ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ಅಗತ್ಯ:ಅತೀಕ್

Spread the love

ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ಅಗತ್ಯ:ಅತೀಕ್

ಮೈಸೂರು: ಗ್ರಾಮೀಣ ಭಾಗದಲ್ಲಿ ಇಂದಿಗೂ ಶೌಚಾಲಯವನ್ನು ಬಳಸುತ್ತಿಲ್ಲ. ಕಸವನ್ನು ಕೆರೆ, ಕಾಲುವೆ ಸೇರಿದಂತೆ ಖಾಲಿ ಜಮೀನು, ನಿವೇಶನಗಳಲ್ಲಿ ಎಸೆದು ಹೋಗುತ್ತಿದ್ದ್ದಾರೆ. ಹೀಗಾಗಿ ಗ್ರಾಮೀಣ ಜನರಿಗೆ ಇದರ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಸ್ವಚ್ಛ ಭಾರತ್ ಮಿಷನ್ ಮತ್ತು ಜಲ ಜೀವನ್ ಮಿಷನ್ ಯೋಜನೆಯ ಕಾರ್ಯಾಗಾರ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮನೆಗಳಲ್ಲಿ ಶೌಚಾಲಯಗಳಿದ್ದರೂ ಮಹಿಳೆಯರು ಮಾತ್ರ ಬಳಸುತ್ತಿದ್ದಾರೆ. ಬಹುತೇಕ ಮಂದಿ ಇಂದಿಗೂ ಬಯಲು ಪ್ರದೇಶದ ಕಡೆ ಹೋಗುತ್ತಿದ್ದಾರೆ. ಅಂತಹವರನ್ನು ಆಯಾ ಗ್ರಾಮದ ಜನರಿಂದಲೇ ಮಾಹಿತಿ ಪಡೆದುಕೊಳ್ಳಬೇಕು. ಸ್ವಚ್ಛತೆಯ ಬಗ್ಗೆ ಹಾಗೂ ಶೌಚಾಲಯದ ಉಪಯೋಗದ ಬಗ್ಗೆ ಅವರಿಗೆ ಮಾಹಿತಿ ನೀಡಬೇಕು. ಕಸವನ್ನು ಎಲ್ಲೆಂದರಲ್ಲಿ ಸುರಿಯುವದರಿಂದ ರೋಗಗಳು ಶೀಘ್ರವಾಗಿ ಹರುಡುತ್ತವೆ. ಹೀಗಾಗಿ ಕಸದ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಶೌಚಾಲಯ ರಹಿತ ಕುಟುಂಬಗಳನ್ನು ಗುರುತಿಸಿಬೇಕು. ಕುಟುಂಬಗಳ ವಿಭಜನೆಯಿಂದಾಗಿ ಹೊಸ ಕುಟುಂಬಗಳು ಅಸ್ತಿತ್ವಕ್ಕೆ ಬಂದಿರುತ್ತವೆ. ಹೊಸ ಮನೆಗಳು ನಿರ್ಮಾಣವಾಗಿರುತ್ತವೆ. ಅಂತಹವರು ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಂಡಿರುತ್ತಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕು. ಶೌಚಾಲಯಗಳ ನಿರ್ಮಾಣಕ್ಕಾಗಿ ನಾಗರೀಕ ಆಪ್ ಮೂಲಕ ಅರ್ಜಿಗಳನ್ನು ಪಡೆದು ಶೌಚಾಲಯಗಳ ನಿರ್ಮಾಣಕ್ಕೆ ಮಂಜೂರು ಮಾಡಲಾಗುತ್ತದೆ ಎಂದು ತಿಳಿಸಿದರು.

ಕಸಗಳಲ್ಲಿ ಯಾವುದು ಒಣ ಕಸ ಮತ್ತು ಹಸಿ ಕಸ ಎಂದು ತಿಳಿಸುವುದರ ಜೊತೆಗೆ, ಅವುಗಳನ್ನು ಯಾವ ರೀತಿ ಬೇರ್ಪಡಿಸಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸಬೇಕು. ಇಂತಹ ಕೆಲಸವನ್ನು ಅಲ್ಲಿನ ಮಹಿಳಾ ಸ್ವ ಸಹಾಯ ಸಂಘಗಳ ಮೂಲಕ ಮಾಡಿಸಬೇಕು. ಕಸವನ್ನು ಪ್ರತಿನಿತ್ಯ ವಾಹನಗಳ ಮೂಲಕ ಸಂಗ್ರಹ ಮಾಡಲಾಗುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಶೌಚಾಲಯ ಮತ್ತು ಅಡುಗೆ ಮನೆಯಿಂದ ಬರುವ ನೀರು ಕಲುಷಿತ ನೀರನ್ನು ಗ್ರೇ ವಾಟರ್ ಎಂದು ಕರೆಯಲಾಗುತ್ತದೆ. ಹೆಚ್ಚಿನ ಮಟ್ಟದಲ್ಲಿ ಆ ನೀರು ಸಂಗ್ರಹವಾದರೆ ಆ ನೀರು ಬ್ಲಾಕ್ ವಾಟರ್ ಆಗಿ ಪರಿವರ್ತನೆಯಾಗುತ್ತದೆ ಎಂದರು. ಇಂತಹ ಸಮಸ್ಯೆಯನ್ನು ಪರಿಹರಿಸಲು ಗ್ರಾಮೀಣಾ ಭಾಗದಲ್ಲಿ ಸೌಲಭ್ಯವಿರುವುದಿಲ್ಲ. ಇದಕ್ಕಾಗಿ ಸರಿಯಾದ ಹಾಗೂ ಸೂಕ್ತ ಕ್ರಮದಲ್ಲಿ ನೀರು ಹೋಗುವ ರೀತಿ ಚರಂಡಿಯನ್ನು ನಿರ್ಮಿಸಬೇಕು ಅಥವಾ ಇಂಗು ಗುಂಡಿಗಳನ್ನು ನಿರ್ಮಿಸಬೇಕು ಎಂದು ಹೇಳಿದರು.

ಹಳ್ಳಿಗಳು ಸ್ವಚ್ಚವಾಗಿ ಕಾಣಬೇಕು. ಸ್ವಚ್ಛತೆಗಾಗಿ ಅಭಿಯಾನವನ್ನು ಆರಂಭಿಸಬೇಕು. ಇದಕ್ಕಾಗಿ ಸ್ವಚ್ಛ ಶನಿವಾರ ಎಂಬ ಪರಿಕಲ್ಪನೆಯನ್ನು ತರಲಾಗಿದೆ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಆಯುಕ್ತರಾದ ಗಂಗಾಧರ್, ಮೈಸೂರು ಜಿಲ್ಲಾ ಕಾರ್ಯದರ್ಶಿ ಕೃಷ್ಣರಾಜು ಸೇರಿದಂತೆ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here