ಚಡ್ಡಿ ಹೊತ್ಕೊಂಡು ಬಂದು ಪ್ರತಿಭಟನೆ ಮಾಡುವಾಗ ಕೊರೋನಾ ಇರಲಿಲ್ಲವಾ? ನಮಗೆ ಮಾತ್ರ ಕೊರೋನಾ ರೂಲ್ಸಾ: ಸಿದ್ದರಾಮಯ್ಯ

Spread the love

ಚಡ್ಡಿ ಹೊತ್ಕೊಂಡು ಬಂದು ಪ್ರತಿಭಟನೆ ಮಾಡುವಾಗ ಕೊರೋನಾ ಇರಲಿಲ್ಲವಾ? ನಮಗೆ ಮಾತ್ರ ಕೊರೋನಾ ರೂಲ್ಸಾ: ಸಿದ್ದರಾಮಯ್ಯ

ಬೆಂಗಳೂರು: ಮೊದಲು ಬಿಜೆಪಿಯವರ ಮೇಲೆ ಕೇಸು ಹಾಕಲಿ, ಆರ್ ಎಸ್ಎಸ್ ಚಡ್ಡಿ ಬಗ್ಗೆ ಮಾತನಾಡಿದ್ದಾಗ ಬಿಜೆಪಿ ಕಾರ್ಯಕರ್ತರು ನಮ್ಮ ಮನೆ ಮುಂದೆ ಬಂದು ಪ್ರತಿಭಟನೆ ಮಾಡುವಾಗ ಕೊರೋನಾ ಇರಲಿಲ್ಲವಾ? ಕಾಂಗ್ರೆಸ್ ನವರು ಮಾತ್ರ ಪ್ರತಿಭಟನೆ, ರ್ಯಾಲಿ ಮಾಡಿದರೆ ಕೊರೋನಾ ಹೆಚ್ಚಾಗುತ್ತಾ, ಅದು ಕೋರ್ಟ್ ಆದೇಶ, ಕೊರೋನಾ ನಿಯಮ ಉಲ್ಲಂಘನೆಯಲ್ಲವೇ, ಬಿಜೆಪಿಯವರು ಕಾರಣವಾಗಲ್ಲವೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿಂದು ರಾಹುಲ್ ಗಾಂಧಿಯವರ ಇಡಿ ವಿಚಾರಣೆಯನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ರಾಜಭವನ ಚಲೋ ಹಮ್ಮಿಕೊಂಡಿದ್ದು ಸಾವಿರಾರು ಕಾರ್ಯಕರ್ತರು ಸೇರಿ ಪ್ರತಿಭಟನೆ, ರಾಜಭವನ ಚಲೋ ನಡೆಸುತ್ತಿದ್ದಾರೆ. ಇದು ಕೊರೋನಾ ನಿಯಮ ಉಲ್ಲಂಘನೆಯಾಗುತ್ತದೆ, ಕೊರೋನಾ ಹೆಚ್ಚಾಗುತ್ತದೆ ಎಂದು ಆರೋಗ್ಯ ಸಚಿವ ಡಾ ಸುಧಾಕರ್ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಹತ್ಯೆಯಾಗುತ್ತಿದ್ದರೂ ನಾವು ಸುಮ್ಮನಿರಬೇಕಾ? ತುರ್ತು ಪರಿಸ್ಥಿತಿಯ ವಾತಾವರಣ ಇದ್ದರೂ ಸುಮ್ಮನಿರಬೇಕೆ, ಪ್ರಜಾಪ್ರಭುತ್ವದ ಹಕ್ಕು ದಮನ ಆಗುತ್ತಿದ್ದರೂ ಸುಮ್ಮನಿರಬೇಕಾ, ಸಂವಿಧಾನ ತಿದ್ದುಪಡಿ ಪರಿಚ್ಛೇದ 19ರ ತಿದ್ದುಪಡಿ ಮಾಡಿದ್ದಾರೆಯೇ, ವಿರೋಧ ಪಕ್ಷವನ್ನು ಹತ್ತಿಕ್ಕಲು ಬಿಜೆಪಿಯವರು ಹೊರಟಿದ್ದಾರೆ, ಇದಕ್ಕೆಲ್ಲ ಕಾಂಗ್ರೆಸ್ ಪಕ್ಷ ಹೆದರುವುದಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಈ ದೇಶಕ್ಕೆ ತ್ಯಾಗ ಮಾಡಿದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರ ವಿರುದ್ಧ ಇಂದು ಕೇಂದ್ರ ಸರ್ಕಾರ ಷಡ್ಯಂತ್ರ ನಡೆಸುತ್ತಿದೆ. ಇಂದು ಇಡಿ, ಸಿಬಿಐ, ಸಿಐಡಿ, ಎನ್ ಐಎ ಎಲ್ಲವೂ ಬಿಜೆಪಿಯ ಕೈಗೊಂಬೆಯಾಗಿ ವರ್ತಿಸುತ್ತಿವೆ. ಬಿಜೆಪಿ ಇಂದು ಕಾಂಗ್ರೆಸ್ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ. ನಮ್ಮ ಪಕ್ಷ ಇವರ ಯಾವ ಬೆದರಿಕೆಗೂ ಬಗ್ಗುವುದಿಲ್ಲ, ತೊಂದರೆ ಕೊಡುತ್ತೀರಾ ಕೊಡಿ, ಜೈಲಿಗೆ ಹಾಕುತ್ತೀರಾ ಹಾಕಿ, ಬಿಜೆಪಿಯ ಕುತಂತ್ರ ವಿರುದ್ಧ ಜನರ ಗಮನ ಸೆಳೆಯಲು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಇನ್ನು ಕೆಲವೇ ಹೊತ್ತಿನಲ್ಲಿ ರಾಜಭವನ ಮುತ್ತಿಗೆ ಹಾಕುತ್ತೇವೆ ಎಂದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ನಾಯಕ ರಾಮಲಿಂಗಾ ರೆಡ್ಡಿ, ರಾಹುಲ್ ಗಾಂಧಿಯವರ ಮೇಲೆ ಸತತ ಇಡಿ ವಿಚಾರಣೆ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಕುಮ್ಮಕ್ಕು ಇದೆ, ಅವರ ಕೈವಾಡವಿಲ್ಲದೆ ಇದು ಆಗಲು ಸಾಧ್ಯವಿಲ್ಲ. ಇದು ದೌರ್ಜನ್ಯದ ಪರಾಕಾಷ್ಠೆ ಎಂದರು.


Spread the love