
ಗ್ಯಾರಂಟಿ ಯೋಜನೆ ಟೀಕಿಸುವ ಭರದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ವಿವಾದತ್ಮಕ ಹೇಳಿಕೆ ನೀಡಿದ ಸಂಸದ ಪ್ರತಾಪ್ ಸಿಂಹ!
ಮೈಸೂರು: ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಟೀಕಿಸುವ ಭರದಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ನ ಗೃಹ ಲಕ್ಷ್ಮಿ ಯೋಜನೆಯಂತೆ 2000 ರೂ.ನೀಡಬೇಂದರೆ ಮನೆ ಯಜಮಾನಿ ಯಾರು ಅಂತಾ ತೀರ್ಮಾನ ಮಾಡಬೇಕಂತೆ? ಮನೆಯೊಳಗೆ ಅತ್ತೆ – ಸೊಸೆ ಕೂತು ಈ ತೀರ್ಮಾನ ಮಾಡಲು ಸಾಧ್ಯನಾ? ಹಿಂದೂಗಳ ಮನೆಯಲ್ಲಾದರೂ ಅತ್ತೆ – ಸೊಸೆ ನಡುವೆ ಯಜಮಾನಿಗೆ ಪೈಪೋಟಿ ಇರುತ್ತೆ. ಆದರೆ, ಮುಸ್ಲಿಂರ ಮನೆಯಲ್ಲಿ ಎರಡು ಹೆಂಡ್ತಿ ಮೂರು ಹೆಂಡ್ತಿ ಇದ್ದಾರೆ. ಅವರಲ್ಲಿ ಯಾರು ಯಜಮಾನಿ ಆಗುತ್ತಾರೆ? ಅವರ ಮನೆಯೊಳಗೆ ಬೆಂಕಿ ಹಾಕುತ್ತಿದ್ದೀರಿ .ಕುಟುಂಬ ಒಡೆಯುವ ಕೆಲಸ ಆಗುತ್ತಿದೆ’ ಎಂದು ಹೇಳಿದ್ದಾರೆ.
ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತ ಎಂದು ಹೇಳಿದ್ದೀರಿ. ಈಗ ಸರಾಸರಿ ತೆಗೆದು ಉಚಿತ ಕೊಡುತ್ತೇವೆ ಅಂತಾ ಹೇಳ್ತಿದ್ದೀರಿ. ಇದು ಮೋಸ ಅಲ್ವಾ?ಯಾವುದು ಷರತ್ತು ಇಲ್ಲದೆ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡಲೇಬೇಕು. ಜನ್ ಧನ್ ಅಕೌಂಟ್ ಓಪನ್ ಆಗಿದೆ. ಅದಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿದೆ. ಹೀಗಿದ್ದರೂ ಗೃಹ ಲಕ್ಷ್ಮಿ ಜಾರಿ ಯಾಕೆ ಆಗುತ್ತಿಲ್ಲ? ಗೃಹಲಕ್ಷ್ಮಿ ಯೋಜನೆ ಮುಂದೂಡಲು ಕುಂಟು ನೆಪ ಹೇಳಲಾಗುತ್ತಿದೆ ಎಂದರು.
ಚುನಾವಣೆಗೆ ಮೊದಲು ಕಾಂಗ್ರೆಸ್ ನವರು ಎದೆ ಬಡಿದು ಕೊಂಡು, ಊರು ಊರಿಗೆ ಹೋಗಿ ತಮಟೆ ಬಾರಿಸಿದ್ದರು. ಎಲ್ಲರಿಗೂ ವಿದ್ಯುತ್ ಉಚಿತ ಅಂದಿದ್ದರು. ಕೆಎಸ್ಸಾರ್ಟಿಸಿಗೆ ಇನ್ನೂ ಮಾಹಿತಿ ಬಂದಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ತಲೆ ಮೇಲೆ ಟೋಪಿ ಹಾಕಿ ಕೊಂಡವರನ್ನು ಕಾಂಗ್ರೆಸ್ ನವರು ಎನ್ನುತ್ತಿದ್ದರು. ಈಗ ಕಾಂಗ್ರೆಸ್ ನವರನ್ನು ಜನರಿಗೆ ಟೋಪಿ ಹಾಕುವವರು ಎನ್ನುತ್ತಾರೆ ಎಂದು ಛೇಡಿಸಿದರು.