ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನರ್ಮ್ ಬಸ್ ಆರಂಭಿಸಲು ರಮೇಶ್ ಕಾಂಚನ್ ಮನವಿ

Spread the love

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನರ್ಮ್ ಬಸ್ ಆರಂಭಿಸಲು ರಮೇಶ್ ಕಾಂಚನ್ ಮನವಿ

ಉಡುಪಿ: ಜಿಲ್ಲಾದ್ಯಂತ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನರ್ಮ್ ಬಸ್ಗಳನ್ನು ಪುನರಾರಂಭಿಸಿ ಹೆಚ್ಚಿನ ಬಸ್ಗಳನ್ನು ಒದಗಿಸುವ ಬಗ್ಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ  ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮನವಿ ಮಾಡಿದರು.

ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಮಾಡುತ್ತಿರುವುದರಿಂದ ಜಿಲ್ಲೆಯ ಮಹಿಳೆಯರು ಈ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಉಡುಪಿ ನಗರಪ್ರದೇಶದಲ್ಲಿ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ 40ಕ್ಕೂ ಅಧಿಕ ಸರಕಾರಿ ನರ್ಮ್ ಬಸ್ಸುಗಳನ್ನು ಗ್ರಾಮೀಣ ಪ್ರದೇಶದಲ್ಲಿ ಓಡಾಟ ನಡೆಸುವ ನಿಟ್ಟಿನಲ್ಲಿ ಆರಂಭಿಸಿತ್ತು. ಇದರಲ್ಲಿ ಶಾಲೆಯ ವಿದ್ಯಾರ್ಥಿಗಳು ಮತ್ತು ಮಹಿಳೆಯರು ದಿನನಿತ್ಯ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದರು.

ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್ಸುಗಳ ಭರಾಟೆ ಮತ್ತು ಲಾಭಿಯಿಂದಾಗಿ ಕೊರೋನಾ ಸಮಯದಲ್ಲಿ ಹೆಚ್ಚಿನ ಸರಕಾರಿ ನರ್ಮ್ ಬಸ್ಸುಗಳು ತಮ್ಮ ಸಂಚಾರವನ್ನು ನಿಲ್ಲಿಸಿದ್ದು ಇಂದಿಗೂ ಕೂಡ ಮತ್ತೆ ಸಂಚಾರ ಆರಂಭಿಸಿಲ್ಲ. ಉಡುಪಿ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ನರ್ಮ್ ಬಸ್ಸುಗಳ ಸಂಚಾರದಿಂದ ಜನರಿಗೆ ಹೆಚ್ಚಿನ ಅನೂಕೂಲವಾಗುತ್ತದೆ. ಇಂದಿಗೂ ಹಲವಾರು ಗ್ರಾಮಾಂತರ ಪ್ರದೇಶದಲ್ಲಿ ಖಾಸಗಿ ಬಸ್ಸುಗಳೂ ಸಹ ಸಂಚರಿಸದ ಪರಿಸ್ಥಿತಿ ಇದೆ. ಈಗಾಗಲೇ ನಿಂತಿರುವ ನರ್ಮ್ ಬಸ್ಸುಗಳನ್ನು ಮತ್ತೆ ಆರಂಭಿಸಿದ್ದಲ್ಲಿ ಇದರಿಂದ ಮಹಿಳಾ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನೂಕೂಲವಾಗುತ್ತದೆ. ಇದರೊಂದಿಗೆ ಜಿಲ್ಲೆಯ ವಿವಿಧ ಭಾಗಗಳಿಗೆ ಹೆಚ್ಚಿನ ಸರಕಾರಿ ಬಸ್ಸುಗಳನ್ನು ಆರಂಭಿಸಿದ್ದಲ್ಲಿ ಇದರಿಂದ ಜನರಿಗೆ ಸರಕಾರದ ಯೋಜನೆಯ ಪ್ರಯೋಜನ ಪ್ರಾಮಾಣಿಕವಾಗಿ ತಲುಪಿದಂತಾಗುತ್ತದೆ.

ಈ ನಿಟ್ಟಿನಲ್ಲಿ ಸಾರಿಗೆ ಸಚಿವರ ಗಮನಕ್ಕೆ ಈ ವಿಷಯವನ್ನು ತಂದು ಅವರ ಮೂಲಕ ಸರಕಾರಕ್ಕೆ ಮನವರಿಕೆ ಮಾಡಿ ಜಿಲ್ಲೆಯಲ್ಲಿ ಈಗಾಗಲೇ ಓಡಾಟ ನಿಲ್ಲಿಸಿರುವ ನರ್ಮ್ ಬಸ್ಸುಗಳು ಮತ್ತೆ ಸಂಚಾರ ಆರಂಭಿಸುವಂತೆ ಹಾಗೂ ಹೊಸ ಸರಕಾರಿ ಬಸ್ಸುಗಳನ್ನು ಒಡಿಸುವಂತೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಈ ಮೂಲಕ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಗಣೇಶ್ ನೆರ್ಗಿ, ಸತೀಶ್ ಕುಮಾರ್ ಮಂಚಿ, ಭರತ್ ಮಣಿಪಾಲ್, ಸದಾನಂದ್ ಮೂಲ್ಯ, ಕೃಷ್ಣಮೂರ್ತಿ ಆಚಾರ್ಯ, ಸುಕನ್ಯಾ ಪೂಜಾರಿ, ವಿಘ್ನೇಶ್ ಕಿಣಿ ಹಾಗೂ ಹಲವರು ಉಪಸ್ಥಿತರಿದ್ದರು


Spread the love