ಚತುಷ್ಪತ ಅವ್ಯವಸ್ಥೆ ಆಡಳಿತ ವರ್ಗದ ಘೋರ ವೈಫಲ್ಯ: ಸುರೇಶ್ ಕಲ್ಲಾಗರ ಕಿಡಿ

Spread the love

ಚತುಷ್ಪತ ಅವ್ಯವಸ್ಥೆ ಆಡಳಿತ ವರ್ಗದ ಘೋರ ವೈಫಲ್ಯ: ಸುರೇಶ್ ಕಲ್ಲಾಗರ ಕಿಡಿ

ಕುಂದಾಪುರ: ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಅವೈಜಾÐನಿಕ ಕಾಮಗಾರಿಯಿಂದಾಗಿ ನೂರು ಮೀಟರ್ ಕ್ರಮಿಸಬೇಕಾದ ಪಾದಚಾರಿಗಳು ಇದೀಗ ಎರಡು ಕಿ.ಮೀ ಕ್ರಮಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಹೆದ್ದಾರಿ ಕಾಮಗಾರಿ ಆರಂಭವಾದ ದಿನದಿಂದಲೂ ಸ್ಥಳೀಯ ನಿವಾಸಿಗಳು, ಸವಾರರು, ಪಾದಚಾರಿಗಳು ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ಇದು ಗುತ್ತಿಗೆ ಕಂಪೆನಿಯ ವೈಫಲ್ಯವಲ್ಲ. ಬದಲಾಗಿ ಇದು ಜಿಲ್ಲಾಡಳಿತ, ಶಾಸಕ, ಸಂಸದರು, ಆಡಳಿತ ವರ್ಗಗಳ ಘೋರ ವೈಫಲ್ಯ ಎಂದು ಡಿವೈಎಫ್ಐನ ತಾಲೂಕು ಉಪಾಧ್ಯಕ್ಷ ಸುರೇಶ್ ಕಲ್ಲಾಗರ ಜನಪ್ರತಿನಿಧಿಗಳ ಬೇಜವಾಬ್ದಾರಿತನದವಿರುದ್ದ ಕಿಡಿಕಾರಿದರು.

ಅವರು ಇಲ್ಲಿನ ಟಿಟಿ ರಸ್ತೆ ಹಾಗೂ ಬಸ್ರೂರು ಮೂರುಕೈ ಬಳಿ ನಿರ್ಮಾಣಗೊಂಡ ಅಂಡರ್ಪಾಸ್ನಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಹಾಗೂ ಬೊಬ್ಬರ್ಯನಕಟ್ಟೆ ಬಳಿ ಪಾದಚಾರಿ ಮಾರ್ಗ ನಿರ್ಮಿಸಬೇಕೆಂದು ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಕುಂದಾಪುರ ತಾಲೂಕು ಸಮಿತಿ ಹಮ್ಮಿಕೊಂಡ ಬೃಹತ್ ಪಾದಯಾತ್ರೆ ಹಾಗೂ ಧರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಚತುಷ್ಪತ ಹೆದ್ದಾರಿಯ ರೂಪುರೇಷೆಗಳ ಕುರಿತು ಸಾರ್ವಜನಿಕರು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಅರ್ಜಿ ಹಾಕಿದರೆ ಆ ಅರ್ಜಿ ತಿರಸ್ಕøತಗೊಳ್ಳುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವುದೇ ಮಾಹಿತಿಯನ್ನು ಸಾರ್ವಜನಿಕರಿಗೆ ಕೊಡುತ್ತಿಲ್ಲ. ಚತುಷ್ಪತ ಹೆದ್ದಾರಿ ಕಾಮಗಾರಿ ಮಾಡುತ್ತಿರುವುದು ಜನರ ಒಳಿತಿಗಾಗಿ ಅಲ್ಲ. ಬದಲಾಗಿ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿರುವ ಖಾಸಗಿ ಕಂಪೆನಿಯ ಒಳಿತಿಗಾಗಿ ಎನ್ನುವುದು ಬಹಳ ಸ್ಪಷ್ಟವಾಗಿದೆ. ಜನಸಾಮಾನ್ಯರ ಕಷ್ಟಗಳ ಬಗ್ಗೆ ಅರಿವಿಲ್ಲದವರು ಇವತ್ತು ನಮ್ಮನ್ನಾಳುತ್ತಿದ್ದಾರೆ. ಬೊಬ್ಬರ್ಯನಕಟ್ಟೆ ಬಳಿ ಇರುವ ತಾತ್ಕಾಲಿಕ ಪಾದಚಾರಿ ಮಾರ್ಗವನ್ನು ಬಂದ್ ಮಾಡುವ ಮೊದಲು ಈಗಾಗಲೇ ನಿರ್ಮಾಣಗೊಂಡಿರುವ ಬಸ್ರೂರು ಮೂರುಕೈ ಹಾಗೂ ಟಿಟಿ ರಸ್ತೆಯಲ್ಲಿರುವ ಅಂಡರ್ ಪಾಸ್ ಅನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಮುಕ್ತ ಅವಕಾಶವನ್ನು ಕೊಡಬೇಕಿತ್ತು. ಎರಡೂ ಅಂಡರ್ಪಾಸ್ಗಳನ್ನು ಬಂದ್ ಮಾಡಿ, ತಾತ್ಕಾಲಿಕ ಪಾದಚಾರಿ ಮಾರ್ಗವನ್ನು ಬಂದ್ ಮಾಡಿರುವುದು ಸರಿಯಾದ ನಡೆಯಲ್ಲ. ಇದರಿಂದ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಸರ್ಕಾರಿ ಕಚೇರಿಗಳಿಗೆ ತೆರಳುವುವವರು, ಪಾರ್ಕ್ಗಳಿಗೆ ಹೋಗುವವರು ಎರಡು ಕಿ.ಮೀ ಸುತ್ತುವರಿದು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕೂಡಲೇ ಜನಸಾಮಾನ್ಯರ ಕಷ್ಟಗಳನ್ನು ಅರಿತು ಎರಡೂ ಅಂಡರ್ ಪಾಸ್ಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಮುಕ್ತ ಅವಕಾಶವನ್ನು ಕೊಡಬೇಕು. ಜೊತೆಗೆ ಬೊಬ್ಬರ್ಯನಕಟ್ಟೆ ಬಳಿ ಪಾದಚಾರಿ ಮಾರ್ಗ ನಿರ್ಮಿಸಬೇಕು ಎಂದು ಸುರೇಶ್ ಕಲ್ಲಾಗರ ಆಗ್ರಹಿಸಿದರು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಮಾತನಾಡಿ, ಸರ್ಕಾರ ಹಿಂದೆ ಮನಸ್ಸು ಮಾಡಿದ್ದರೆ ಬೆಂಗಳೂರಿನಂತಹ ಮಹಾನಗರಗಳಲ್ಲಿ ಮಾಡುವಂತೆ ಕೆಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ವಿನಾಯಕದ ತನಕವೂ ಮೇಲ್ಸೇತುವೆ ಮಾಡಬಹುದಿತ್ತು. ಈಗ ಇಲ್ಲಿ ಜನರಿಗಾಗುತ್ತಿರುವ ಸಮಸ್ಯೆಗಳ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಅನಗತ್ಯವಾಗಿ ಸಾಕಷ್ಟು ಕಿ.ಮೀ.ಸಂಚರಿಸಬೇಕಾಗಿದೆ. ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ, ಸಂಬಂಧಪಟ್ಟ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಈ ಸ್ಥಿತಿ ನಿರ್ಮಾಣವಾಗಿದೆ. ಸಂಸದರು ಒಂದು ವಾರ ಇಲ್ಲಿ ಇದ್ದು ಖುದ್ದಾಗಿ ಅವರೇ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವಂತೆ ಜನ ಪಟ್ಟು ಹಿಡಿಯಬೇಕಾಗಿದೆ ಎಂದರು.

ಪುರಸಭೆ ಸದಸ್ಯ ಚಂದ್ರಶೇಖರ ಖಾರ್ವಿ ಮಾತನಾಡಿ, ಈ ಹಿಂದೆ ನಡೆದ ಪ್ರಾಧಿಕಾರದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾ.31 ಕ್ಕೆ ಈ ಕಾಮಗಾರಿ ಪೂರ್ಣಗೊಳ್ಳಲಿ ಎಂದು ಹೇಳಿದ್ದಾರೆ. ಮೇಲ್ಸೆತುವೆಯ ಉದ್ಘಾಟನೆಗೆ ಮಾ. 31 ರಂದು ನಾವು ತಳಿರು ತೋರಣ ಕಟ್ಟಿ ಸಿದ್ಧರಾಗುತ್ತಿದ್ದೇವೆ ಎಂದವರು ಹೇಳಿದರು.

ಪ್ರತಿಭಟನೆಯಲ್ಲಿ ಸಿಐಟಿಯುನ ಜಿಲ್ಲಾಧ್ಯಕ್ಷ ಕೆ.ಶಂಕರ್, ತಾಲೂಕು ಅಧ್ಯಕ್ಷ ಎಚ್. ನರಸಿಂಹ ಮಾತನಾಡಿದರು.

ಬೇಡಿಕೆ ಈಡೇರಿಕೆಗೆ ಎಸಿಗೆ ಮನವಿ

ಎರಡು ಅಂಡರ್ಪಾಸ್ಗಳನ್ನು ಜನರಿಗೆ ಅನುಕೂಲವಾಗುವಂತೆ ಕೂಡಲೇ ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕು ಹಾಗೂ ಬೊಬ್ಬರ್ಯನ ದೈವಸ್ಥಾನ ಬಳಿ ಪಾದಚಾರಿ ಮಾರ್ಗ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿ ಡಿವೈಎಫ್ಐ ಹಮ್ಮಿಕೊಂಡಿದ್ದ ಧರಣಿ ಸ್ಥಳಕ್ಕೆ ಕುಂದಾಪುರ ಎಸಿ ಸೂಚನೆ ಮೇರೆಗೆ ಉಪ ತಹಶೀಲ್ದಾರ್ ಕೆ. ಶಂಕರ್ ಆಗಮಿಸಿ ಮನವಿ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು ನಿಮ್ಮ ಬೇಡಿಕೆಗಳನ್ನು ಎಸಿಯವರ ಗಮನಕ್ಕೆ ತಂದು, ಆದಷ್ಟು ಶೀಘ್ರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುವ ಭರವಸೆ ನೀಡಿದರು. ಧರಣಿ ಸತ್ಯಾಗ್ರಹಕ್ಕೂ ಮುನ್ನ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಕುಂದಾಪುರ ತಾ| ಸಮಿತಿ, ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ ಕುಂದಾಪುರ ತಾ|, ಕಾರ್ಮಿಕ ಸಂಘಟನೆಗಳು, ಕೃಷಿ ಕೂಲಿ ಕಾರ್ಮಿಕರ ಸಂಘಟನೆಗಳಿಂದ ವಿನಯ ನರ್ಸಿಂಗ್ ಹೋಂ ಬಳಿಯಿಂದ ಬಸ್ರೂರು ಮೂರು ಕೈ ಮೂಲಕ, ವಿನಾಯಕ ಚಿತ್ರಮಂದಿರವಾಗಿ ಶಾಸ್ತ್ರಿ ಸರ್ಕಲ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಳಿಕ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಧರಣಿ ಸತ್ಯಾಗ್ರಹ ನಡೆಯಿತು.

ಸಿಐಟಿಯು ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಮಹಾಬಲ ವಡೇರಹೋಬಳಿ, ಬಲ್ಕಿಸ್ ಬಾನು, ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಆರತಿ, ಕಾರ್ಯದರ್ಶಿ ಶೀಲಾವತಿ, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ್ ಬರೆಕಟ್ಟು, ಪ್ರ. ಕಾರ್ಯದರ್ಶಿ ರಾಜು ದೇವಾಡಿಗ, ಡಿವೈಎಫ್ಐ ಕಾರ್ಯದರ್ಶಿ ಗಣೇಶ್ ದಾಸ್, ಮುಖಂಡರಾದ ರಾಜಾ ಬಿಟಿಆರ್, ಕಿರಣ್, ರವಿ, ಚಂದ್ರಶೇಖರ್, ಆದಿವಾಸಿ ಸಂಘಟನೆಗಳ ಸಹ ಸಂಚಾಲಕ ಶ್ರೀಧರ ನಾಡ, ಕೃಷಿ ಕೂಲಿ ಕಾರ್ಮಿಕರ ಸಂಘಟನೆಯ ಕಾರ್ಯದರ್ಶಿ ನಾಗರತ್ನ ನಾಡ, ಮತ್ತಿತರರು ಉಪಸ್ಥಿತರಿದ್ದರು.
ಡಿವೈಎಫ್ಐನ ಅಧ್ಯಕ್ಷ ರಾಜೇಶ್ ವಡೇರಹೋಬಳಿ ಪ್ರಸ್ತಾವಿಸಿ ಸ್ವಾಗತಿಸಿದರು.


Spread the love