ಗ್ರಾಪಂ ಮತ ಎಣಿಕೆಗೆ ಸಕಲ ಸಿದ್ದತೆ – ವಿಜಯೋತ್ಸವಕ್ಕೆ ಅವಕಾಶವಿಲ್ಲ – ಜಿಲ್ಲಾಧಿಕಾರಿ ಜಿ ಜಗದೀಶ್

Spread the love

ಗ್ರಾಪಂ ಮತ ಎಣಿಕೆಗೆ ಸಕಲ ಸಿದ್ದತೆ – ವಿಜಯೋತ್ಸವಕ್ಕೆ ಅವಕಾಶವಿಲ್ಲ – ಜಿಲ್ಲಾಧಿಕಾರಿ ಜಿ ಜಗದೀಶ್

ಉಡುಪಿ: ಎರಡು ಹಂತಗಳಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯ ಮತಗಳ ಎಣಿಕೆ ಡಿಸೆಂಬರ್ 30ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು.

ಅವರು ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಜಿಲ್ಲೆಯ ಏಳು ತಾಲೂಕು ಕೇಂದ್ರಗಳಾದ ಉಡುಪಿ – ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆ, ಬ್ರಹ್ಮಾವರ – ಎಸ್ ಎಂ ಎಸ್ ಪದವಿಪೂರ್ವ ಕಾಲೇಜು, ಬೈಂದೂರಿನ ಸರಕಾರಿ ಪದವಿ ಪೂರ್ವ ಕಾಲೇಜು, ಹೆಬ್ರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜು, ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕಾಪುವಿನ ದಂಡತೀರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ ಎಂದರು.

ಜಿಲ್ಲೆಯ 150 ಗ್ರಾಮ ಪಂಚಾಯತ್ ಗಳ ಮತ ಎಣಿಕೆ ಕಾರ್ಯಕ್ಕೆ ಒಟ್ಟು 948 ಸಿಬಂದಿಗಳನ್ನು ನಿಯೋಜಿಸಲಾಗಿದ್ದು ಒಟ್ಟು 863 ಚುನಾವಣಾ ಕ್ಷೇತ್ರಗಳ ಮತ ಎಣಿಕೆಗೆ 284 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ.

ಮತ ಎಣಿಕೆ ಕೇಂದ್ರದಲ್ಲಿ ಆಯಾ ಗ್ರಾಮ ಪಂಚಾಯತ್ ಗಳ ಚುನಾವಣೆಯ ಕಣದಲ್ಲಿರುವ ಅಭ್ಯರ್ಥಿ ಅಥವಾ ಅವರ ಮತ ಎಣಿಕೆ ಏಜೆಂಟರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಮತ ಎಣಿಕೆ ಪಾಸನ್ನು ಆಯಾ ಅಭ್ಯರ್ಥಿಗಳು ತಹಶೀಲ್ದಾರರಿಂದ ಅಧಿಕೃತ ಅರ್ಜಿಯನ್ನು ನೀಡಿ ಮುಂಗಡವಾವಿ ಪಡೆಯುವುದು, ಅಧಿಕೃತ ಪಾಸು ಹೊಂದಿಲ್ಲದಿದ್ದಲ್ಲಿ ಪ್ರವೇಶವನ್ನು ನಿರಾಕರಿಸಲಾಗುವುದು ಎಂದು ಅವರು ಹೇಳಿದರು.

ಮತ ಎಣಿಕೆ ಸಿಬಂದಿಗಳನ್ನು ಗಣಕೀಕೃತ ರ್ಯಾಂಡಮೈಜೆಶನ್, ಮೂಲಕ ಆಯಾ ಟೇಬಲ್ ಗಳಿಗೆ ನಿಯೋಜಿಸಲು ವ್ಯವಸ್ಥೆ ಮಾಡಲಾಗಿದ್ದು ಡಿಸೆಂಬರ್ 30 ರ ಬೆಳಿಗ್ಗೆ 7 ಗಂಟೆಗೆ ಮತ ಎಣಿಕೆ ಕೇಂದ್ರದಲ್ಲಿ ಪ್ರಕಟಿಸಲಾಗುವುದು. ಮತ ಎಣಿಕೆ ಕೇಂದ್ರದ ಸುತ್ತಲು 200 ಮೀಟರ್ ವ್ಯಾಪ್ತಿಗೆ ನಿರ್ಬಂಧಕಾಜ್ಞೆಯನ್ನು ವಿಧಿಸಲಾಗಿದ್ದು, ಯಾವುದೇ ರೀತಿಯ ವಿಜಯೋತ್ಸವ ಆಚರಿಸುವುದನ್ನು ನಿಷೇಧಿಸಲಾಗಿದೆ. ಮತ ಎಣಿಕೆ ಕೇಂದ್ರದ ಒಳಗೆ ಹಾಗೂ ಒಳಗೆ ಹಾಗೂ ಹೊರಗೆ ಪೊಲೀಸ್ ಬಂದೋಬಸ್ತನ್ನು ಮಾಡಲಾಗಿದೆ. ಮತಎಣಿಕೆ ಕೇಂದ್ರದೊಳಗೆ ಮೊಬೈಲ್ ನಿಷೇಧಿಸಲಾಗಿದೆ. ಎಣಿಕೆ ಕೇಂದ್ರಕ್ಕೆ ಹಾಜರಾಗುವ ಅಭ್ಯರ್ಥಿಗಳ ಅಥವಾ ಏಜೆಂಟರು ಪಾಸ್ ಪಡೆದಿರುವುದು ಕಡ್ಡಾಯವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ನವೀನ್ ಭಟ್ ಉಪಸ್ಥಿತರಿದ್ದರು.


Spread the love