ಗ್ರಂಥಾಲಯ ಜ್ಞಾನಾರ್ಜನೆಗೂ ಸಹಕಾರಿ: ಶಿವರಾಜ್‌ಕುಮಾರ್

Spread the love

ಗ್ರಂಥಾಲಯ ಜ್ಞಾನಾರ್ಜನೆಗೂ ಸಹಕಾರಿ: ಶಿವರಾಜ್‌ಕುಮಾರ್

ಮೈಸೂರು: ಇಂದಿನ ಮಕ್ಕಳಿಗೆ ಗ್ರಂಥಾಲಯದ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಇದರಿಂದ ಓದಿನ ಆಸಕ್ತಿ ಬೆಳೆಯುತ್ತದೆ, ಜ್ಞಾನಾರ್ಜನೆಗೂ ಸಹಕಾರಿಯಾಗುತ್ತದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹೇಳಿದರು.

ನಗರದ ನಂಜನಗೂಡು ರಸ್ತೆಯಲ್ಲಿನ ಶಕ್ತಿಧಾಮದಲ್ಲಿ ಕಲಿಸು ಪ್ರತಿಷ್ಠಾನ ಆರಂಭಿಸಿರುವ 75ನೇ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಪುಸ್ತಕ ಆತ್ಮೀಯ ಸ್ನೇಹಿತರಾಗಬೇಕು. ಈ ಸ್ನೇಹಿತ ನಿಮ್ಮನ್ನು ಜಾಣರಾಗಿ ಮತ್ತು ಬುದ್ಧಿವಂತರನ್ನಾಗಿ ಮಾಡುತ್ತದೆ. ಶಕ್ತಿಧಾಮದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮಕ್ಕಳ ಕಲಿಕೆಗೆ ಈ ಗ್ರಂಥಾಲಯ ಸಾಕಷ್ಟು ಸಹಾಯ ಮಾಡುತ್ತದೆ ಎಂದರು.

ಗ್ರಂಥಾಲಯವನ್ನು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿ ಮಾತನಾಡಿ, ಡಾ.ರಾಜ್‌ಕುಮಾರ್ ಪರಿವಾರ ಚಲನಚಿತ್ರ ಕ್ಷೇತ್ರವಷ್ಟೇ ಅಲ್ಲದೇ ಸಮಾಜದ ಒಳಿತಿಗೂ ಸಾಕಷ್ಟು ಕೊಡುಗೆಗಳನ್ನು ನೀಡುತ್ತಲೇ ಬರುತ್ತಿದೆ. ಇದೀಗ ಶಕ್ತಿಧಾಮದ ಮೂಲಕವೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಶ್ರಮಿಸಲಾಗುತ್ತಿದೆ. ಹಾಗಾಗಿ ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಬಳಿಕ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಕ್ಕಳೊಂದಿಗೆ ಸಂವಾದ ನಡೆಸಿದರು. ನಿಮ್ಮ ಬಾಲ್ಯ ಹೇಗಿತ್ತು? ನಿಮ್ಮ ಶಿಕ್ಷಣ, ಇಷ್ಟವಾದ ವಿಷಯ ಯಾವುದು? ಪರೀಕ್ಷೆ ಹೇಗೆ ಎದರಿಸುತ್ತಿದ್ದಿರಿ? ಇಷ್ಟವಾದ ನಗರ ಯಾವುದು? ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಎಂದು ವಿದ್ಯಾರ್ಥಿನಿಯರು ಪ್ರಶ್ನೆಗಳ ಸುರಿಮಳೆಗೈದರು. ಎಲ್ಲ ಪ್ರಶ್ನೆಗಳಿಗೂ ಯದುವೀರ್ ನಗುತ್ತಲೇ ಉತ್ತರಿಸಿದರು.

ಸದ್ಯ ಶಕ್ತಿಧಾಮ ಮೊದಲ ಮಹಡಿಯಲ್ಲಿ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ. ಗೋಡೆಗಳ ಸುತ್ತ ಕಲಾವಿದ ಶ್ಯಾಮ್ ಗಿಡ, ಮರ, ಪಕ್ಷಿಗಳ ಚಿತ್ತಾರ ಮೂಡಿಸಿ ಆಕರ್ಷಕಗೊಳಿಸಿದ್ದಾರೆ. ಸದ್ಯ 400 ಪುಸ್ತಕಗಳನ್ನು 4ರಾಕ್ ನಲ್ಲಿ ಜೋಡಿಸಲಾಗಿದೆ. ಕಥೆ, ಕಾದಂಬರಿ, ಪಠ್ಯಪುಸ್ತಕ, ಸಾಮಾನ್ಯ ಜ್ಞಾನ, ಅರ್ಥಶಾಸ್ತ್ರ, ಇತಿಹಾಸ ಸೇರಿದಂತೆ ಹಲವು ಪುಸ್ತಕಗಳು ಗ್ರಂಥಾಲಯದಲ್ಲಿವೆ.


Spread the love