸಿಬ್ಬಂದಿ ಪ್ರೇಮಾ ಹಿಂದಿನ ಸಭೆಯ ವರದಿ ವಾಚಿಸಿದರು.